ADVERTISEMENT

ನಾಯಕತ್ವ ತ್ಯಜಿಸಿದ ಕೊಹ್ಲಿ 2016ರ ಲಯಕ್ಕೆ ಮರಳಲಿದ್ದಾರೆ: ಗವಾಸ್ಕರ್

ಪಿಟಿಐ
Published 26 ಮಾರ್ಚ್ 2022, 11:20 IST
Last Updated 26 ಮಾರ್ಚ್ 2022, 11:20 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ಬದಲಾವಣೆಯು ವಿರಾಟ್ ಕೊಹ್ಲಿ ಪಾಲಿಗೆ ಉತ್ತಮವಾಗಿ ಪರಿಣಮಿಸಲಿದೆ ಎಂದು ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ ಇಂಡಿಯನ್ ಪ್ರೀಮಿಯರ್ ಲೀಗ್ 2016ರ ಆವೃತ್ತಿಯಂತೆ 900ಕ್ಕೂ ಹೆಚ್ಚು ರನ್ ಗಳಿಸಲು ವಿರಾಟ್‌ಗೆ ಸಾಧ್ಯವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಭಾನುವಾರ ಮುಂಬೈನ ಡಿ.ವೈ. ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಆರ್‌ಸಿಬಿ ತಂಡವು ಪಂಜಾಬ್ ಕಿಂಗ್ಸ್ ಸವಾಲನ್ನು ಎದುರಿಸಲಿದೆ. ಈ ಹಿನ್ನೆಲೆಯಲ್ಲಿ ಎಲ್ಲರ ಗಮನ ಕೊಹ್ಲಿ ಮೇಲೆ ನೆಟ್ಟಿದೆ.

ನೀವು ನಾಯಕರಾಗಿದ್ದಾಗ, ಇತರೆ 10 ಆಟಗಾರರು ಹಾಗೂ ತಂಡದ ಬಗ್ಗೆ ಯೋಚಿಸುತ್ತೀರಿ. ತಂಡದ ಆಟಗಾರರು ಚೆನ್ನಾಗಿ ಆಡದಿದ್ದಾಗ ಅವರ ಫಾರ್ಮ್ ಬಗ್ಗೆ ಚಿಂತೆ ಕಾಡುತ್ತದೆ. ಆದರೆ ಈ ಬಾರಿ 2016ರ ಕೊಹ್ಲಿಯನ್ನು ಕಾಣಬಹುದಾಗಿದೆ ಎಂದು ಹೇಳಿದ್ದಾರೆ.

2016ರಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ, 81.08ರ ಸರಾಸರಿಯಲ್ಲಿ ದಾಖಲೆಯ 973 ರನ್ ಪೇರಿಸಿದ್ದರು. ಇದು ನಾಲ್ಕು ಶತಕಗಳನ್ನು ಒಳಗೊಂಡಿತ್ತು.

2012ರಲ್ಲಿ ಆರ್‌ಸಿಬಿ ನಾಯಕರಾಗಿ ಕೊಹ್ಲಿ ನೇಮಕಗೊಂಡಿದ್ದರು. ಆದರೆ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿರಲಿಲ್ಲ. ಈಗ ಕೊಹ್ಲಿ ಅವರಿಂದ ತೆರವಾಗಿರುವ ನಾಯಕ ಸ್ಥಾನಕ್ಕೆ ಫಫ್ ಡು ಪ್ಲೆಸಿ ಅವರನ್ನು ನೇಮಕಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.