ವಿಶ್ವಕಪ್ ಕ್ರಿಕೆಟ್‌ನಲ್ಲಿ ಚಾಂಪಿಯನ್ ಆದ ಭಾರತೀಯ ವನಿತೆಯರ ತಂಡದ ಸಂಭ್ರಮ
ಎಕ್ಸ್ ಚಿತ್ರ
ದಕ್ಷಿಣ ಆಫ್ರಿಕಾದ ಬೌಲರ್ ಲೂಸ್ ಹಾಕಿದ ಎಸೆತವೊಂದನ್ನು ನೇರವಾಗಿ ಡ್ರೈವ್ ಮಾಡಿ, ಸಿಕ್ಸರ್‌ಗೆ ಎತ್ತಿದಾಗ ಶಫಾಲಿ ವರ್ಮಾ ತಮ್ಮ ಹಳೆಯ ಲಯಕ್ಕೆ ಎಷ್ಟರಮಟ್ಟಿಗೆ ಕುದುರಿಕೊಂಡಿದ್ದಾರೆ ಎನ್ನುವುದು ಭಾನುವಾರ ಕಾಣಿಸಿತು.
2025ರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಭಾರತ ಚಾಂಪಿಯನ್ ಆಯಿತಲ್ಲ; ಆ ಫೈನಲ್ ಪಂದ್ಯದ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಯನ್ನು ತಮ್ಮತ್ತ ಎಳೆದುಕೊಂಡವರು ಶಫಾಲಿ. ಆಡುವ ಹಾಗೂ ಸಂಭವನೀಯರನ್ನು ಒಳಗೊಂಡ 15 ಮಂದಿಯ ತಂಡಕ್ಕೆ ಮೊದಲು ಆಯ್ಕೆಯೇ ಆಗದಿದ್ದ ಯುವತಿ, ದಕ್ಷಿಣ ಆಫ್ರಿಕಾ ಎದುರಿನ ಮಹತ್ವದ ಪಂದ್ಯದಲ್ಲಿ ಇಂತಹ ಪ್ರಶಸ್ತಿಗೆ ಭಾಜನರಾದುದನ್ನು ಅದೃಷ್ಟವಷ್ಟೆ ಎನ್ನಲಾಗದು.
ಹರಿಯಾಣದ ಹುಡುಗಿ ಶಫಾಲಿ ಕ್ರಿಕೆಟ್ ಅಕಾಡೆಮಿಗೆ ಸೇರಿಕೊಂಡಿದ್ದು ತಾನು ಹುಡುಗ ಎಂದು ಸುಳ್ಳು ಹೇಳಿಕೊಂಡು. ಆದರೆ, ಈಗ ‘ಕ್ರಿಕೆಟ್ ಜಂಟಲ್‌ಮನ್ಸ್ ಗೇಮ್ ಅಷ್ಟೇ ಅಲ್ಲ, ಎಲ್ಲರ ಆಟ ಎಂದು ಒಕ್ಕಣೆಯನ್ನು ಬದಲಿಸಿಕೊಳ್ಳಿ’ ಎಂಬ ಸಾಮಾಜಿಕ ಮಾಧ್ಯಮದ ಅಭಿಯಾನಕ್ಕೆ ಈಕೆಯಂತೆ ಭಾರತ ಕ್ರಿಕೆಟ್ ತಂಡದ ಹೆಣ್ಣುಮಕ್ಕಳು ಭಾಷ್ಯ ಬರೆದಿದ್ದಾರೆ.
ಒಬ್ಬಿಬ್ಬರಲ್ಲ; ಭಾರತ ತಂಡದ ಎಲ್ಲರೂ ಭಾಷ್ಯ ಬರೆದವರೇ. 215 ರನ್‌ಗಳನ್ನು ಕಲೆಹಾಕಿದ್ದೇ ಅಲ್ಲದೆ 22 ವಿಕೆಟ್‌ಗಳನ್ನು ಕಿತ್ತು ಸರಣಿ ಶ್ರೇಷ್ಠ ಆಟಗಾರ್ತಿಯಾದ ದೀಪ್ತಿ ಶರ್ಮಾ, ಟೂರ್ನಿಯುದ್ದಕ್ಕೂ ಅವಕಾಶ ಸಿಕ್ಕೀತೋ ಇಲ್ಲವೋ ಎಂಬ ತಲ್ಲಣದಲ್ಲಿ ಬಿಕ್ಕುತ್ತಾ... ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಅವುಡುಗಚ್ಚಿ ನಿಂತು ಶತಕದಾಟವಾಡಿ ನಿಟ್ಟುಸಿರಿಟ್ಟು ಭಾವುಕರಾದ ಜೆಮಿಮಾ ರಾಡ್ರಿಗಸ್ ಸದ್ಯ ಎಲ್ಲರ ಕಣ್ಮಣಿಗಳು.
ಅನುಭವ ಎಂತಹ ಸಂಯಮ ಕಲಿಸುತ್ತದೆ ಎನ್ನುವುದರ ಪ್ರಾತ್ಯಕ್ಷಿಕೆಯಂತೆ ಆಡಿದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ, ‘ಆವೋ ಆವೋ’ (ಬಾ ಬಾ) ಎಂದು ಫೀಲ್ಡರ್‌ಗಳನ್ನು ಚೆಂಡು ಹೋದ ದಿಕ್ಕಿನತ್ತ ಓಡುವಂತೆ ಪ್ರೇರೇಪಿಸಿದ–ಫೈನಲ್ ಪಂದ್ಯದಲ್ಲಿ ತಾವಾಡಿದ ಎರಡನೇ ಎಸೆತವನ್ನೇ ನಿರ್ಭಿಡೆಯಿಂದ ಸಿಕ್ಸರ್‌ಗೆ ಎತ್ತಿದ ವಿಕೆಟ್ ಕೀಪರ್ ಬ್ಯಾಟ್ಸ್‌ವುಮನ್ ರಿಚಾ ಘೋಷ್ ಆಟ ಮರೆಯಲಾದೀತೆ? ಬಿಳಿ ಚೆಂಡಿನಲ್ಲಿ ಎಡಗೈ ಸಾಂಪ್ರದಾಯಿಕ ಬೌಲಿಂಗ್ ಅನ್ನು ವಿಕೆಟ್‌ನತ್ತ ಗುರಿಯಾಗಿಸಿಕೊಂಡೇ ಮಾಡುವುದು ಹೇಗೆಂದು ಪದೇಪದೇ ದರ್ಶನ ಮಾಡಿಸಿದ ಶ್ರೀ ಚರಣಿಗೆ ಒಳ್ಳೆಯ ಭವಿಷ್ಯವಿದೆ ಎಂಬ ಕ್ರಿಕೆಟ್ ಪರಿಣತರ ಶಹಬ್ಬಾಸ್‌ಗಿರಿಗೂ ಅರ್ಥವಿದೆ.
ಮುನ್ನೂರಕ್ಕೂ ಹೆಚ್ಚು ರನ್ ಗಳಿಸಿಯೂ ಕಾಲು ಉಳುಕಿದ್ದರಿಂದ ಪದಕಹಾರ ಹಾಕಿಸಿಕೊಳ್ಳುವ ಕ್ಷಣದ ಭಾಗವಾಗಲಾಗದೆ ಗಾಲಿ ಕುರ್ಚಿಯಲ್ಲಿ ಕುಳಿತೇ ಸಂಭ್ರಮದ ಹೂವಾದ ಪ್ರತೀಕಾ ರಾವಲ್ ಒಂದು ಭಾವುಕ ಅಧ್ಯಾಯವೇ ಹೌದು. ಆಲ್‌ರೌಂಡ್ ಆಟಗಾರ್ತಿಯರಿಗೆ ಭವ್ಯ ಭವಿಷ್ಯವಿದೆ ಎಂದು ಕೆಲವು ಉದಾಹರಣೆಗಳನ್ನು ಉಳಿಸಿದ ಅಮನ್ಜೋತ್ ಕೌರ್ ಹಾಗೂ ಈ ಎಲ್ಲರನ್ನೂ ಸಮರ್ಥವಾಗಿ ನಿರ್ವಹಿಸಿ, ನಾಯಕತ್ವದ ನೊಗವನ್ನು ಯಶಸ್ವಿಯಾಗಿ ಹೊತ್ತು ಸಾಗಿದ ಹರ್ಮನ್‌ಪ್ರೀತ್ ಕೌರ್ ಯಶೋಗಾಥೆಗೆ ಕನ್ನಡಿ ಹಿಡಿದರು.
ಕುದಿರಕ್ತದ ಯುವಕ–ಯುವತಿಯರ ಮನಃಸ್ಥಿತಿಯ ರೂಪಕ ಶಫಾಲಿ. ಹದಿನೈದನೇ ಪ್ರಾಯದಲ್ಲೇ ಭಾರತ ಅಂತರರಾಷ್ಟ್ರೀಯ ತಂಡದ ಪರವಾಗಿ ಟ್ವೆಂಟಿ20 ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದವರು ಅವರು. ನಿರ್ಭಿಡೆಯ ಶೈಲಿಯ ಆಟಗಾರ್ತಿ. ಅದೇ ಫಾರ್ಮ್ ಕಳೆದುಕೊಳ್ಳಲು ಕೂಡ ಕಾರಣವಾಯಿತು. ತಂಡದಿಂದ ಹೊರಗುಳಿಯಬೇಕಾಯಿತು. ದೇಸಿ ಕ್ರಿಕೆಟ್‌ನಲ್ಲಿ ಅವರು ಮತ್ತೆ ಲೋಪ ಸರಿಪಡಿಸಿಕೊಂಡರು. ಫೈನಲ್ ಪಂದ್ಯ ಶುರುವಾಗುವ ಮೊದಲು ನಾಯಕಿ ಹರ್ಮನ್‌ಪ್ರೀತ್, ‘ಎರಡು ಮೂರು ಓವರ್ ಬೌಲ್ ಮಾಡಬೇಕಾದೀತು.. ಸಿದ್ಧ ಇರು’ ಎಂದು ಹೇಳಿದ್ದರು. ‘ಹತ್ತೂ ಓವರ್ ಕೊಟ್ಟರೂ ಮಾಡುವೆ’ ಎಂದು ಅವರು ಛಲದ ಉತ್ತರ ನೀಡಿದರು. ಅಷ್ಟೇ ಅಲ್ಲದೆ, ತಾವು ಮಾಡಿದ ಮೊದಲ ಎರಡು ಓವರ್‌ಗಳಲ್ಲೇ ಎರಡು ವಿಕೆಟ್‌ಗಳನ್ನೂ ಕಿತ್ತರು. ಅದಕ್ಕೂ ಮೊದಲು ಕೇವಲ 78 ಎಸೆತಗಳಲ್ಲಿ ಅವರು 87 ರನ್ ಕಲೆಹಾಕಿದ್ದರು. ಶಫಾಲಿ ಏಳು ಓವರ್ ಬೌಲ್ ಮಾಡಬಹುದು ಎಂದು ದಕ್ಷಿಣ ಆಫ್ರಿಕಾ ತಂಡದವರು ಕನಸಲ್ಲೂ ಎಣಿಸಿರಲಿಕ್ಕಿಲ್ಲ. ಯಾಕೆಂದರೆ, ಅವರು ಆಡಿರುವ 31 ಪಂದ್ಯಗಳಲ್ಲಿ ಬೌಲ್ ಮಾಡಿರುವುದು ಆರರಲ್ಲಿ ಮಾತ್ರ.
ಭಾರತದ ಹೆಣ್ಣುಮಕ್ಕಳ ವಿಶ್ವಕಪ್ ವಿಜಯದ ಹಾದಿಯಲ್ಲಿ ಮೊಗೆದಷ್ಟೂ ಭಾವುಕ ಕಥೆಗಳು ಸಿಗುತ್ತವೆ. ಅದು ಅಂತ್ಯಗೊಂಡ ಬಗೆಯಲ್ಲಿ ಎದ್ದುಕಂಡಿದ್ದು ತಾಯ್ತನದ ಬನಿ. ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೋಲ್ವಾರ್ಟ್ ಅವರನ್ನು ಸ್ಮೃತಿ ಆಲಿಂಗಿಸಿದ್ದು, ಹಳೆಯ ದಿಗ್ಗಜ ಆಟಗಾರ್ತಿಯರಾದ ಜೂಲನ್ ಗೋಸ್ವಾಮಿ–ಮಿಥಾಲಿ ರಾಜ್ ಕಪ್ ಸ್ಪರ್ಶಿಸಿ ಮಕ್ಕಳಂತೆ ಸುಖಿಸಿದ್ದು, ಎಲ್ಲರ ಕಣ್ಣುಗಳಲ್ಲಿ ತೇವ ಜಮೆಯಾಗಿದ್ದು... ಚಳಿಗಾಲದಲ್ಲಿ ಎದೆ ಬೆಚ್ಚಗಾಗಿಸುವ ಗಾಳಿಯೊಂದು ಹದವಾಗಿ ಬೀಸಿದಂತಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.