ADVERTISEMENT

ವಿಶ್ವಕಪ್‌ ಫೈನಲ್‌ಗೆ ಎರಡು ಪಂದ್ಯ ಬಾಕಿ; ಪಾಯಿಂಟ್‌ ಪಟ್ಟಿಯಲ್ಲಿ ಭಾರತ ನಂ.1

ಮಂಗಳವಾರ ಸೆಮಿಫೈನಲ್‌

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 14:07 IST
Last Updated 7 ಜುಲೈ 2019, 14:07 IST
   

ಬೆಂಗಳೂರು:ಶ್ರೀಲಂಕಾ ಎದುರು ಏಳು ವಿಕೆಟ್‌ಗಳ ಗೆಲುವು ಸಾಧಿಸಿದ ಭಾರತ ತಂಡ ಪಾಯಿಂಟ್‌ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದರೆ, ದಕ್ಷಿಣ ಆಫ್ರಿಕಾ ವಿರುದ್ಧ 10 ರನ್‌ಗಳಿಂದ ಪರಾಭವಗೊಂಡ ಆಸ್ಟ್ರೇಲಿಯಾ ಎರಡನೇ ಸ್ಥಾನಕ್ಕಿಳಿದಿದೆ. ಇದರಿಂದಾಗಿ ಮೊದಲ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್‌ ಸವಾಲು ಎದುರಿಸಲಿದೆ.

ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಕೇವಲ ಒಂದು ಪಂದ್ಯದಲ್ಲಿ ಸೋಲು ಕಂಡಿರುವ ಏಕೈಕ ತಂಡ ಭಾರತ. ಒಂಬತ್ತು ಪಂದ್ಯಗಳ ಪೈಕಿ ಏಳು ಪಂದ್ಯಗಳಲ್ಲಿ ಗೆದ್ದಿರುವ ತಂಡ 15 ಪಾಯಿಂಟ್‌ಗಳೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ರೌಂಡ್‌ರಾಬಿನ್‌ ಹಣಾಹಣಿಯಲ್ಲಿ ಮಳೆಯ ಕಾರಣ ನ್ಯೂಜಿಲೆಂಡ್‌ ಎದುರಿನ ಪಂದ್ಯ ರದ್ದುಗೊಂಡಿತ್ತು. ಇದೇ ಮಂಗಳವಾರ(ಜು.9) ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ಭಾರತ ಮತ್ತು 11 ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿರುವ ಕಿವೀಸ್‌ ಪಡೆ ಸೆಣಸಲಿವೆ.

2015ರ ವಿಶ್ವಕಪ್ ಚಾಂಪಿಯನ್‌ ಆಸ್ಟ್ರೇಲಿಯಾ ಹದಿನಾಲ್ಕು ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, 12 ಪಾಯಿಂಟ್‌ ಹೊಂದಿರುವ ಆತಿಥೇಯ ಇಂಗ್ಲೆಂಡ್‌ ತಂಡ ಮೂರನೇ ಸ್ಥಾನದಲ್ಲಿದೆ. ಜುಲೈ 11ರಂದು ಗುರುವಾರ ಬರ್ಮಿಂಗ್‌ಹ್ಯಾಂನ ಎಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್‌ನಲ್ಲಿಕಾಂಗರೂ ಪಡೆ ಮತ್ತು ಇಂಗ್ಲೆಂಡ್‌ ಎದುರಾಗಲಿವೆ. ರೌಂಡ್‌ರಾಬಿನ್‌ ಹಂತದಲ್ಲಿ ಇಂಗ್ಲೆಂಡ್‌ ವಿರುದ್ಧ ಆಸ್ಟ್ರೇಲಿಯಾ 64 ರನ್‌ಗಳ ಭರ್ಜರಿ ಜಯ ಗಳಿಸಿತ್ತು.

ಪಾಯಿಂಟ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಅಫ್ಗಾನಿಸ್ತಾನ ತಂಡ ಟೂರ್ನಿಯ ಒಂಬತ್ತು ಪಂದ್ಯಗಳ ಪೈಕಿ ಒಂದರಲ್ಲೂ ಗೆಲುವು ಸಾಧಿಸದ ಏಕೈಕ ತಂಡ. ವಿಶ್ವಕಪ್‌ ಇತಿಹಾಸದಲ್ಲಿ ನಾಲ್ಕು ಬಾರಿ ಸೆಮಿಫೈನಲ್‌ ಪ್ರವೇಶಿಸಿರುವ ದಕ್ಷಿಣ ಆಫ್ರಿಕಾ ಈ ಬಾರಿ ಮೂರು ಪಂದ್ಯಗಳಲ್ಲಷ್ಟೇ ಗೆಲುವು ಪಡೆದು 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಸೆಮಿಫೈನಲ್‌ ಪ್ರವೇಶಕ್ಕಾಗಿ ಹೋರಾಟ ಹೋರಾಟ ನಡೆಸಿದ ಪಾಕಿಸ್ತಾನ 11 ಪಾಯಿಂಟ್‌ಗಳಿಸಿದರೂ ರನ್‌ರೇಟ್‌ ಲೆಕ್ಕಾಚಾರದಿಂದಾಗಿ 5ನೇ ಸ್ಥಾನದಲ್ಲೇ ಉಳಿಯಿತು.

ಸೆಮಿಫೈನಲ್‌ಗಳಲ್ಲಿ ಗೆಲುವು ಸಾಧಿಸುವ ತಂಡಗಳು ಜುಲೈ 14, ಭಾನುವಾರ ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಲಂಡನ್‌ನ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಫೈನಲ್‌ ಪಂದ್ಯ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.