ADVERTISEMENT

IND vs SA T20 | ಕ್ರಿಕೆಟ್‌ನ ಮೂರು ಮಾದರಿಯಲ್ಲೂ ಬೂಮ್ರಾ ‘ಶತಕ’ ಸಾಧನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಡಿಸೆಂಬರ್ 2025, 3:05 IST
Last Updated 10 ಡಿಸೆಂಬರ್ 2025, 3:05 IST
   

ಕಟಕ್‌: ಭಾರತದ ಪ್ರಮುಖ ವೇಗದ ಬೌಲರ್‌ ಜಸ್‌ಪ್ರೀತ್‌ ಬೂಮ್ರಾ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಎರಡು ವಿಕೆಟ್‌ ಕಬಳಿಸುವ ಮೂಲಕ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.

ಕಟಕ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ–20 ಸರಣಿಯ ಮೊದಲ ಪಂದ್ಯದಲ್ಲಿ ಬೂಮ್ರಾ ಈ ದಾಖಲೆ ಬರೆದರು. ಪಂದ್ಯದಲ್ಲಿ ಅವರು 3 ಓವರ್‌ಗಳಲ್ಲಿ 17 ರನ್‌ ನೀಡಿ, ಎರಡು ವಿಕೆಟ್‌ ಕಬಳಿಸಿದರು.

ಹರಿಣಗಳ ವಿರುದ್ಧದ ಮೊದಲ ಪಂದ್ಯದಲ್ಲಿ ಬ್ರೇವಿಸ್ ಅವರ ವಿಕೆಟ್‌ ಪಡೆಯುವ ಮೂಲಕ ಟಿ–20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ವಿಕೆಟ್‌ ಪಡೆದ ಸಾಧನೆ ಮಾಡಿದರು.

ADVERTISEMENT

ಟಿ–20ಯಲ್ಲಿ ನೂರು ವಿಕೆಟ್‌

ಬೂಮ್ರಾ ಅವರು ಟೀಂ ಇಂಡಿಯಾ ಪರ ಟಿ–20ಯಲ್ಲಿ 100 ವಿಕೆಟ್‌ ಕಬಳಿಸಿದರು. ಈ ಸಾಧನೆ ಮಾಡಿದ ಭಾರತದ ಎರಡನೇ ಆಟಗಾರರಾಗಿದ್ದಾರೆ. ಅರ್ಷದೀಪ್ ಸಿಂಗ್ ಅವರು ಟಿ–20ಯಲ್ಲಿ 100 ವಿಕೆಟ್‌ ಪಡೆದ ಮೊದಲ ಭಾರತೀಯ ಬೌಲರ್‌ ಆಗಿದ್ದಾರೆ. ಅರ್ಷದೀಪ್ ಒಟ್ಟು 107 ವಿಕೆಟ್‌ ಪಡೆದಿದ್ದಾರೆ.

ಮೂರು ಮಾದರಿಯಲ್ಲೂ ‘ಶತಕ’ ಸಾಧನೆ

ಟಿ–20 ಕ್ರಿಕೆಟ್‌ನಲ್ಲಿ ಜಸ್‌ಪ್ರೀತ್‌ ಬೂಮ್ರಾ 100 ವಿಕೆಟ್‌ ಪಡೆಯುವ ಮೂಲಕ ಎಲ್ಲಾ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ವಿಕೆಟ್‌ ಪಡೆದ ಮೊದಲ ಭಾರತೀಯ ಆಟಗಾರ ಎನ್ನುವ ದಾಖಲೆ ಬರೆದರು.

ಟೀಂ ಇಂಡಿಯಾ ಪರ 52 ಟೆಸ್ಟ್‌ ಪಂದ್ಯಗಳಲ್ಲಿ 234 ವಿಕೆಟ್‌, 89 ಏಕದಿನ ಪಂದ್ಯಗಳಲ್ಲಿ 149 ವಿಕೆಟ್‌ ಕಬಳಿಸಿರುವ ಬೂಮ್ರಾ, ಟಿ–20 ಕ್ರಿಕೆಟ್‌ನಲ್ಲಿ 81 ಪಂದ್ಯಗಳಿಂದ 101 ವಿಕೆಟ್‌ ಪಡೆದಿದ್ದಾರೆ.

ಬೌಲಿಂಗ್‌ನಲ್ಲಿ ‘ಶತಕ’ ಬಾರಿಸಿದ ಆಟಗಾರರಿವರು

ಜಸ್‌ಪ್ರೀತ್‌ ಬೂಮ್ರಾ ಟಿ–20 ಕ್ರಿಕೆಟ್‌ನಲ್ಲಿ ನೂರು ವಿಕೆಟ್‌ ಪಡೆಯುವ ಮೂಲಕ ಕ್ರಿಕೆಟ್‌ ಇತಿಹಾಸದಲ್ಲೇ ಮೂರು ಮಾದರಿಗಳಲ್ಲಿ 100ಕ್ಕೂ ಹೆಚ್ಚು ವಿಕೆಟ್ ಸಾಧನೆ ಮಾಡಿದ ಐದನೇ ಬೌಲರ್ ಎನಿಸಿದ್ದಾರೆ.

ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ, ಬಾಂಗ್ಲಾದ ಶಕಿಬ್ ಅಲ್ ಹಸನ್, ನ್ಯೂಜಿಲೆಂಡ್‌ನ ಟಿಮ್ ಸೌಥಿ ಹಾಗೂ ಪಾಕಿಸ್ತಾದ ಶಾಹೀನ್ ಶಾ ಅಫ್ರಿದಿ ಅವರು ಈ ಮೊದಲು ಮೂರು ಮಾದರಿಯ ಕ್ರಿಕೆಟ್‌ನಲ್ಲಿ 100 ವಿಕೆಟ್‌ ಪಡೆದಿದ್ದರು.

ಬೌಲರ್‌ (ದೇಶ)ಟೆಸ್ಟ್‌ ವಿಕೆಟ್‌ಏಕದಿನ ವಿಕೆಟ್‌ಟಿ 20 ವಿಕೆಟ್
ಲಸಿತ್ ಮಾಲಿಂಗ (ಶ್ರೀಲಂಕಾ)101338107
ಶಕಿಬ್ ಅಲ್ ಹಸನ್ (ಬಾಂಗ್ಲಾದೇಶ)246317149
ಟಿಮ್ ಸೌಥಿ (ನ್ಯೂಜಿಲೆಂಡ್‌)391221164
ಶಾಹೀನ್ ಶಾ ಅಫ್ರಿದಿ(ಪಾಕಿಸ್ತಾನ)121135126
ಜಸ್‌ಪ್ರೀತ್‌ ಬೂಮ್ರಾ (ಭಾರತ) 234149101

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.