ADVERTISEMENT

Women's World Cup | Ind VS Pak: ಭಾರತಕ್ಕೆ ಸುಲಭದ ತುತ್ತಾದ ಪಾಕ್

ಪಿಟಿಐ
Published 5 ಅಕ್ಟೋಬರ್ 2025, 18:52 IST
Last Updated 5 ಅಕ್ಟೋಬರ್ 2025, 18:52 IST
<div class="paragraphs"><p>ಭಾರತದ ಆಟಗಾರ್ತಿಯರ ಸಂಭ್ರಮ</p></div>

ಭಾರತದ ಆಟಗಾರ್ತಿಯರ ಸಂಭ್ರಮ

   

ಕೊಲಂಬೊ: ಹರ್ಲಿನ್ ಡಿಯೊಲ್ ಮತ್ತು ರಿಚಾ ಘೋಷ್ ಅವರ ಅಮೂಲ್ಯ ಆಟದ ನಂತರ ವೇಗದ ಬೌಲರ್ ಕ್ರಾಂತಿ ಗೌಡ್‌ (20ಕ್ಕೆ3) ಮತ್ತು ದೀಪ್ತಿ ಶರ್ಮಾ (45ಕ್ಕೆ3) ಅವರು ಪಾಕಿಸ್ತಾನ ತಂಡದ ಪತನಕ್ಕೆ ಕಾರಣರಾದರು. ಆರ್. ಪ್ರೇಮದಾಸ ಕ್ರೀಡಾಂಗಣ ದಲ್ಲಿ ಭಾನುವಾರ ನಡೆದ ಮಹಿಳಾ ಏಕದಿನ ವಿಶ್ವಕಪ್‌ ಪಂದ್ಯದಲ್ಲಿ ಭಾರತ ತಂಡ 88 ರನ್‌ಗಳಿಂದ ಬದ್ಧ ಎದುರಾಳಿ ಪಾಕಿಸ್ತಾನ ತಂಡದ ಮೇಲೆ ಜಯಗಳಿಸಿತು.

‘ವಿವಾದಾತ್ಮಕ ಟಾಸ್’ ನಂತರ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 50 ಓವರ್‌ಗಳಲ್ಲಿ 247 ರನ್‌ ಗಳಿಸಿತು. ಹರ್ಲಿನ್ 65 ಎಸೆತಗಳಲ್ಲಿ 46 ರನ್ ಗಳಿಸಿದರು. ರಿಚಾ 20 ಎಸೆತಗಳಲ್ಲಿ ಅಜೇಯ 35 ರನ್‌ ಗಳಿಸಿದರು. ಪಾಕಿಸ್ತಾನ ತಂಡ 43 ಓವರುಗಳಲ್ಲಿ 159 ರನ್‌ಗಳಿಗೆ ಆಲೌಟ್‌ ಆಯಿತು. ಮೂರನೇ ಕ್ರಮಾಂಕದ ಆಟಗಾರ್ತಿ ಸಿದ್ರಾ ಅಮಿನ್ (81,106ಎ, 4x9, 6x1) ಮತ್ತು ನತಾಲಿಯಾ ಪರ್ವೇಜ್‌ (33) ಬಿಟ್ಟರೆ ಉಳಿದವರು ಭಾರತದ ದಾಳಿಗೆ ಉದುರಿದರು.

ADVERTISEMENT

ಭಾರತ ತಂಡದ ಆರಂಭ ಸಾಧಾರಣವಾಗಿತ್ತು. ಅಗ್ರಕ್ರಮಾಂಕದ ಬ್ಯಾಟರ್‌ಗಳು ದೊಡ್ಡ ಇನಿಂಗ್ಸ್‌
ಆಡಲಿಲ್ಲ. ಪ್ರತೀಕಾ ರಾವಲ್ (31 ರನ್) ಚುರುಕಾದ ಆರಂಭ ನೀಡಿದರು. ಡಯಾನಾ ಬೇಗ್ ಅವರ ಬೌಲಿಂಗ್‌ನಲ್ಲಿ ಸತತ 3 ಬೌಂಡರಿ ಬಾರಿಸಿದ ಪ್ರತೀಕಾ ಮಿಂಚಿದರು. ಆದರೆ ‘ಸ್ಟಾರ್ ಬ್ಯಾಟರ್’
ಸ್ಮೃತಿ ಮಂದಾನ (23 ರನ್) ಅವರು ಪವರ್‌ಪ್ಲೇ ಮುಗಿಯುವಷ್ಟರಲ್ಲಿ ಔಟಾದರು.  ಪಾಕ್ ನಾಯಕಿ ಫಾತಿಮಾ ಸನಾ ಹಾಕಿದ 10ನೇ ಓವರ್‌ನಲ್ಲಿ ಮಂದಾನ ಎಲ್‌ಬಿ ಬಲೆಗೆ ಬಿದ್ದರು. 

ಈ ಹಂತದಲ್ಲಿ ಪಾಕ್ ಬೌಲರ್‌ಗಳು ಶಿಸ್ತುಬದ್ಧ ಬೌಲಿಂಗ್ ಮಾಡಿದರು. ಲೈನ್ ಮತ್ತು ಲೆಂಗ್ತ್ ಕಾಪಾಡಿಕೊಂಡರು. ಮಧ್ಯಮವೇಗಿ ಡಯಾನಾ (69ಕ್ಕೆ4) ಮತ್ತು ಸನಾ (38ಕ್ಕೆ2) ಅವರು  ಭಾರತದ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದರು. ಪ್ರತೀಕಾ ಅವರು ಸಾದಿಯಾ ಇಕ್ಬಾಲ್ ಎಸೆತವನ್ನು ಕಟ್ ಮಾಡುವ ಪ್ರಯತ್ನದಲ್ಲಿ ಬೌಲ್ಡ್ ಆದರು. ಈ ಹಂತದಲ್ಲಿ ಕ್ರೀಸ್‌ನಲ್ಲಿದ್ದ ಹರ್ಲಿನ್  ಅವರು ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರೊಂದಿಗೆ 39 ರನ್‌ ಸೇರಿಸಿದರು. 

ಕೌರ್ ನಿರ್ಗಮಿಸಿದ ನಂತರ ಹರ್ಲಿನ್ ಮತ್ತು ಜೆಮಿಮಾ ರಾಡ್ರಿಗಸ್ (32 ರನ್) ಅವರೊಂದಿಗೆ 45 ರನ್‌ ಪೇರಿಸಿ ಇನಿಂಗ್ಸ್‌ಗೆ ಶಕ್ತಿ ತುಂಬಿದರು. ತಂಡದ ಮೊತ್ತವು 150ರ ಗಡಿ ದಾಟಿತ್ತು. ಅರ್ಧಶತಕದತ್ತ ಹೆಜ್ಜೆ ಹಾಕಿದ್ದ ಹರ್ಲಿನ್  ಅವರು ರಮೀನ್ ಶಮೀಮ್ ಎಸೆತದಲ್ಲಿ ನಷ್ರಾ ಸಂಧುಗೆ ಕ್ಯಾಚಿತ್ತರು. ನಂತರ ಜೆಮಿಮಾ ಕೂಡ ನಿರ್ಗಮಿಸಿದರು. 

ಅನುಭವಿ ದೀಪ್ತಿ ಶರ್ಮಾ (25; 33ಎ, 4X1) ಮತ್ತು ಸ್ನೇಹ ರಾಣಾ  (20; 33ಎ, 4X2) ಅವರು ತಂಡದ ಮೊತ್ತ ಹೆಚ್ಚಿಸುವಲ್ಲಿ ಯಶಸ್ವಿಯಾದರು. 

ಎಂಟನೇ ಕ್ರಮಾಂಕದಲ್ಲಿ ಆಡಲಿಳಿದ ರಿಚಾ ಅವರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. 20 ಎಸೆತಗಳಲ್ಲಿ ಬೌಂಡರಿ ಮತ್ತು 2 ಸಿಕ್ಸರ್‌
ಗಳಿದ್ದ ಬಿರುಸಿನ 35 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಭಾರತ: 50 ಓವರ್‌ಗಳಲ್ಲಿ 247

(ಪ್ರತೀಕಾ ರಾವಲ್ 31, ಸ್ಮೃತಿ ಮಂದಾನ 23, ಹರ್ಲಿನ್ ಡಿಯೊಲ್ 46, ಜೆಮಿಮಾ ರಾಡ್ರಿಗಸ್ 32, ದೀಪ್ತಿ ಶರ್ಮಾ 25, ಸ್ನೇಹ ರಾಣಾ 20, ರಿಚಾ ಘೋಷ್ ಔಟಾಗದೇ 35, ಸಾದಿಯಾ ಇಕ್ಬಾಲ್ 47ಕ್ಕೆ2, ಡಯಾನಾ ಬೇಗ್ 69ಕ್ಕೆ4, ಫಾತೀಮಾ ಸನಾ 38ಕ್ಕೆ2)

ಪಾಕಿಸ್ತಾನ: 43 ಓವರ್‌ಗಳಲ್ಲಿ 159 (ಸಿದ್ರಾ ಅಮಿನ್ 81, ನತಾಲಿಯಾ ಪರ್ವೇಜ್ 33, ಕ್ರಾಂತಿ ಗೌಡ್ 20ಕ್ಕೆ3, ಸ್ನೇಹ ರಾಣಾ 38ಕ್ಕೆ2, ದೀಪ್ತಿ ಶರ್ಮಾ 45ಕ್ಕೆ3) ಫಲಿತಾಂಶ: ಭಾರತ ತಂಡಕ್ಕೆ 88 ರನ್‌ಗಳ ಜಯ.

ಪಂದ್ಯಶ್ರೇಷ್ಠ: ಕ್ರಾಂತಿ ಗೌಡ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.