ADVERTISEMENT

ವಿಶ್ವಕಪ್‌ ಫೈನಲ್‌ಗೆ ಇಂಗ್ಲೆಂಡ್‌; ಎಡವಿದ ಕಾಂಗರೂ ಪಡೆ

ವಿಶ್ವಕಪ್‌ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 2:26 IST
Last Updated 12 ಜುಲೈ 2019, 2:26 IST
   

ಬರ್ಮಿಂಗ್ಹ್ಯಾಂ: ಮೂರು ಬಾರಿ ವಿಶ್ವಕಪ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದ ಇಂಗ್ಲೆಂಡ್ ತಂಡವು ಐದು ಬಾರಿ ಚಾಂಪಿಯನ್‌ಗಳಾದ ಆಸ್ಟ್ರೇಲಿಯಾ ತಂಡದ ಎದುರು ಸೆಮಿಫೈನಲ್‌ನಲ್ಲಿ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಫೈನಲ್‌ ಪ್ರವೇಶಿಸಿದೆ.

1992ರ ನಂತರ ಇದೇ ಮೊದಲ ಬಾರಿಗೆ ಇಂಗ್ಲೆಂಡ್‌ ವಿಶ್ವಕಪ್‌ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ. ವಿಶ್ವಕಪ್‌ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಇಂಗ್ಲೆಂಡ್‌ ಅಂತಿಮ ಹಂತ ತಲುಪಿದಂತಾಗಿದೆ. ಭಾನುವಾರ(ಜು.14) ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್‌ ಎದುರು ಆತಿಥೇಯ ತಂಡ ಸೆಣಸಲಿದೆ.

ಕ್ಷಣಕ್ಷಣದ ಸ್ಕೋರ್‌:https://bit.ly/2XDjj3T

ADVERTISEMENT

ಕಾಂಗರೂ ಪಡೆ ನೀಡಿದ 224 ರನ್‌ ಸಾಧಾರಣ ಗುರಿಯ ಬೆನ್ನೇರಿದ ಇಂಗ್ಲೆಂಡ್‌, 2 ವಿಕೆಟ್‌ ಕಳೆದುಕೊಂಡು 32.1 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು. ಜೇಸನ್‌ ರಾಯ್‌ ಮತ್ತು ಜಾನಿ ಬೆಸ್ಟೊ ಆರಂಭಿಕ ಶತಕದ ಜತೆಯಾಟ ತಂಡಕ್ಕೆ ವಿಶ್ವಾಸ ತುಂಬಿತು. ಬಿರುಸಿನ ಆಟ ಪ್ರದರ್ಶಿದ ಜೇಸನ್‌ ರಾಯ್‌ 65 ಎಸೆತಗಳಲ್ಲಿ 5 ಸಿಕ್ಸರ್‌, 9 ಬೌಂಡರಿ ಸಹಿತ 85 ರನ್‌ ಕಲೆಹಾಕಿದರು. ಪ್ಯಾಟ್ ಕಮ್ಮಿನ್ಸ್‌ ಎಸೆತದಲ್ಲಿ ಕ್ಯಾಚ್‌ ನೀಡಿ ಆಟ ಮುಗಿಸಿದರು.

ತಾಳ್ಮೆ ಆಟವಾಡುತ್ತಿದ್ದ ಬೆಸ್ಟೊ, ಮಿಷೆಲ್‌ ಸ್ಟಾರ್ಕ್ ಎಸೆತದಲ್ಲಿ ಎಲ್‌ಬಿಡಬ್ಲ್ಯುಗೆ ಸಿಲುಕಿದರು. ನಂತರದಲ್ಲಿ ಜೋ ರೂಟ್‌ ಮತ್ತು ನಾಯಕ ಇಯಾನ್‌ ಮಾರ್ಗನ್‌ ಮತ್ತೊಂದು ಜತೆಯಾಟದ ಮೂಲಕ ತಂಡವನ್ನು ಬಹುಬೇಗ ಗೆಲುವಿನ ಗೆರೆ ದಾಟಿಸಿದರು.

ಮಾರ್ಗನ್‌ (45 ರನ್‌, 39, 8 ಬೌಂಡರಿ) ಮತ್ತು ರೂಟ್‌ (49 ರನ್‌, 46 ಎಸೆತ, 8 ಬೌಂಡರಿ) ಅಜೇಯರಾಗಿ ಉಳಿದರು.

ಸ್ಟಾರ್ಕ್ ದಾಖಲೆ: ಆಸ್ಟ್ರೇಲಿಯಾದ ವೇಗದ ಬೌಲರ್‌ ಮಿಷೆಲ್‌ ಸ್ಟಾರ್ಕ್‌, ಇಂದಿನ ಪಂದ್ಯದಲ್ಲಿ ಮೊದಲ ವಿಕೆಟ್‌ ಗಳಿಸುತ್ತಿದ್ದಂತ ವಿಶ್ವಕಪ್‌ ಇತಿಹಾಸದಲ್ಲಿ ಒಂದೇ ಟೂರ್ನಿಯಲ್ಲಿಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ದಾಖಲೆಮಾಡಿದರು. 29 ವರ್ಷದ ಸ್ಟಾರ್ಕ್ ಈ ಟೂರ್ನಿಯಲ್ಲಿ ಒಟ್ಟು 27 ವಿಕೆಟ್‌ ಪಡೆದಿದ್ದಾರೆ. 2007ರ ವಿಶ್ವಕಪ್‌ ಟೂರ್ನಿಯಲ್ಲಿ ಗ್ಲೆನ್‌ಮೆಗ್ರಾಥ್‌ 26 ವಿಕೆಟ್‌ ಪಡೆದ ದಾಖಲೆ ಹೊಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.