ADVERTISEMENT

ಮಹಿಳಾ ಏಷ್ಯಾಕಪ್ ಟಿ20 ಕ್ರಿಕೆಟ್: ಬಾಂಗ್ಲಾ ವಿರುದ್ಧ ಜಯ, ಸೆಮಿಫೈನಲ್‌ಗೆ ಭಾರತ

ಪಿಟಿಐ
Published 8 ಅಕ್ಟೋಬರ್ 2022, 13:03 IST
Last Updated 8 ಅಕ್ಟೋಬರ್ 2022, 13:03 IST
ಭಾರತದ ಶಫಾಲಿ ವರ್ಮಾ ಬ್ಯಾಟಿಂಗ್‌  –ಪಿಟಿಐ ಚಿತ್ರ
ಭಾರತದ ಶಫಾಲಿ ವರ್ಮಾ ಬ್ಯಾಟಿಂಗ್‌ –ಪಿಟಿಐ ಚಿತ್ರ   

ಸಿಲೆಟ್: ಲಯಕ್ಕೆ ಮರಳಿದ ಶಫಾಲಿ ವರ್ಮಾ ಆಲ್‌ರೌಂಡ್ ಆಟದ ಬಲದಿಂದ ಭಾರತ ತಂಡವು ಮಹಿಳೆಯರ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಬಾಂಗ್ಲಾ ವಿರುದ್ಧ ಜಯಿಸಿತು. ಇದರೊಂದಿಗೆ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು.

ಸಿಲೆಟ್ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು 59 ರನ್‌ಗಳಿಂದ ಜಯಿಸಿತು. ಒಟ್ಟು ಎಂಟು ಅಂಕ ಗಳಿಸಿರುವ ತಂಡವು ಪಾಯಿಂಟ್‌ ಪಟ್ಟಿಯ ಅಗ್ರಸ್ಥಾನದಲ್ಲಿದೆ. ಲೀಗ್ ಹಂತದಲ್ಲಿ ಇನ್ನೊಂದು ಪಂದ್ಯದಲ್ಲಿ ಭಾರತ ಆಡಬೇಕಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಹರ್ಮನ್‌ಪ್ರೀತ್ ಬಳಗಕ್ಕೆ ಶಫಾಲಿ (55; 44ಎ, 4X5, 6X2) ಹಾಗೂ ಸ್ಮೃತಿ (47; 38ಎ, 4X6) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 96 ರನ್‌ ಸೇರಿಸಿದರು. ಜಿಮಿಮಾ ರಾಡ್ರಿಗಸ್ ಅಜೇಯ 35 ರನ್‌ ಗಳಿಸಿದರು. ಇದರಿಂದಾಗಿ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 159 ರನ್ ಗಳಿಸಿತು.

ADVERTISEMENT

ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 100 ರನ್‌ ಗಳಿಸಿತು. ಭಾರತದ ದೀಪ್ತಿ ಶರ್ಮಾ ಹಾಗೂ ಶಫಾಲಿ ವರ್ಮಾ ತಲಾ ಎರಡು ವಿಕೆಟ್ ಗಳಿಸಿದರು. ಕಳೆದ ಕೆಲವು ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್ ಮಾಡಿದ್ದ ಶಫಾಲಿ ಇಲ್ಲಿ ಲಯಕ್ಕೆ ಮರಳಿದರು.

ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ಎದುರು ಸೋತಿತ್ತು.

ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 5ಕ್ಕೆ159 (ಶಫಾಲಿ ವರ್ಮಾ 55, ಸ್ಮೃತಿ ಮಂದಾನ 47, ಜೆಮಿಮಾ ರಾಡ್ರಿಗಸ್ ಔಟಾಗದೆ 35, ದೀಪ್ತಿ ಶರ್ಮಾ 10, ರುಮಾನ ಅಹಮದ್ 27ಕ್ಕೆ3) ಬಾಂಗ್ಲಾದೇಶ: 20 ಓವರ್‌ಗಳಲ್ಲಿ 7ಕ್ಕೆ100 (ಫರ್ಗನಾ ಹಕ್ 30, ಮುರ್ಷಿದಾ ಖಾತೂನ್ 21, ನಿಜರ್ ಸುಲ್ತಾನಾ 36, ದೀಪ್ತಿ ಶರ್ಮಾ 13ಕ್ಕೆ2, ಶಫಾಲಿ ವರ್ಮಾ 10ಕ್ಕೆ2) ಫಲಿತಾಂಶ: ಭಾರತ ತಂಡಕ್ಕೆ 59 ರನ್‌ಗಳ ಜಯ. ಪಂದ್ಯದ ಆಟಗಾರ್ತಿ: ಶಫಾಲಿ ವರ್ಮಾ.

ಬೆಳಿಗ್ಗೆ ಪಂದ್ಯ: ಶ್ರೀಲಂಕಾ: 20 ಓವರ್‌ಗಳಲ್ಲಿ 7ಕ್ಕೆ105 (ಚಾಮರಿ ಅಟಪಟ್ಟು 21, ನೀಲಾಕ್ಷಿ ಡಿಸಿಲ್ವಾ 21, ಒಶಾದಿ ರಣಸಿಂಗೆ ಔಟಾಗದೆ 23, ಸಶಾ ಆಜ್ಮಿ 10ಕ್ಕೆ2, ಎನಾ ಹಮಿಜಾ ಹಶೀಮ್ 23ಕ್ಕೆ2) ಮಲೇಷ್ಯಾ: 9.5 ಓವರ್‌ಗಳಲ್ಲಿ 33 (ಎಲ್ಸಾ ಹಂಟರ್ 18, ಮಲ್ಶಾ ಶೇಹಾನಿ 2ರನ್‌ಗೆ 4, ಐನೊಕಾ ರಣವೀರಾ 8ಕ್ಕೆ2, ಸುಗಂಧಿಕಾ ಕುಮಾರಿ 11ಕ್ಕೆ2) ಫಲಿತಾಂಶ: ಶ್ರೀಲಂಕಾ ಕ್ಕೆ 72 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.