ADVERTISEMENT

ವಿಲ್‌ ಜ್ಯಾಕ್ಸ್‌ ಆಲ್‌ರೌಂಡ್‌ ಆಟ: ಸೂಪರ್‌ 8ರ ಘಟ್ಟಕ್ಕೆ ಇಂಗ್ಲೆಂಡ್‌ ತಂಡ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 16:29 IST
Last Updated 16 ಫೆಬ್ರುವರಿ 2026, 16:29 IST
ಇಂಗ್ಲೆಂಡ್ ತಂಡದ ವಿಲ್‌ ಜ್ಯಾಕ್ಸ್‌ –ಪಿಟಿಐ ಚಿತ್ರ
ಇಂಗ್ಲೆಂಡ್ ತಂಡದ ವಿಲ್‌ ಜ್ಯಾಕ್ಸ್‌ –ಪಿಟಿಐ ಚಿತ್ರ   

ಕೋಲ್ಕತ್ತ: ವಿಲ್‌ ಜ್ಯಾಕ್ಸ್‌ ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಇಂಗ್ಲೆಂಡ್‌ ತಂಡವು ಟಿ20 ವಿಶ್ವಕಪ್‌ನ ಹಾಲಿ ಆವೃತ್ತಿಯಲ್ಲಿ ಮೂರನೇ ಜಯ ದಾಖಲಿಸಿ ಸೂಪರ್‌ 8ರ ಘಟ್ಟಕ್ಕೆ ಲಗ್ಗೆಯಿಟ್ಟಿತು.

ಈಡನ್‌ ಗಾರ್ಡನ್‌ನಲ್ಲಿ ನಡೆದ ಸಿ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್‌ ಇಂಗ್ಲೆಂಡ್‌ ತಂಡವು 24 ರನ್‌ಗಳಿಂದ ಇಟಲಿ ತಂಡವನ್ನು ಮಣಿಸಿತು. ಇದಕ್ಕೂ ಮುನ್ನ ನೇಪಾಳ ತಂಡಕ್ಕೆ ಆಘಾತ ನೀಡಿದ್ದ ಅನನುಭವಿ ಇಟಲಿ ತಂಡದ ಸಾಂಘಿಕ ಹೋರಾಟ ಗಮನ ಸೆಳೆಯಿತು.

ಇದೇ ಗುಂಪಿನಲ್ಲಿರುವ ವೆಸ್ಟ್‌ ಇಂಡೀಸ್‌ ತಂಡವು ಹ್ಯಾಟ್ರಿಕ್‌ ಗೆಲುವಿನೊಂದಿಗೆ ಈ ಮೊದಲೇ ಸೂಪರ್ 8ರ ಘಟ್ಟಕ್ಕೆ ಮುನ್ನಡೆದಿದೆ. ಪ್ರತಿ ಗುಂಪಿನಿಂದ ಎರಡು ತಂಡಗಳಿಗೆ ಮಾತ್ರ ಸೂಪರ್‌ 8ರ ಟಿಕೆಟ್‌ ಲಭಿಸುವುದರಿಂದ ಸ್ಕಾಟ್ಲೆಂಡ್‌ (2), ಇಟಲಿ (2) ಮತ್ತು ನೇಪಾಳ (0) ತಂಡಗಳು ಈ ಹಂತದಲ್ಲೇ ಹೊರಬಿದ್ದವು.

ADVERTISEMENT

ಕೆಳಕ್ರಮಾಂಕದ ಬ್ಯಾಟರ್‌ ಜ್ಯಾಕ್ಸ್‌ (ಔಟಾಗದೇ 53;22ಎ, 4x3, 6x4) ಅವರ ಮಿಂಚಿನ ಅರ್ಧಶತಕದ ಬಲದಿಂದ ಇಂಗ್ಲೆಂಡ್‌ ತಂಡವು 7 ವಿಕೆಟ್‌ಗೆ 202 ರನ್‌ಗಳ ಬೃಹತ್‌ ಮೊತ್ತ ಗಳಿಸಿತು. ಆರಂಭಿಕ ಆಟಗಾರ ಫಿಲ್‌ ಸಾಲ್ಟ್‌ (28), ಟಾಮ್ ಬ್ಯಾಂಟನ್ (30), ಸ್ಯಾಮ್‌ ಕರನ್‌ (25) ಉಪಯುಕ್ತ ಕೊಡುಗೆ ನೀಡಿದರು. 

ಕಠಿಣ ಗುರಿಯನ್ನು ಬೆನ್ನಟ್ಟಿದ ಇಟಲಿ ತಂಡವು ಮೊದಲ ಓವರ್‌ನಲ್ಲೇ ಎರಡು ವಿಕೆಟ್‌ ಕಳೆದುಕೊಂಡಿತು. ನಂತರದಲ್ಲಿ ಜಸ್ಟಿನ್ ಮೊಸ್ಕಾ (43;34ಎ) ಮತ್ತು ಬೆನ್ ಮಾನೆಂಟಿ (60;25ಎ, 4x4, 6x6) ಅವರು ಬಲ ತುಂಬುವ ಪ್ರಯತ್ನ ಮಾಡಿದರು.

ಈ ಜೋಡಿ ನಾಲ್ಕನೇ ವಿಕೆಟ್‌ಗೆ ಮಿಂಚಿನ 92 (48ಎ) ರನ್‌ ಪೇರಿಸಿತು. ಮಾನೆಂಟಿ ಅವರ ವಿಕೆಟ್‌ ಪಡೆದ  ಜ್ಯಾಕ್ಸ್‌ ಜೊತೆಯಾಟವನ್ನು ಮುರಿದರು. ನಂತರ ಬಂದ ಗ್ರಾಂಟ್ ಸ್ಟೀವರ್ಟ್ (45;23ಎ, 4x2, 6x5) ಅವರು ಅಬ್ಬರಿಸಿದರೂ ಗೆಲುವಿಗೆ ಸಾಕಾಗಲಿಲ್ಲ. 20 ಓವರ್‌ಗಳಲ್ಲಿ 178 ರನ್‌ ಗಳಿಸಿ ಹೋರಾಟ ಮುಗಿಸಿತು. ಜೆಮಿ ಓವರ್ಟನ್ ಮತ್ತು ಸ್ಯಾಮ್‌ ಕರನ್‌ ತಲಾ ಮೂರು ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 202 (ಫಿಲ್‌ ಸಾಲ್ಟ್‌ 28, ಟಾಮ್ ಬ್ಯಾಂಟನ್ 30, ಸ್ಯಾಮ್‌ ಕರಣ್‌ 25, ವಿಲ್‌ ಜ್ಯಾಕ್ಸ್‌ ಔಟಾಗದೇ 53; ಗ್ರಾಂಟ್ ಸ್ಟೀವರ್ಟ್ 51ಕ್ಕೆ 2, ಕ್ರಿಶನ್ ಕಲುಗಮಗೆ 41ಕ್ಕೆ 2). ಇಟಲಿ: 20 ಓವರ್‌ಗಳಲ್ಲಿ 178 (ಜಸ್ಟಿನ್ ಮೊಸ್ಕಾ 43, ಬೆನ್ ಮಾನೆಂಟಿ 60, ಗ್ರಾಂಟ್ ಸ್ಟೀವರ್ಟ್ 45; ಜೋಫ್ರಾ ಅರ್ಚರ್‌ 35ಕ್ಕೆ 2, ಜೆಮಿ ಓವರ್ಟನ್ 18ಕ್ಕೆ 3, ಸ್ಯಾಮ್‌ ಕರಣ್‌ 22ಕ್ಕೆ 3). ಪಂದ್ಯದ ಆಟಗಾರ: ವಿಲ್‌ ಜ್ಯಾಕ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.