ಕೊಲಂಬೊ: ದಕ್ಷಿಣ ಆಫ್ರಿಕಾ ತಂಡವು ಶುಕ್ರವಾರ ಮಳೆಯಿಂದ ಅಡಚಣೆ ಉಂಟಾದ ಮಹಿಳಾ ಏಕದಿನ ವಿಶ್ವಕಪ್ ಪಂದ್ಯವನ್ನು ಡಕ್ವರ್ಥ್ ಲೂಯಿಸ್ ನಿಯಮದನ್ವಯ (ಡಿಎಲ್‌ಎಸ್) ಆತಿಥೇಯ ಶ್ರೀಲಂಕಾ ತಂಡವನ್ನು 10 ವಿಕೆಟ್‌ಗಳಿಂದ ಸುಲಭವಾಗಿ ಮಣಿಸಿತು.
ಪ್ರೇಮದಾಸ ಕ್ರೀಡಾಂಗಣದಲ್ಲಿ ಮಳೆಯಿಂದಾಗಿ ಸುಮಾರು ಐದು ಗಂಟೆ ಆಟ ಸಾಧ್ಯವಾಗಲಿಲ್ಲ. ಹೀಗಾಗಿ, ಪಂದ್ಯವನ್ನು 20–20 ಓವರುಗಳಿಗೆ ಸೀಮಿತಗೊಳಿಸಲಾಯಿತು.
ಎಡಗೈ ಸ್ಪಿನ್ನರ್ ನೊನ್‌ಕುಲುಲೆಕೊ ಮ್ಲಾಬಾ (30ಕ್ಕೆ3) ಅವರ ಉತ್ತಮ ಬೌಲಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಶುಕ್ರವಾರ ಆತಿಥೇಯ ಶ್ರೀಲಂಕಾವನ್ನು 7 ವಿಕೆಟ್‌ಗೆ 105 ರನ್‌ಗಳಿಗೆ ಸೀಮಿತಗೊಳಿಸಿತು. ಡಕ್‌ವರ್ತ್ ಲೂಯಿಸ್ ನಿಯಮದಡಿ ಎದುರಾಳಿಗೆ ಗೆಲುವಿನ ಗುರಿಯನ್ನು 121 ರನ್‌ಗಳಿಗೆ ಪರಿಷ್ಕರಿಸಲಾಯಿತು.
ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು ಇನ್ನೂ 31 ಎಸೆತಗಳು ಬಾಕಿ ಇರುವಂತೆ ವಿಕೆಟ್ ನಷ್ಟವಿಲ್ಲದೆ 125 ರನ್ ಗಳಿಸಿ ಗೆಲುವು ಸಾಧಿಸಿತು. ನಾಯಕಿ ಲಾರಾ ವೋಲ್ವಾರ್ಡ್ (ಔಟಾಗದೇ 60;47ಎ) ಮತ್ತು ಟಾಜ್ಮಿನ್ ಬ್ರಿಟ್ಸ್ (ಔಟಾಗದೇ 55;42ಎ) ಅವರು ಆಕರ್ಷಕ ಅರ್ಧಶತಕ ದಾಖಲಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಶ್ರೀಲಂಕಾ 12 ಓವರುಗಳಲ್ಲಿ 2 ವಿಕೆಟ್‌ಗೆ ರನ್ ಗಳಿಸಿದ್ದಾಗ ಮಳೆ ಆರಂಭವಾಯಿತು. ಲಂಕಾ 10 ಓವರುಗಳಲ್ಲಿ 37 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡಿತ್ತು. ಮುಂದಿನ ಎರಡು ಓವರ್ ಆಗುವಷ್ಟರಲ್ಲಿ ಮಳೆ ಶುರುವಾಗಿ ಆಟಗಾರ್ತಿಯರು ಪೆವಿಲಿಯನ್ ಸೇರಿಕೊಂಡರು.
ಆರಂಭ ಆಟಗಾರ್ತಿ ವಿಶ್ಮಿ ಗುಣರತ್ನೆ 33 ಎಸೆತಗಳಲ್ಲಿ 6 ಬೌಂಡರಿಗಳಿದ್ದ 34 ರನ್ ಗಳಿಸಿದರು. ಮಳೆ ವಿರಾಮದ ನಂತರ ಎಂಟು ಓವರುಗಳಲ್ಲಿ ಲಂಕಾದ ಆಟಗಾರ್ತಿಯರು 63 ರನ್ ಗಳಿಸಿದರು.
ಸ್ಕೋರುಗಳು: ಶ್ರೀಲಂಕಾ: 20 ಓವರುಗಳಲ್ಲಿ 7 ವಿಕೆಟ್‌ಗೆ 105 (ವಿಶ್ಮಿ ಗುಣರತ್ನೆ 34, ಕವಿಶಾ ದಿಲಾರಿ 14, ನಿಲಾಕ್ಷಿಕಾ ಸಿಲ್ವ 18; ಮಸಬಾತಾ ಕ್ಲಾಸ್ 18ಕ್ಕೆ2, ಎನ್.ಮ್ಲಾಬಾ 30ಕ್ಕೆ3) ದಕ್ಷಿಣ ಆಫ್ರಿಕಾ (ಗುರಿ 121): 14.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 125 (ಲಾರಾ ವೋಲ್ವಾರ್ಡ್ ಔಟಾಗದೇ 60, ಟಾಜ್ಮಿನ್ ಬ್ರಿಟ್ಸ್ ಔಟಾಗದೇ 55). ಪಂದ್ಯದ ಆಟಗಾರ್ತಿ: ಲಾರಾ ವೋಲ್ವಾರ್ಡ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.