ADVERTISEMENT

ಟ್ವಿಟರ್‌ನಲ್ಲಿ ಹಾಸ್ಯ ಚಟಾಕಿಗಳ ‘ಮಳೆ’

ಮಳೆಯಿಂದಾಗಿ ಭಾರತ–ನ್ಯೂಜಿಲೆಂಡ್ ನಡುವಣ ಪಂದ್ಯ ರದ್ದು; ಇದುವರೆಗೆ ನಾಲ್ಕು ಪಂದ್ಯಗಳು ವರುಣನ ಪಾಲು

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 20:22 IST
Last Updated 13 ಜೂನ್ 2019, 20:22 IST
ಇಂಗ್ಲೆಂಡ್‌ನಲ್ಲಿ ಕ್ರಿಕೆಟ್‌ ಆಡುವ ಹೊಸ ಬಗೆ ಇದು ಎಂದು ಹಲವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಈ ಚಿತ್ರ ವೈರಲ್ ಆಗಿದೆ
ಇಂಗ್ಲೆಂಡ್‌ನಲ್ಲಿ ಕ್ರಿಕೆಟ್‌ ಆಡುವ ಹೊಸ ಬಗೆ ಇದು ಎಂದು ಹಲವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಈ ಚಿತ್ರ ವೈರಲ್ ಆಗಿದೆ   

ನಾಟಿಂಗಂ: ‘ಹವಾಮಾನ ಟಾಸ್ ಗೆದ್ದಿತು. ಮೊದಲು ಮಳೆ ಸುರಿಸಲು ನಿರ್ಧರಿಸಿತು’

***

ವಿಶ್ವಕಪ್ ಟೂರ್ನಿಯ ಪಾಯಿಂಟ್ ಪಟ್ಟಿ: ಮಳೆ (9), ಭಾರತ (4), ಇಂಗ್ಲೆಂಡ್ (4), ಆಸ್ಟ್ರೇಲಿಯಾ (6), ನ್ಯೂಜಿಲೆಂಡ್ (6)..

ADVERTISEMENT

***

ಒಂದಿಷ್ಟು ಮಳೆಯನ್ನು ಭಾರತಕ್ಕೆ ಕಳಿಸಿ. ಭಾರತದ ಆಟಗಾರರನ್ನು ಅಲ್ಲಿ ಅಡಲು ಬಿಡಿ.

***

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ತಂಡಗಳಿಗಿಂತ ಮಳೆಯಾಟವೇ ಜಾಸ್ತಿಯಾಯಿತು.

***

ಇಂಗ್ಲೆಂಡ್ ಮತ್ತು ವೇಲ್ಸ್‌ ಆಶ್ರಯದಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಗುರುವಾರ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಸಂಜೆ ಹೊತ್ತಿಗೆ ಮಳೆಯೂ ನಿಂತಿತ್ತು. ಆದರೆ ಟ್ವಿಟರ್‌ನಲ್ಲಿ ಹಾಸ್ಯ ಚಟಾಕಿಗಳ ಸುರಿಮಳೆ ನಿಂತಿಲ್ಲ. ಮೇಲಿನವು ಕೆಲವು ಮಾದರಿಗಳು ಮಾತ್ರ. ಆದರೆ ಮೊಗೆದಷ್ಟೂ ಚಟಾಕಿಗಳ ಗುಚ್ಛ ಸಿಗುತ್ತದೆ. ಮೀಮ್‌ಗಳು, ಜಿಫ್‌ ಫೈಲ್‌ಗಳು, ವಿಡಿಯೊ ಮತ್ತು ಬಗೆಬಗೆಯ ಚಿತ್ರಗಳು ಗಮನ ಸೆಳೆಯುತ್ತವೆ.

ಒಟ್ಟು ನಾಲ್ಕು ಪಂದ್ಯಗಳು ಮಳೆಗೆ ಆಹುತಿಯಾಗಿವೆ. ಮುಂದೆ ನಡೆಯಲಿರುವ ಇನ್ನೂ ಕೆಲವು ಪಂದ್ಯಗಳ ಸಂದರ್ಭದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ವಿಭಾಗದ ಮೂಲಗಳು ಹೇಳಿವೆ.

ಅದರಲ್ಲೂ ಭಾನುವಾರ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಣ ಪಂದ್ಯದ ಸಂದರ್ಭದಲ್ಲಿಯೂ ಮಳೆ ಬರಬಹುದು ಎಂದು ಹೇಳಲಾಗುತ್ತಿದೆ. ಇಡೀ ಟೂರ್ನಿಯ ಹೈವೋಲ್ಟೆಜ್ ಹೋರಾಟವೆಂದೇ ಬಿಂಬಿತವಾಗಿರುವ ಈ ಪಂದ್ಯ‌ದ ದಿನ ಮಳೆ ಬಾರದಿರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

‘ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆಗೆ ಮಳೆಯ ಬಗ್ಗೆ ಮೊದಲೇ ವರದಿ ಸಿಕ್ಕಿರಲಿಲ್ಲವೇ? ಅಷ್ಟು ಗೊತ್ತಿದ್ದರೂ ಏಕೆ ಈ ಋತುವಿನಲ್ಲಿ ಪಂದ್ಯಗಳನ್ನು ಆಯೋಜಿಸಬೇಕಿತ್ತು? ಹೆಸರಿಗೆ ಮಾತ್ರ ಬೇಸಿಗೆ. ಆದರೆ ಮಳೆಯೇ ಹೆಚ್ಚು’ ಎಂದು ಕೆಲವು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಂದ್ಯ ಆರಂಭವಾಗುವ ನಿರೀಕ್ಷೆಯಲ್ಲಿ ಕಾಯುತ್ತಿದ್ದ ಭಾರತದ ಅಭಿಮಾನಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಮುಖವಾಡ ತೊಟ್ಟು ಸಂಭ್ರಮಿಸಿದರು

ಒಳ್ಳೆಯ ನಿರ್ಧಾರ: ಟ್ರೆಂಟ್‌ಬ್ರಿಜ್‌ನಲ್ಲಿ ಪಂದ್ಯವನ್ನು ರದ್ದುಗೊಳಿಸಿರುವ ಅಂಪೈರ್‌ಗಳ ನಿರ್ಧಾರವನ್ನು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಶ್ಲಾಘಿಸಿದ್ದಾರೆ.

‘ಮೈದಾನದ ಹೊರಾಂಗಣ ಒದ್ದೆಯಾಗಿದೆ. ಆಡಲು ಯೋಗ್ಯವಾದ ಸ್ಥಿತಿ ಇಲ್ಲ. ಎರಡೂ ತಂಡಗಳಿಗೆ ತಲಾ ಒಂದು ಪಾಯಿಂಟ್ ಸಿಗುತ್ತಿರುವುದು ಒಳ್ಳೆಯದೇ’ ಎಂದು ಕೊಹ್ಲಿ ಹೇಳಿದ್ದಾರೆ.

‘ಕಳೆದ ನಾಲ್ಕು ದಿನಗಳಿಂದ ಸೂರ್ಯನ ಕಿರಣವನ್ನೇ ನೋಡಿಲ್ಲ. ಈ ರೀತಿ ಪಂದ್ಯ ಆಡುವ ಅವಕಾಶ ತಪ್ಪುವುದು ಒಳ್ಳೆಯದಲ್ಲ ನಿಜ. ಆದರೆ ಇದರಿಂದ ಆಟಗಾರರಿಗೆ ಒಂದಿಷ್ಟು ವಿಶ್ರಾಂತಿಯಂತೂ ದೊರೆಯುತ್ತಿದೆ. ಮುಂದಿನ ಸವಾಲುಗಳಿಗೆ ಸಿದ್ಧರಾಗಲು ಒಳ್ಳೆಯ ಅವಕಾಶ’ ಎಂದು ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಹೇಳಿದ್ದಾರೆ.

ಹಣ ಕಳೆದವರಅಳಲು
ನಾಟಿಂಗಂ (ಪಿಟಿಐ): ಒಂದೂ ಎಸೆತ ಕಾಣದೆ ರದ್ದಾದ ಪಂದ್ಯಗಳ ಪ್ರವೇಶ ಶುಲ್ಕವನ್ನು ಐಸಿಸಿಯು ಪ್ರೇಕ್ಷಕರಿಗೆ ಮರಳಿ ನೀಡಲಿದೆ. ಆದರೆ, ಕಾಳಸಂತೆಯಲ್ಲಿ ಖರೀದಿ ಮಾಡಿಕೊಂಡು ಬಂದವರಿಗೆ ಮೂಲಬೆಲೆ ಸಿಕ್ಕರೂ ಉಳಿದ ಹಣವನ್ನು ಕಳೆದುಕೊಳ್ಳುತ್ತಾರೆ.

‘ಒಟ್ಟು 70 ಸಾವಿರ ರೂಪಾಯಿ ಕೊಟ್ಟು ಟಿಕೆಟ್ ಖರೀದಿಸಿದ್ದೇನೆ. ಪಂದ್ಯ ರದ್ದಾಗಿರುವುದರಿಂದ ಬಹಳಷ್ಟು ಹಣ ನಷ್ಟವಾಗಲಿದೆ. ಮುಂಬರುವ ಪಾಕಿಸ್ತಾನ ಎದುರಿನ ಪಂದ್ಯಕ್ಕೆ ಕಾಳಸಂತೆಯಲ್ಲಿ ಒಂದು ಲಕ್ಷ ರೂಪಾಯಿಗೂ ಹೆಚ್ಚಿನ ಬೆಲೆ ಇದೆ. ಅದನ್ನು ಕೊಳ್ಳುವಷ್ಟು ಶಕ್ತಿ ನನಗಿಲ್ಲ’ ಎಂದು ಸಿಂಗಪುರದಿಂದ ಇಲ್ಲಿಗೆ ಪಂದ್ಯ ವೀಕ್ಷಿಸಲು ಬಂದಿರುವ ಸಾಫ್ಟ್‌ವೇರ್ ಎಂಜಿನಿಯರ್‌ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ಪಂದ್ಯಗಳ ಪ್ರಸಾರ ಹಕ್ಕು ಹೊಂದಿರುವ ಸಂಸ್ಥೆಗಳು ತುಸು ನಿರಾಳವಾಗಿವೆ. ಮಳೆಯಿಂದಾಗಿ ಪಂದ್ಯ ಸ್ಥಗಿತವಾಗಿ ಆದಾಯ ಖೋತಾ ಆದರೂ, ವಿಮೆ ಮಾಡಿರುವುದರಿಂದ ನಷ್ಟವಿಲ್ಲ ಎಂದು ಮೂಲಗಳು ತಿಳಿಸಿವೆ.

ಮೈದಾನದ ಸಿಬ್ಬಂದಿ ಕವರ್ಸ್ ತೆಗೆದುಕೊಂಡು ಪಿಚ್‌ನತ್ತ ಧಾವಿಸಿದರು –ಎಎಫ್‌ಪಿ ಚಿತ್ರಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.