ADVERTISEMENT

ಮಹಿಳಾ ಟಿ20 ವಿಶ್ವಕಪ್‌: ಭಾರತಕ್ಕೆ ಹ್ಯಾಟ್ರಿಕ್ ಜಯದ ನಿರೀಕ್ಷೆ

ಇಂದು ಇಂಗ್ಲೆಂಡ್‌ ವಿರುದ್ಧ ಪೈಪೋಟಿ

ಪಿಟಿಐ
Published 17 ಫೆಬ್ರುವರಿ 2023, 13:21 IST
Last Updated 17 ಫೆಬ್ರುವರಿ 2023, 13:21 IST
ಭಾರತ ತಂಡದ ರಿಚಾ ಘೋಷ್‌
ಭಾರತ ತಂಡದ ರಿಚಾ ಘೋಷ್‌   

ಗೆಬೆಹಾ, ದಕ್ಷಿಣ ಆಫ್ರಿಕಾ: ಮೊದಲ ಎರಡು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ತಂಡ, ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಶನಿವಾರ ಇಂಗ್ಲೆಂಡ್‌ನ ಸವಾಲು ಎದುರಿಸಲಿದೆ.

ವಿಶ್ವ ರ್‍ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಇಂಗ್ಲೆಂಡ್‌ ವಿರುದ್ಧ ಗೆದ್ದರೆ, ಹರ್ಮನ್‌ಪ್ರೀತ್‌ ಕೌರ್‌ ಬಳಗಕ್ಕೆ ನಾಕೌಟ್‌ನಲ್ಲಿ ಸ್ಥಾನ ಖಚಿತವಾಗಲಿದೆ. ಆರಂಭದ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳನ್ನು ಮಣಿಸಿದ್ದ ಭಾರತ, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ.

ಇಂಗ್ಲೆಂಡ್ ಕೂಡಾ ಆಡಿದ ಎರಡೂ ಪಂದ್ಯಗಳಲ್ಲಿ ಗೆದ್ದಿದ್ದು, ಉತ್ತಮ ಲಯದಲ್ಲಿದೆ. ಆದ್ದರಿಂದ ಶನಿವಾರದ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಯುವ ಸಾಧ್ಯತೆಯಿದೆ.

ADVERTISEMENT

ಭಾರತ ತಂಡವು ಯವ ಆಟಗಾರ್ತಿ ರಿಚಾ ಘೋಷ್‌ ಅವರ ಉತ್ತಮ ಬ್ಯಾಟಿಂಗ್‌ನಿಂದಲೂ ಎರಡೂ ಪಂದ್ಯಗಳಲ್ಲಿ ಒತ್ತಡವನ್ನು ಮೆಟ್ಟಿನಿಂತು ಗೆಲುವು ಒಲಿಸಿಕೊಂಡಿತ್ತು. ಇಂಗ್ಲೆಂಡ್‌ ವಿರುದ್ಧ ಅಗ್ರಕ್ರಮಾಂಕದ ಇತರ ಬ್ಯಾಟರ್‌ಗಳೂ ಮಿಂಚುವುದು ಅಗತ್ಯ.

ಶಫಾಲಿ ವರ್ಮಾ, ಹರ್ಮನ್‌ಪ್ರೀತ್‌ ಕೌರ್‌ ಮತ್ತು ಸ್ಮೃತಿ ಮಂದಾನ ಅವರು ಇಂಗ್ಲೆಂಡ್‌ನ ಸ್ಪಿನ್ನರ್‌ಗಳಾದ ಚಾರ್ಲಿ ಡೀನ್, ಸೋಫಿ ಎಕ್ಸೆಲ್‌ಸ್ಟೋನ್‌ ಮತ್ತು ಸಾರಾ ಗ್ಲೆನ್‌ ಅವರ ದಾಳಿಯನ್ನು ಎದುರಿಸುವಲ್ಲಿ ಯಶಸ್ವಿಯಾದರೆ ಭಾರತಕ್ಕೆ ಗೆಲುವು ಕಷ್ಟವಾಗದು.

ಪಾಕಿಸ್ತಾನ ವಿರುದ್ಧ ಪ್ರಭಾವಿ ದಾಳಿ ನಡೆಸಲು ವಿಫಲವಾಗಿದ್ದ ಭಾರತದ ಬೌಲರ್‌ಗಳು ವೆಸ್ಟ್‌ ಇಂಡೀಸ್‌ ಎದುರು ಶಿಸ್ತಿನ ಪ್ರದರ್ಶನ ನೀಡಿದ್ದರು. ಇಂಗ್ಲೆಂಡ್‌ ವಿರುದ್ಧ ಇನ್ನಷ್ಟು ಪರಿಣಾಮಕಾರಿಯಾಗಿ ಬೌಲಿಂಗ್‌ ಮಾಡಬೇಕಿದೆ.

ಲಾರೆನ್‌ ಬೆಲ್, ಅಲೈಸ್‌ ಕ್ಯಾಪ್ಸಿ ಅವರನ್ನೊಳಗೊಂಡ ಎದುರಾಳಿ ಬ್ಯಾಟಿಂಗ್‌ ವಿಭಾಗದ ಮೇಲೆ ಕಡಿವಾಣ ಹಾಕುವ ಸವಾಲು ರೇಣುಕಾ ಸಿಂಗ್, ದೀಪ್ತಿ ಶರ್ಮಾ ಮತ್ತು ಪೂಜಾ ವಸ್ತ್ರಕರ್‌ ಅವರ ಮುಂದಿದೆ.

ಭಾರತ ಮತ್ತು ಇಂಗ್ಲೆಂಡ್‌ ತಂಡಗಳು ತಲಾ ನಾಲ್ಕು ಪಾಯಿಂಟ್ಸ್‌ ಹೊಂದಿವೆ. ಉತ್ತಮ ರನ್‌ರೇಟ್‌ ಆಧಾರದಲ್ಲಿ ಇಂಗ್ಲೆಂಡ್‌ ತಂಡ ‘ಗುಂಪು–2’ ರಲ್ಲಿ ಅಗ್ರಸ್ಥಾನದಲ್ಲಿದೆ.

ಪಂದ್ಯ ಆರಂಭ: ಸಂಜೆ 6.30

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.