ADVERTISEMENT

1992ರಲ್ಲಿ ಮೆಲ್ಬರ್ನ್‌ನಲ್ಲಿ ಇಮ್ರಾನ್‌ ಬಳಗದ ಮೋಡಿ

​ಪ್ರಜಾವಾಣಿ ವಾರ್ತೆ
Published 27 ಮೇ 2019, 2:59 IST
Last Updated 27 ಮೇ 2019, 2:59 IST
ಅಂಪೈರ್‌ಗೆ ಮನವಿ ಸಲ್ಲಿಸಿದ ವಸೀಂ ಅಕ್ರಂ
ಅಂಪೈರ್‌ಗೆ ಮನವಿ ಸಲ್ಲಿಸಿದ ವಸೀಂ ಅಕ್ರಂ   

‘ಈ ಬಾರಿ ಟ್ರೋಫಿ ಗೆಲ್ಲುವುದು ನಾವೇ’ –ವಿಶ್ವಕಪ್‌ ಟೂರ್ನಿಗೆ ಮುನ್ನ ಮೆಲ್ಬರ್ನ್‌ನಲ್ಲಿ ಸುತ್ತಾಡುವಾಗ ಪಾಕಿಸ್ತಾನ ತಂಡದ ನಾಯಕ ಇಮ್ರಾನ್‌ ಖಾನ್‌ ಅವರು ಟ್ಯಾಕ್ಸಿ ಚಾಲಕನಿಗೆ ನೀಡಿದ ಆಟೊಗ್ರಾಫ್‌ನಲ್ಲಿ ಈ ರೀತಿ ಬರೆದಿದ್ದರಂತೆ. ‘ಆತಿಥೇಯ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ತಂಡಗಳಂಥ ಘಟಾನುಘಟಿಗಳ ಮುಂದೆ ಪಾಕ್‌ ಎಲ್ಲಿ’ ಎಂದು ಆ ಚಾಲಕ ನಕ್ಕು ಸುಮ್ಮನಾಗಿದ್ದನಂತೆ. ಆದರೆ, 1992ರ ಮಾರ್ಚ್‌ 25ರಂದು ವಿಸ್ಮಯವೊಂದು ನಡೆದೇ ಹೋಯಿತು.

*ಮಾರ್ಚ್‌ 25ರಂದು ಮೆಲ್ಬರ್ನ್‌ ಕ್ರಿಕೆಟ್‌ ಮೈದಾನದಲ್ಲಿ ಫೈನಲ್‌ ಪಂದ್ಯ ವೀಕ್ಷಿಸಲು ಸುಮಾರು 87 ಸಾವಿರ ಪ್ರೇಕ್ಷಕರು ಸೇರಿದ್ದರು. ಆತಿಥೇಯ ರಾಷ್ಟ್ರಗಳು ಹೊರಬಿದ್ದಿದ್ದರೂ ಆ ಪರಿ ಜನ ಸೇರಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಈ ಸಂಖ್ಯೆ ಇದುವರೆಗೆ ದಾಖಲೆಯಾಗಿ ಉಳಿದುಕೊಂಡಿದೆ.

*ಪಾಕಿಸ್ತಾನ ಮೊದಲ ಬಾರಿ, ಇಂಗ್ಲೆಂಡ್‌ ಮೂರನೇ ಬಾರಿ ವಿಶ್ವಕಪ್‌ ಫೈನಲ್‌ ಪ್ರವೇಶಿಸಿದ್ದವು. ಈ ಟೂರ್ನಿಯ ಲೀಗ್‌ ಹಂತದಲ್ಲಿ ಇಂಗ್ಲೆಂಡ್‌ ವಿರುದ್ಧ ಪಾಕ್‌ ಕೇವಲ 74 ರನ್‌ಗಳಿಗೆ ಆಲೌಟಾಗಿತ್ತು. ಹೀಗಾಗಿ, ಜನರಲ್ಲಿ ಏನೋ ಕುತೂಹಲ.

ADVERTISEMENT

*ಫೈನಲ್‌ಗೂ ಮೊದಲು ಪಾಕ್‌ ತಂಡದ ನಾಯಕ ಇಮ್ರಾನ್‌ ಖಾನ್‌ ಸಭೆ ನಡೆಸುತ್ತಾರೆ. ಪ್ರತಿಯೊಬ್ಬರನ್ನು ಉದ್ದೇಶಿಸಿ, ‘ವಿಶ್ವ ಕ್ರಿಕೆಟ್‌ನಲ್ಲಿ ನಿನಗಿಂತ ಅತ್ಯುತ್ತಮ ಬ್ಯಾಟ್ಸ್‌ಮನ್‌ ಇಲ್ಲ, ಬೌಲರ್‌ ಇಲ್ಲ, ಫೀಲ್ಡರ್‌ ಇಲ್ಲ. ಪ್ರತಿಭೆ ತೋರಿಸಲು ಇದೊಂದು ಅತ್ಯುತ್ತಮ ಅವಕಾಶ’ ಎಂದು ಧೈರ್ಯ ತುಂಬುತ್ತಾರೆ.

*ಫೈನಲ್‌ ಶುರುವಾಗುತ್ತದೆ. ಟಾಸ್‌ ಗೆದ್ದು ಬ್ಯಾಟ್‌ ಮಾಡಲು ಮುಂದಾದ ಪಾಕ್‌ ತಂಡ 24 ರನ್‌ಗಳಾಗುವಷ್ಟರಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಳ್ಳುತ್ತದೆ. ಆಗ ಇಮ್ರಾನ್‌ ಹಾಗೂ ಜಾವೇದ್‌ ಮಿಯಾಂದಾದ್‌ ಜೊತೆಗೂಡುತ್ತಾರೆ. 9 ರನ್‌ ಗಳಿಸಿದ್ದಾಗ ಇಮ್ರಾನ್‌ಗೆ ಜೀವದಾನ ಸಿಗುತ್ತದೆ. ಅದು ಟರ್ನಿಂಗ್‌ ಪಾಯಿಂಟ್‌ ಕೂಡ.

*ಇಮ್ರಾನ್‌ (72), ಮಿಯಾಂದಾದ್‌ (58) ಮೂರನೇ ವಿಕೆಟ್‌ಗೆ ಮಹತ್ವದ 139 ರನ್‌ ಸೇರಿಸುತ್ತಾರೆ. ಕೊನೆಯಲ್ಲಿ ಇಂಜಮಾಮ್‌ ಉಲ್‌ ಹಕ್‌ (35 ಎಸೆತಗಳಲ್ಲಿ 42), ವಾಸೀಂ ಅಕ್ರಂ (18 ಎಸೆತಗಳಲ್ಲಿ 33) ಗುಡುಗಿದ್ದರಿಂದ ಪಾಕ್‌ 249 ರನ್‌ಗಳ ಸವಾಲಿನ ಮೊತ್ತ ಕಲೆಹಾಕಲು ಸಾಧ್ಯವಾಗುತ್ತದೆ.

*250 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ತಂಡದವರು ವಾಸೀಂ, ಹಕೀಬ್‌ ಜಾವೇದ್‌, ಮುಷ್ತಾಕ್‌ ಅಹ್ಮದ್‌ ದಾಳಿಗೆ ತತ್ತರಿಸಿ ಹೋದರು. ನೀಲ್‌ ಫೇರ್‌ಬ್ರದರ್‌ (62) ಅವರ ಆಟದ ಹೊರತಾಗಿಯೂ 227 ರನ್‌ಗಳಿಗೆ ಆಲೌಟಾದರು. ಪಾಕ್‌ಗೆ 22 ರನ್‌ಗಳ ಗೆಲುವು. ಮೊದಲ ಬಾರಿ ಚಾಂಪಿಯನ್‌ ಆದ ಈ ತಂಡದವರ ಸಂಭ್ರಮ ಮುಗಿಲು ಮುಟ್ಟಿದ್ದರೆ, ಆಂಗ್ಲರ ಕನಸು ಮತ್ತೊಮ್ಮೆ ನುಚ್ಚು ನೂರಾಯಿತು.

*ಫೈನಲ್‌ ಪಂದ್ಯದೊಂದಿಗೆ ಇಮ್ರಾನ್‌ ಖಾನ್‌ ವಿದಾಯ ಹೇಳಿದರು. ಆಗ ಅವರಿಗೆ 39 ವರ್ಷ ವಯಸ್ಸು.

*ನ್ಯೂಜಿಲೆಂಡ್‌ ತಂಡದ ನಾಯಕ ಮಾರ್ಟಿನ್‌ ಕ್ರೋವ್‌ ‘ಟೂರ್ನಿಯ ಶ್ರೇಷ್ಠ ಆಟಗಾರ’ರಾಗಿ ಹೊರಹೊಮ್ಮಿದರು. 9 ಪಂದ್ಯಗಳಿಂದ 456 ರನ್‌ ಗಳಿಸಿದರು.

*ವಾಸೀಂ ಅಕ್ರಂ 10 ಪಂದ್ಯಗಳಿಂದ 18 ವಿಕೆಟ್‌ ಕಬಳಿಸಿ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಎನಿಸಿದರು. ಫೈನಲ್ ಪಂದ್ಯದ ಶ್ರೇಷ್ಠ ಆಟಗಾರ ಕೂಡ. ಆಗ ಅವರಿಗೆ 25 ವರ್ಷ.

*ಕೇವಲ ಎಂಟು ಶತಕಗಳು ದಾಖಲಾದವು.

*ಹಲವು ಹೊಸ ಪ್ರಯೋಗಗಳಿಗೆ ಕಾರಣವಾದ 1992ರ ವಿಶ್ವಕಪ್‌ ಅಚ್ಚರಿ ಫಲಿತಾಂಶದೊಂದಿಗೆ ಕೊನೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.