ADVERTISEMENT

ಸಣ್ಣ ಪಿಚ್, ಪುಟ್ಟ ಚೆಂಡಿನ ಬಳಕೆಯಿಂದ ಆಕರ್ಷಣೆ ಹೆಚ್ಚು

ಭಾರತದ ಜೆಮಿಮಾ ರಾಡ್ರಿಗಸ್, ಸೋಫಿ ಡಿವೈನ್ ಸಲಹೆ

ಪಿಟಿಐ
Published 10 ಜೂನ್ 2020, 19:30 IST
Last Updated 10 ಜೂನ್ 2020, 19:30 IST
ಸೋಫಿ ಡಿವೈನ್
ಸೋಫಿ ಡಿವೈನ್   

ದುಬೈ: ಸದ್ಯ ಕ್ರಿಕೆಟ್ ಆಡಲು ಬಳಸುತ್ತಿರುವುದಕ್ಕಿಂತ ಚಿಕ್ಕ ಪಿಚ್‌ ಮತ್ತು ತುಸು ಸಣ್ಣದಾದ ಚೆಂಡು ಬಳಸುವುದರಿಂದ ಮಹಿಳಾ ಕ್ರಿಕೆಟ್‌ಗೆ ಹೆಚ್ಚಿನ ಜನಪ್ರಿಯತೆ ಹೆಚ್ಚಿಸಬಹುದು ಎಂದು ಭಾರತದ ಜೆಮಿಮಾ ರಾಡ್ರಿಗಸ್ ಮತ್ತು ನ್ಯೂಜಿಲೆಂಡ್ ತಂಡದ ನಾಯಕಿ ಸೋಫಿ ಡಿವೈನ್ ಹೇಳಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ ಮತ್ತು ವೀಕ್ಷಕ ವಿವರಣೆಗಾರ್ತಿ ಮೆಲ್ ಜೋನ್ಸ್‌ ನಡೆಸಿದ ಸಂವಾದಲ್ಲಿ ಇಬ್ಬರೂ ಆಟಗಾರ್ತಿಯರು ಭಾಗವಹಿಸಿದ್ದರು.

‘ನಾವು ಸಾಂಪ್ರದಾಯಿಕ ಮಾದರಿಗಳನ್ನೇ ಅವಲಂಬಿಸುವುದರಿಂದ ಅಭಿವೃದ್ಧಿ ಕುಂಠಿತವಾಗುತ್ತದೆ. ಇದರಿಂದಾಗಿ ಹೊಸದಾಗಿ ಕ್ರಿಕೆಟ್‌ ಆಡಲು ಬರುವವರು ಕಡಿಮೆಯಾಗುತ್ತಾರೆ. ಮಕ್ಕಳು ಈ ಆಟದಿಂದ ವಂಚಿತರಾಗುತ್ತಾರೆ. ಹೊಸ ವಿಧಾನಗಳನ್ನು ಕಂಡುಹಿಡಿದು ಅಳವಡಿಸುವುದರಿಂದ ಮಹಿಳಾ ಕ್ರಿಕೆಟ್‌ಗೆ ಪ್ರೋತ್ಸಾಹ ನೀಡಲು ಸಾಧ್ಯವಿದೆ. ಒಂದಷ್ಟು ಪ್ರಯೋಗಗಳನ್ನು ಮಾಡುವುದು ಯಾವಾಗಲೂ ಉತ್ತಮ ಬೆಳವಣಿಗೆಯಾಗುತ್ತದೆ. ಸಣ್ಣ ಚೆಂಡಿನ ಬಳಕೆಯನ್ನು ನಾನು ಮೊದಲಿನಿಂದಲೂ ಸಮರ್ಥಿಸಿದ್ದೇನೆ. ಆದರೆ ಪಿಚ್ ಅನ್ನು ಯಥಾಸ್ಥಿತಿ ಕಾಪಾಡಿಕೊಂಡರೆ ಪರವಾಗಿಲ್ಲ. ಅದರಿಂದಾಗಿ ಮಧ್ಯಮವೇಗಿಗಳು ಹೆಚ್ಚು ವೇಗವಾಗಿ ಬೌಲಿಂಗ್ ಮಾಡಬಹುದು. ಸ್ಪಿನ್ನರ್‌ಗಳು ಚೆಂಡನ್ನು ಹೆಚ್ಚು ತಿರುಗಿಸಬಲ್ಲರು’ ಎಂದು ಸೋಫಿ ಹೇಳಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಭಾರತದ ಆಟಗಾರ್ತಿ ಜೆಮಿಮಾ, ‘ಪುರುಷ ಮತ್ತು ಮಹಿಳಾ ಕ್ರಿಕೆಟ್‌ಗಳನ್ನು ಹೋಲಿಕೆ ಮಾಡಬಾರದು. ಇವೆರಡರ ನಡುವೆ ಕೆಲವು ವ್ಯತ್ಯಾಸಗಳು ಇವೆಯೆಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು. ಆದರೆ ನಾವು ಕಡಿಮೆ ಅಳತೆಯ ಪಿಚ್ ನಲ್ಲಿ ಪ್ರಯೋಗ ಮಾಡಬೇಕು. ಅದರಿಂದ ಆಟವು ಹೆಚ್ಚು ಅಕರ್ಷಕವಾದರೆ ಮುಂದುವರಿಯಬಹುದು. ಪಂದ್ಯಗಳು ರೋಚಕವಾಗಿದ್ದರೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಇದಕ್ಕೆ ತಾವು ಮುಕ್ತವಾಗಿರಬೇಕು. ಇದೊಂದು ಒಳ್ಳೆಯ ಯೋಚನೆ’ ಎಂದಿದ್ದಾರೆ.

‘2022ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಮಹಿಳಾ ಕ್ರಿಕೆಟ್ ಸೇರ್ಪಡೆಯಾಗಿದೆ. ಆ ಕೂಟದಲ್ಲಿ ಪದಕ ಸಾಧನೆ ಮಾಡುವ ಕನಸಿದೆ. ಬಹುಶಿಸ್ತೀಯ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವುದು ಬಹುದಿನಗಳ ಗುರಿ’ ಎಂದು ಜೆಮಿಮಾ ಹೇಳಿದ್ದಾರೆ.

‘ಅಂತಹದೊಂದು ಕ್ರೀಡಾ ಗ್ರಾಮದಲ್ಲಿ ಇರುವುದೇ ಒಂದು ಉತ್ತಮ ಅನುಭವ. ಅದಕ್ಕಾಗಿ ನಾನು ಉತ್ಸುಕಳಾಗಿದ್ದೇನೆ’ ಎಂದು ಸೋಫಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.