ADVERTISEMENT

ಮೊದಲ ಜಯದ ವಿಶ್ವಾಸದಲ್ಲಿ ದಕ್ಷಿಣ ಆಫ್ರಿಕ

ಪಿಟಿಐ
Published 14 ಜೂನ್ 2019, 20:00 IST
Last Updated 14 ಜೂನ್ 2019, 20:00 IST
ಬ್ಯಾಟಿಂಗ್‌ ಅಭ್ಯಾಸದಲ್ಲಿ ತೊಡಗಿರುವ ಫಾಫ್‌ ಡುಪ್ಲೆಸಿ
ಬ್ಯಾಟಿಂಗ್‌ ಅಭ್ಯಾಸದಲ್ಲಿ ತೊಡಗಿರುವ ಫಾಫ್‌ ಡುಪ್ಲೆಸಿ   

ಕಾರ್ಡಿಫ್‌: ಟೂರ್ನಿಯಲ್ಲಿ ಒಂದೂ ಗೆಲುವನ್ನು ಕಾಣದ ಎರಡು ತಂಡಗಳೆಂದರೆ ದಕ್ಷಿಣ ಆಫ್ರಿಕ ಮತ್ತು ಅಫ್ಗಾನಿಸ್ತಾನ. ಪಾಯಿಂಟ್‌ ಪಟ್ಟಿಯಲ್ಲಿ ತಳದಲ್ಲಿರುವ ಈ ಎರಡು ತಂಡಗಳು ಶನಿವಾರ ಕಾರ್ಡಿಫ್‌ನಲ್ಲಿ ನಡೆಯುವ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಪ್ರಾಯಶಃ ಮೊದಲ ಬಾರಿ ದಕ್ಷಿಣ ಆಫ್ರಿಕಾ ಇಷ್ಟು ಬೇಗನೇ ಸೆಮಿಫೈನಲ್‌ ಅವಕಾಶದಿಂದ ಬಹುತೇಕ ದೂರವಾಗಿದೆ. ಅನನುಭವಿ ಬ್ಯಾಟಿಂಗ್‌ ಸರದಿಯಿಂದಾಗಿ ದಕ್ಷಿಣ ಆಫ್ರಿಕಾ ಈ ಟೂರ್ನಿಯ ಫೆವರೀಟ್‌ ತಂಡಗಳಲ್ಲೇನೂ ಒಂದಾಗಿರಲಿಲ್ಲ. ಆದರೆ ನಾಲ್ಕು ಪಂದ್ಯಗಳ ನಂತರವೂ ಹರಿಣಗಳ ತಂಡ ಗೆಲುವಿನ ಸವಿ ಕಾಣದಿರುವುದು ಅಚ್ಚರಿಯ ವಿಷಯವಾಗಿದೆ.

ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್‌, ನಂತರ ಬಾಂಗ್ಲಾದೇಶ, ಭಾರತ ತಂಡಗಳಿಗೆ ಶರಣಾದ ಫಾಫ್‌ ಡುಪ್ಲೆಸಿ ಬಳಗ ನಂತರ ಕೊನೆಗೂ ವೆಸ್ಟ್‌ ಇಂಡೀಸ್‌ ವಿರುದ್ಧ ‘ವರುಣನ ಕೃಪೆಯಿಂದ’ ಮೊದಲ ಪಾಯಿಂಟ್‌ ಪಡೆದಿತ್ತು.

ADVERTISEMENT

ಅಫ್ಗಾನಿಸ್ತಾನದ ಕಥೆ ಭಿನ್ನವಾಗಿಲ್ಲ. ಅದು ಮೊದಲ ಮೂರು ಪಂದ್ಯಗಳಲ್ಲಿ ಕ್ರಮವಾಗಿ ಆಸ್ಟ್ರೇಲಿಯಾ, ಶ್ರೀಲಂಕಾ, ನ್ಯೂಜಿಲೆಂಡ್‌ ವಿರುದ್ಧ ಸೋಲನುಭವಿಸಿದೆ. ಆದರೆ ಈ ಯುದ್ಧಪೀಡಿತ ರಾಷ್ಟ್ರದ ತಂಡ, ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಆಡಿದ ರೀತಿ ಗಮನಸೆಳೆದಿತ್ತು.

ಹಿನ್ನಡೆಯಿಂದ ಹೈರಾಣಾಗಿರುವ ದಕ್ಷಿಣ ಆಫ್ರಿಕಾ ಎದುರು ಗೆಲುವಿಗಾಗಿ ಅಫ್ಗಾನಿಸ್ತಾನ ತನ್ನೆಲ್ಲಾ ಸಾಮರ್ಥ್ಯ ಬಳಸಲಿದೆ. ಇನ್ನೊಂದೆಡೆ ‘ಏಷ್ಯದ ಕ್ರಿಕೆಟ್‌ ಕೂಸು’ ಎದುರು ಜಯಗಳಿಸುವ ಮೂಲಕ ಮೊದಲ ಗೆಲುವನ್ನು ಕಾಣಲು ದಕ್ಷಿಣ ಆಫ್ರಿಕ ತವಕದಿಂದ ಇದೆ.

ದಕ್ಷಿಣ ಆಫ್ರಿಕಾಕ್ಕೆ ಬ್ಯಾಟಿಂಗ್ ವಿಭಾಗದ ವೈಫಲ್ಯವೇ ಪ್ರಮುಖ ಚಿಂತೆಯ ವಿಷಯ. ಕೆಲವು ಆಟಗಾರರು ಗಾಯಾಳಾಗಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧ ಪಂದ್ಯ ಮಳೆಯಿಂದ ಕೊಚ್ಚಿಹೋಗುವ ಮೊದಲು ಕೂಡ ದಕ್ಷಿಣ ಆಫ್ರಿಕ 29 ರನ್ನಿಗೆ 2 ವಿಕೆಟ್‌ ಕಳೆದುಕೊಂಡು ಕುಂಟುತಿತ್ತು. ಅನುಭವಿ ಹಾಶಿಂ ಆಮ್ಲ ರನ್‌ ಬರಗಾಲ ಎದುರಿಸುತ್ತಿದ್ದಾರೆ. ಆಫ್ರಿಕಾ ತಂಡ ಚೇತರಿಸಿಕೊಳ್ಳಬೇಕಾದರೆ ಅವರು ಲಯಕ್ಕೆ ಮರಳಬೇಕಿದೆ. ಫಾಫ್‌ ಡುಪ್ಲೆಸಿ, ಕ್ವಿಂಟನ್‌ ಡಿಕಾಕ್‌, ಜೆ.ಪಿ.ಡುಮಿನಿ ಅವರ ಮೇಲೂ ಹೆಚ್ಚಿನ ಹೊಣೆಯಿದೆ. ಬೌಲಿಂಗ್‌ ವಿಭಾಗದಲ್ಲಿ ಡೇಲ್‌ ಸ್ಟೇನ್‌ ಇಲ್ಲದಿರುವುದು ಈಗಾಗಲೇ ಪರಿಣಾಮ ಬೀರಿದೆ.

ಅಫ್ಗಾನಿಸ್ತಾನ ಬ್ಯಾಟಿಂಗ್ ವಿಭಾಗದಲ್ಲೇ ಹೆಚ್ಚು ಸಮಸ್ಯೆ ಎದುರಿಸಿದೆ. ಪ್ರಮುಖ ಆಟಗಾರ ಮೊಹಮದ್‌ ಶಹಜಾದ್‌ ಗಾಯಾಳಾಗಿ ತವರಿಗೆ ಮರಳಿ‌ದ್ದಾರೆ. ಕಗಿಸೊ ರಬಾಡ, ಇಮ್ರಾನ್‌ ತಾಹಿರ್‌ ಅವರ ದಾಳಿಯನ್ನು ತಂಡ ಹೇಗೆ ಎದುರಿಸುತ್ತದೆ ಎಂಬುದು ಕುತೂಹಲಕರ. ಆದರೆ ಬೌಲಿಂಗ್ ವಿಭಾಗದಲ್ಲಿ ಸ್ವಲ್ಪ ಪರಿಣಾಮಕಾರಿ ಪ್ರದರ್ಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.