ADVERTISEMENT

2019ರಿಂದ ಮಹಿಳಾ ಕ್ರಿಕೆಟ್ ಗಮನಾರ್ಹ ಪ್ರಗತಿ: ಗಂಗೂಲಿ

ಪಿಟಿಐ
Published 11 ಡಿಸೆಂಬರ್ 2023, 20:12 IST
Last Updated 11 ಡಿಸೆಂಬರ್ 2023, 20:12 IST
<div class="paragraphs"><p>ಸೌರವ್‌ ಗಂಗೂಲಿ</p></div>

ಸೌರವ್‌ ಗಂಗೂಲಿ

   

ನವದೆಹಲಿ: 2019 ರಿಂದ ಮಹಿಳಾ ಕ್ರಿಕೆಟ್ ಸಾಕಷ್ಟು ಬೆಳವಣಿಗೆ ಕಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ತಲುಪುತ್ತಿದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ಮಹಿಳಾ ಪ್ರೀಮಿಯರ್ ಲೀಗ್‌, ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂದಾನಾ ಅವರಂಥ ಆಟಗಾರ್ತಿಯರು ಪ್ರವರ್ಧಮಾನಕ್ಕೆ ಬಂದಿದ್ದು, 3–4  ವರ್ಷಗಳಿಂದ ಕೆಲವು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ತಂಡದ ಉತ್ತಮ ಸಾಧನೆಯಿಂದ ಇದು ಸಾಧ್ಯವಾಗಿದೆ ಎಂದು ಗಂಗೂಲಿ ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದರು.

ADVERTISEMENT

‘2019 ರಿಂದ ಭಾರತದಲ್ಲಿ ಮಹಿಳಾ ಕ್ರಿಕೆಟ್ ಸಾಧಿಸಿದ ಪ್ರಗತಿ ಬಹುಶಃ ಪುರುಷರ ತಂಡಕ್ಕಿಂತ ಹೆಚ್ಚಾಗಿದೆ. ಪುರುಷರ ತಂಡ ಅತ್ಯುತ್ತಮವಾಗೇ ಇತ್ತು. ಆದರೆ, ಮಹಿಳಾ ತಂಡ ಎಲ್ಲಿತ್ತು? ಎಲ್ಲಿಂದ ಎಲ್ಲಿಗೆ ತಲುಪಿದೆ. ಏಷ್ಯಾ ಕಪ್ ಗೆಲ್ಲುವುದರಿಂದ ಹಿಡಿದು, ವಿಶ್ವಕಪ್‌ನಲ್ಲಿ ಅವರು ಆಡಿದ ರೀತಿ. ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ (2022ರಲ್ಲಿ ರನ್ನರ್ ಅಪ್) ತಂಡ ಅತ್ಯುತ್ತಮವಾಗಿ ಆಡಿತ್ತು’ ಎಂದು ಗಂಗೂಲಿ ಜಿಯೋ ಸಿನಿಮಾಕ್ಕೆ  ತಿಳಿಸಿದ್ದಾರೆ.

ಹರ್ಮನ್‌ಪ್ರೀತ್‌ ಕೌರ್, ಸ್ಮೃತಿ ಮಂದಾನಾ, ರಿಚಾ ಮಿಶ್ರಾ, ಜೆಮಿಮಾ ರಾಡ್ರಿಗಸ್‌, ಶಫಾಲಿ ವರ್ಮಾ ಹಾಗೂ ಯುವ ವೇಗಿ ರೇಣುಕಾ ಸಿಂಗ್ ಅವರನ್ನು ಗಂಗೂಲಿ ಶ್ಲಾಘಿಸಿದರು.

‘ಜೂಲನ್ (ಗೋಸ್ವಾಮಿ) ಅವರ ನಂತರ ಮುಂದೆ ಅಂಥ ವೇಗದ ಬೌಲರ್ ಎಲ್ಲಿಂದ ಬರುತ್ತಾರೆ ಎಂದು ಯೋಚಿಸುತ್ತಿದ್ದೆವು. ಆದರೆ ರೇಣುಕಾ (ಸಿಂಗ್) ಠಾಕೂರ್ ಕಳೆದ ಮೂರು ವರ್ಷಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ’ ಎಂದರು.

ಇತ್ತೀಚೆಗೆ ನಡೆದ ಡಬ್ಲ್ಯುಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೆಲವು ಪ್ರತಿಭಾವಂತ ಭಾರತೀಯ ಆಟಗಾರರನ್ನು ಆಯ್ಕೆ ಮಾಡಿರುವುದಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟ್ ನಿರ್ದೇಶಕ ಗಂಗೂಲಿ ಹರ್ಷ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.