ADVERTISEMENT

IND vs AUS: ಮೊದಲು ಮಳೆ ಬಳಿಕ ಭಾರತವನ್ನು ಕಾಡಿದ ಪುಕೊವಸ್ಕಿ, ಲಾಬುಷೇನ್

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 8:08 IST
Last Updated 7 ಜನವರಿ 2021, 8:08 IST
ಚೊಚ್ಚಲ ಪಂದ್ಯ ಆಡುತ್ತಿರುವ ವಿಲ್ ಪುಕೊವಸ್ಕಿ ವಿಕೆಟ್ ಪಡೆದ ಭಾರತದ ಡೆಬ್ಯು ಬೌಲರ್ ನವದೀಪ್ ಸೈನಿ
ಚೊಚ್ಚಲ ಪಂದ್ಯ ಆಡುತ್ತಿರುವ ವಿಲ್ ಪುಕೊವಸ್ಕಿ ವಿಕೆಟ್ ಪಡೆದ ಭಾರತದ ಡೆಬ್ಯು ಬೌಲರ್ ನವದೀಪ್ ಸೈನಿ   

ಸಿಡ್ನಿ: ಪ್ರವಾಸಿ ಭಾರತ ವಿರುದ್ಧ ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮಳೆ ಬಾಧಿತ ಮೂರನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ, ಪದಾರ್ಪಣಾ ವೀರ ವಿಲ್ ಪುಕೊವಸ್ಕಿ (62) ಹಾಗೂ ಮಾರ್ನಸ್ ಲಾಬುಷೇನ್ (67*) ಆಕರ್ಷಕ ಅರ್ಧಶತಕಗಳ ನೆರವಿನಿಂದ ಮೊದಲ ದಿನದಾಟದ ಅಂತ್ಯಕ್ಕೆ 54 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿದೆ.

ಮೊದಲೆರಡು ಪಂದ್ಯಗಳಲ್ಲಿ ಸಮಬಲದ ಫಲಿತಾಂಶ ಕಂಡುಬಂದ ಹಿನ್ನೆಲೆಯಲ್ಲಿ ಈ ಪಂದ್ಯಕ್ಕೆ ಹೆಚ್ಚಿನ ರೋಚಕತೆ ಮನೆ ಮಾಡಿತ್ತು. ಇದರಂತೆ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಟಿಮ್ ಪೇನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.

ಆದರೆ ಪದೇ ಪದೇ ಸುರಿದ ಮಳೆಯು ಅಡಚಣೆಯಾಗಿ ಪರಿಣಮಿಸಿತ್ತು. ಗಾಯದಿಂದ ಚೇತರಿಸಿಕೊಂಡಿರುವ ಡೇವಿಡ್ ವಾರ್ನರ್ (5) ಪುನರಾಗಮನಮಾಡಿದ್ದರು. ಅವರನ್ನು ಹೊರದಬ್ಬಿದ ಬಲಗೈ ವೇಗಿ ಮೊಹಮ್ಮದ್ ಸಿರಾಜ್, ಎದುರಾಳಿಗಳಿಗೆ ಆರಂಭಿಕ ಆಘಾತವನ್ನು ನೀಡಿದರು.

ADVERTISEMENT

ಈ ಹಂತದಲ್ಲಿ ಮಳೆ ಸುರಿದ ಪರಿಣಾಮ ಅಡಚಣೆ ಎದುರಾಗಿತ್ತು. ಈ ವೇಳೆ ಆಸೀಸ್ 7.1 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 21 ರನ್ ಗಳಿಸಿತ್ತು. ಬಳಿಕ ಊಟದ ವಿರಾಮವನ್ನು ಬೇಗನೇ ತೆಗೆದುಕೊಳ್ಳಲಾಯಿತು.

ತದಾ ಬಳಿಕ ಭಾರತದ ಯಾವುದೇ ಯೋಜನೆ ಫಲಿಸಲಿಲ್ಲ. ಚೊಚ್ಚಲ ಪಂದ್ಯದಲ್ಲೇ ಆಕರ್ಷಕ ಅರ್ಧಶತಕ ಸಾಧನೆ ಮಾಡಿದ ವಿಲ್ ಪುಕೊವಸ್ಕಿ ಭಾರತವನ್ನು ಮಾರಕವಾಗಿ ಕಾಡಿದರು. ಇವರಿಗೆ ಇನ್ ಫಾರ್ಮ್ ಬ್ಯಾಟ್ಸ್‌ಮನ್ ಮಾರ್ನಸ್ ಲಾಬುಷೇನ್ ಸಾಥ್ ನೀಡಿದರು.

ಇವರಿಬ್ಬರು ದ್ವಿತೀಯ ವಿಕೆಟ್‌ಗೆ ಶತಕದ ಜೊತೆಯಾಟ ನೀಡಿದರು. ಕೊನೆಗೂ ಭಾರತದ ಪದಾರ್ಪಣಾ ವೇಗಿ ನವದೀಪ್ ಸೈನಿ ಅವರ ದಾಳಿಯಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿದ ಪುಕೊವಸ್ಕಿ ಪೆವಿಲಿಯನ್‌ಗೆ ಮರಳಿದರು. 110 ಎಸೆತಗಳನ್ನು ಎದುರಿಸಿದ ಪುಕೊವಸ್ಕಿ ನಾಲ್ಕು ಬೌಂಡರಿಗಳಿಂದ 62 ರನ್ ಗಳಿಸಿದರು.

ಟೀ ವಿರಾಮದ ಬಳಿಕವೂ ಸಮಯೋಚಿತ ಇನ್ನಿಂಗ್ಸ್ ಕಟ್ಟಿದ ಲಾಬುಷೇನ್ ಸಹ ಫಿಫ್ಟಿ ಸಾಧನೆ ಮಾಡಿದರು. ಇವರಿಗೆ ಸ್ಟೀವನ್ ಸ್ಮಿತ್ ಉತ್ತಮ ಸಾಥ್ ನೀಡಿದರು. ಕಳೆದೆರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿರುವ ಸ್ಮಿತ್, ಈ ಪಂದ್ಯದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಗಮನ ಸೆಳೆದರು.

ದಿನದಂತ್ಯಕ್ಕೆ ಆಸೀಸ್ 55 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿದೆ. 149 ಎಸೆತಗಳನ್ನು ಎದುರಿಸಿರುವ ಲಾಬುಷೇನ್ ಎಂಟು ಬೌಂಡರಿಗಳಿಂದ 67 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರಿಗೆ ಸಾಥ್ ನೀಡುತ್ತಿರುವ ಸ್ಮಿತ್, 64 ಎಸೆತಗಳಲ್ಲಿ ಐದು ಬೌಂಡರಿ ನೆರವಿನಿಂದ 31 ರನ್ ಗಳಿಸಿ ಕ್ರೀಸಿನಲ್ಲಿದ್ದಾರೆ.

ಅಮೂಲ್ಯ ಕ್ಯಾಚ್‌ಗಳನ್ನು ಕೈಚೆಲ್ಲಿರುವುದು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿತ್ತು. ಭಾರತದ ಪರ ಮೊಹಮ್ಮದ್ ಸಿರಾಜ್ ಹಾಗೂ ನವದೀಪ್ ಸೈನಿ ತಲಾ ಒಂದು ವಿಕೆಟ್ ಹಂಚಿದರು.

ಸೈನಿ ಡೆಬ್ಯು, ರೋಹಿತ್ ಆರಂಭಿಕ...
ಭಾರತ ತಂಡದಲ್ಲಿ ಯುವ ವೇಗದ ಬೌಲರ್ ನವದೀಪ್ ಸೈನಿ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ. ಅತ್ತ ಉಪ ನಾಯಕ ಸ್ಥಾನಕ್ಕೆ ಬಡ್ತಿ ಪಡೆದಿರುವ ರೋಹಿತ್ ಶರ್ಮಾ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದಾರೆ. ಇವರಿಗೆ ಕರ್ನಾಟಕದ ಮಯಂಕ್ ಅಗರವಾಲ್ ಸ್ಥಾನ ಬಿಟ್ಟುಕೊಟ್ಟಿದ್ದಾರೆ.

ಆಡುವ ಬಳಗ ಇಂತಿದೆ:

ಭಾರತ: ಅಜಿಂಕ್ಯ ರಹಾನೆ (ನಾಯಕ), ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ಹನುಮವಿಹಾರಿ, ರಿಷಭ್ ಪಂತ್ (ವಿಕೆಟ್‌ಕೀಪರ್), ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್, ಜಸ್‌ಪ್ರೀತ್ ಬೂಮ್ರಾ, ನವದೀಪ್ ಸೈನಿ.

ಆಸ್ಟ್ರೇಲಿಯಾ: ಟೀಮ್ ಪೇನ್ (ನಾಯಕ–ವಿಕೆಟ್‌ಕೀಪರ್), ಡೇವಿಡ್ ವಾರ್ನರ್, ಮ್ಯಾಥ್ಯೂ ವೇಡ್, ವಿಲ್ ಪುಕೊವಸ್ಕಿ, ಮಾರ್ನಸ್ ಲಾಬುಷೇನ್, ಸ್ಟೀವ್ ಸ್ಮಿತ್, ಕ್ಯಾಮರಾನ್ ಗ್ರೀನ್, ನೇಥನ್ ಲಯನ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.