ADVERTISEMENT

ಭಾರತ ಮಹಿಳಾ ತಂಡಕ್ಕೆ ಆಘಾತ: ವಿಶ್ವಕಪ್‌ ನಾಕೌಟ್ ಪಂದ್ಯಗಳಿಂದ ರಾವಲ್ ಹೊರಕ್ಕೆ

ಪಿಟಿಐ
Published 27 ಅಕ್ಟೋಬರ್ 2025, 11:27 IST
Last Updated 27 ಅಕ್ಟೋಬರ್ 2025, 11:27 IST
<div class="paragraphs"><p>ಗಾಯಗೊಂಡು ಮೈದಾನದಿಂದ ಹೊರಹೋಗುತ್ತಿರುವ ಪ್ರತೀಕಾ ರಾವಲ್</p></div>

ಗಾಯಗೊಂಡು ಮೈದಾನದಿಂದ ಹೊರಹೋಗುತ್ತಿರುವ ಪ್ರತೀಕಾ ರಾವಲ್

   

ಚಿತ್ರ:@cricbuzz

ಮುಂಬೈ: ಭಾರತ ಮಹಿಳಾ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟರ್ ಪ್ರತೀಕಾ ರಾವಲ್ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ ಮುಂದಿನ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಅವರು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಮೊಣಕಾಲು ಹಾಗೂ ಪಾದದ ಗಾಯಕ್ಕೆ ಒಳಗಾಗಿದ್ದರು.

ADVERTISEMENT

ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಭಾರತದ ಕೊನೆಯ ಲೀಗ್ ಪಂದ್ಯದ ವೇಳೆ ಪ್ರತೀಕಾ ರಾವಲ್ ಬಲಗಾಲಿನ ಪಾದದ ಗಾಯಕ್ಕೆ ಒಳಗಾಗಿದ್ದರು.

‘ಪ್ರತೀಕಾ ರಾವಲ್ ಬಿದ್ದ ರೀತಿ ನೋಡಿದರೆ ಅವರು ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ ನಾಕೌಟ್ ಪಂದ್ಯಗಳಿಗೆ ಲಭ್ಯವಿರುವುದಿಲ್ಲ ಎಂಬುದು ಸ್ಪಷ್ಟವಾಗಿತ್ತು. ಇದು ದುರದೃಷ್ಟಕರ’ ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಆಗಿದ್ದೇನು?

ಡೀಪ್ ಮಿಡ್ ವಿಕೆಟ್ ವಿಭಾಗದಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ರಾವಲ್, 21ನೇ ಓವರ್‌ನ ಕೊನೆಯ ಎಸೆತದಲ್ಲಿ ಚೆಂಡನ್ನು ತಡೆಯಲು ಮುಂದಾದಾಗ ಅವರ ಬಲಗಾಲು ಹುಲ್ಲುಗಾವಲಿನಲ್ಲಿ ಸಿಲುಕಿಕೊಂಡು ಕೆಳಗೆ ಬೀಳುತ್ತಾರೆ. ತಕ್ಷಣಕ್ಕೆ ಮುಗುಳು ನಕ್ಕರಾದರೂ ಅವರು ಗಂಭೀರವಾಗಿ ಗಾಯಗೊಂಡಿರುವುದು ಸ್ಪಷ್ಟವಾಗಿತ್ತು.

ಅವರಿಗಾಗಿ ಮೈದಾನಕ್ಕೆ ಸ್ಟ್ರೆಚರ್ ತರಲು ಮುಂದಾದಾಗ ರಾವಲ್ ಸಹಾಯಕ ಸಿಬ್ಬಂದಿ ನೆರವು ಪಡೆದು ಮೈದಾನದಿಂದ ಹೊರನಡೆದಿದ್ದರು. ಮಹಿಳಾ ವಿಶ್ವಕಪ್ 2025ರಲ್ಲಿ ರಾವಲ್ ಅಮೋಘ ಲಯದಲ್ಲಿದ್ದು, ಆಡಿರುವ 6 ಇನಿಂಗ್ಸ್‌ಗಳಿಂದ 51.33 ಸರಾಸರಿಯಲ್ಲಿ 308 ರನ್‌ಗಳನ್ನು ಗಳಿಸಿದ್ದಾರೆ.

ರಿಚಾ ಘೋಷ್ ಅವರ ಫಿಟ್‌ನೆಸ್ ಬಗ್ಗೆಯೂ ಅನುಮಾನಗಳಿವೆ. ವಿಕೆಟ್ ಕೀಪರ್ ಬ್ಯಾಟರ್ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಬೆರಳಿಗೆ ಗಾಯಕ್ಕೆ ಒಳಗಾಗಿ ಬಾಂಗ್ಲಾದೇಶ ಪಂದ್ಯದಿಂದ ಹೊರಗುಳಿದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.