ಬೆಂಗಳೂರು: ಮಹಿಳೆಯರ ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಕ್ರಿಕೆಟ್ ತಂಡದ ಆಟಗಾರ್ತಿಯರು ಫೀಲ್ಡಿಂಗ್ ಕೌಶಲ ಸುಧಾರಣೆಯತ್ತ ಹೆಚ್ಚಿನ ಗಮನ ನೀಡಿದ್ದಾರೆ.
ಇದೇ 30ರಿಂದ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಇದಕ್ಕಾಗಿ ಅಭ್ಯಾಸವನ್ನು ತಂಡದ ಆಟಗಾರ್ತಿಯರು ಮಾಡುತ್ತಿದ್ದಾರೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ತನ್ನ ವೆಬ್‌ಸೈಟ್‌ನಲ್ಲಿ ಅಭ್ಯಾಸದ ವಿಡಿಯೊ ಹಂಚಿಕೊಂಡಿದೆ.
ಫುಟ್‌ಬಾಲ್ ಮಾದರಿಯಲ್ಲಿ ಬಾಲ್ ಪಾಸಿಂಗ್ ಮಾಡುವ ಮೂಲಕ ವಾರ್ಮ್ ಅಪ್ ಮಾಡಿದರು. ಅದರ ನಂತರ ಕ್ಯಾಚ್ ಪಡೆಯುವ ಮತ್ತು ಸ್ಟಂಪ್‌ಗಳಿಗೆ ನೇರ ಥ್ರೋ ಮಾಡುವ ಅಭ್ಯಾಸಗಳನ್ನು ಹೆಚ್ಚು ಹೊತ್ತು ಮಾಡಿದರು.
ಬ್ಯಾಟರ್ ಹೊಡೆದ ಚೆಂಡನ್ನು ಚುರುಕಾಗಿ ಹಿಡಿದು ಸ್ಟಂಪ್‌ನತ್ತ ನೇರ ಥ್ರೋ ಮಾಡುವುದು. ವಿಕೆಟ್‌ಕೀಪರ್‌ಗೆ ಪಾಸ್ ಕೊಡುವುದರ ಅಭ್ಯಾಸವನ್ನು ಮಾಡಿದರು.
ಈಚೆಗೆ ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಭಾರತವು 1–2ರಿಂದ ಸೋತಿತ್ತು. ಆ ಸಂದರ್ಭದಲ್ಲಿ ಆದ ಲೋಪಗಳನ್ನು ತಿದ್ದಿಕೊಳ್ಳುವುದು ತಂಡದ ಗುರಿ.
ವಿಶ್ವಕಪ್ ಟೂರ್ನಿ ಇತಿಹಾಸದಲ್ಲಿ ಎರಡು ಬಾರಿ ರನ್ನರ್ಸ್ ಅಪ್ ಆಗಿರುವ ಭಾರತ ತಂಡದ ಬ್ಯಾಟಿಂಗ್ ವಿಭಾಗ ಉತ್ತಮವಾಗಿದೆ. ಅದರಲ್ಲೂ ಸ್ಮೃತಿ ಮಂದಾನ ಅವರು ಅಮೋಘ ಲಯದಲ್ಲಿದ್ದಾರೆ. ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ 50 ಎಸೆತಗಳಲ್ಲಿ ಶತಕ ಗಳಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ವೇಗದ ಶತಕ ಗಳಿಸಿದ ಎರಡನೇ ಬ್ಯಾಟರ್ ಅವರಾಗಿದ್ದರು. ಮೊದಲ ಸ್ಥಾನದಲ್ಲಿ ಮೆಗ್ ಲ್ಯಾನಿಂಗ್ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.