ADVERTISEMENT

ಗೆಲುವಿನ ಹಾದಿಗೆ ಮರಳಿದ ಆಸ್ಟ್ರೇಲಿಯಾ

ಏಜೆನ್ಸೀಸ್
Published 12 ಜೂನ್ 2019, 19:27 IST
Last Updated 12 ಜೂನ್ 2019, 19:27 IST
   

ಟಾಂಟನ್: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಬುಧವಾರ ಮತ್ತೆ ಜಯದ ಹಾದಿಗೆ ಮರಳಿತು. ಡೇವಿಡ್ ವಾರ್ನರ್ ಶತಕ ಗಳಿಸಿ ತಂಡಕ್ಕೆ ಜಯದ ಕಾಣಿಕೆ ನೀಡಿದರು.

ನಾಲ್ಕು ದಿನಗಳ ಹಿಂದೆ ಭಾರತದ ವಿರುದ್ಧ ಸೋತಿದ್ದ ಆಸ್ಟ್ರೇಲಿಯಾ ತಂಡವು ಇಲ್ಲಿ ಪಾಕಿಸ್ತಾನ ಎದುರು 41 ರನ್‌ಗಳಿಂದ ಗೆದ್ದಿತು. ಟಾಸ್ ಗೆದ್ದ ಪಾಕಿಸ್ತಾನ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ಆಸ್ಟ್ರೇಲಿಯಾದ ಆರಂಭಿಕ ಜೋಡಿ ಡೇವಿಡ್ ವಾರ್ನರ್ (107; 111ಎಸೆತ, 11ಬೌಂಡರಿ 1ಸಿಕ್ಸರ್) ಮತ್ತು ಲಯಕ್ಕೆ ಮರಳಿದ ಆ್ಯರನ್ ಫಿಂಚ್ (82; 84ಎಸೆತ, 6ಬೌಂಡರಿ, 4ಸಿಕ್ಸರ್) ಅವರು ಮೊದಲ ವಿಕೆಟ್‌ ಜೊತೆಯಾಟದಲ್ಲಿ 146 ರನ್ ಗಳಿಸಿದರು. ಇದರಿಂದಾಗಿ ಆಸ್ಟ್ರೇಲಿಯಾ ತಂಡವು 49 ಓವರ್‌ಗಳಲ್ಲಿ 307 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಾಕ್ ತಂಡವು 45.4 ಓವರ್‌ಗಳಲ್ಲಿ 266 ರನ್‌ ಗಳಿಸಿತು. ಆರಂಭಿಕ ಬ್ಯಾಟ್ಸ್‌ಮನ್ ಇಮಾಮ್ ಉಲ್ ಹಕ್ (53 ರನ್) ಅವರ ಅರ್ಧಶತಕ ವ್ಯರ್ಥವಾಯಿತು.

ADVERTISEMENT

ಪಾಕ್ ತಂಡವು ಒಂದು ಹಂತದಲ್ಲಿ 33.5 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 200 ರನ್‌ ಗಳಿಸಿತ್ತು. ಈ ವೇಳೆ ಜೊತೆಗೂಡಿದ ನಾಯಕ ಸರ್ಫರಾಜ್ ಅಹಮದ್ (40 ರನ್) ಮತ್ತು ವಹಾಬ್ ರಿಯಾಜ್ (45; 39ಎಸೆತ, 2ಬೌಂಡರಿ, 3ಸಿಕ್ಸರ್) ಎಂಟನೇ ವಿಕೆಟ್‌ಗೆ 64 ರನ್‌ಗಳನ್ನು ಸೇರಿಸಿದರು. ಇದರಿಂದಾಗಿ ಗೆಲುವಿನ ಆಸೆ ಚಿಗುರಿತ್ತು. 45ನೇ ಓವರ್‌ನಲ್ಲಿ ಆ್ಯರನ್ ಫಿಂಚ್ ಮತ್ತು ವಿಕೆಟ್‌ಕೀಪರ್ ಅಲೆಕ್ಸ್‌ ಕ್ಯಾರಿ ಅವರು ಬಳಸಿಕೊಂಡ ಯುಡಿಆರ್‌ಎಸ್ (ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ) ಪಂದ್ಯಕ್ಕೆ ತಿರುವು ನೀಡಿತು. ಮಿಷೆಲ್ ಸ್ಟಾರ್ಕ್ ಅವರ ಎಸೆತದಲ್ಲಿ ಚೆಂಡು ರಿಯಾಜ್ ಬ್ಯಾಟ್‌ ಅಂಚನ್ನು ನವಿರಾಗಿ ಸವರಿ ಹೋಗಿ ಕೀಪರ್ ಕೈಸೇರಿತ್ತು. ಆದರೆ, ಅದನ್ನು ಅಂಪೈರ್ ಗುರುತಿಸಿರಲಿಲ್ಲ. ಡಿಆರ್‌ಎಸ್‌ನಲ್ಲಿ ಸ್ಪಷ್ಟವಾಯಿತು.

ವಾರ್ನರ್ ಶತಕ: ಹೋದ ಮೂರು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಆಸ್ಟ್ರೇಲಿಯಾ ನಾಯಕ ಫಿಂಚ್ ಅವರಿಗೆ 13ನೇ ಓವರ್‌ನಲ್ಲಿ ಜೀವದಾನ ಲಭಿಸಿತು. ವಹಾಬ್ ರಿಯಾಜ್ ಬೌಲಿಂಗ್‌ನಲ್ಲಿ ಫಿಂಚ್ ಕ್ಯಾಚ್‌ ಅನ್ನು ಆಸಿಫ್ ಅಲಿ ಕೈಚೆಲ್ಲಿದ್ದರು. ಇದು ಪಾಕ್ ತಂಡಕ್ಕೆ ದುಬಾರಿಯಾಯಿತು. ಫಿಂಚ್ ಅಬ್ಬರಿಸಿದರು. 23ನೇ ಓವರ್‌ನಲ್ಲಿ ಅವರು ಔಟಾದರು.

ಇನ್ನೊಂದು ಬದಿಯಲ್ಲಿದ್ದ ಡೇವಿಡ್ ವಾರ್ನರ್ ತಮ್ಮ ಆಟಕ್ಕೆ ವೇಗ ನೀಡಿದರು. ಅವರು ದಿಟ್ಟವಾಗಿ ಬೌಲರ್‌ಗಳನ್ನು ಎದುರಿಸುತ್ತಿದ್ದರೆ, ಇನ್ನೊಂದೆಡೆ ಉಳಿದವರು ಹೆಚ್ಚು ಹೋರಾಟ ಮಾಡದೇ ಪೆವಿಲಿಯನ್‌ಗೆ ಮರಳಿದರು. ವಾರ್ನರ್‌ 102 ಎಸೆತಗಳಲ್ಲಿ ಶತಕ ದಾಖಲಿಸಿದರು. ಏಕದಿನ ಕ್ರಿಕೆಟ್‌ನಲ್ಲಿ ಇದು ಅವರ 15ನೇ ಶತಕ. ಈ ಟೂರ್ನಿಯಲ್ಲಿ ಮೊದಲನೆಯದ್ದು. ಹೋದ ವರ್ಷ ಚೆಂಡು ವಿರೂಪ ಪ್ರಕರಣದಲ್ಲಿ ಅವರು ಒಂದು ವರ್ಷದ ನಿಷೇಧ ಶಿಕ್ಷೆ ಅನುಭವಿಸಿದ್ದು. ಅದರ ನಂತರ ಆಡಿದ ಮೊದಲ ಟೂರ್ನಿ ಇದಾಗಿದೆ.

ಅಮೀರ್ ಐದರ ಗುಚ್ಛ: ಪಾಕಿಸ್ತಾನದ ಮೊಹಮ್ಮದ್ ಅಮೀರ್ (30ಕ್ಕೆ5) ಅವರ ಅಮೋಘ ಬೌಲಿಂಗ್‌ನಿಂದಾಗಿ ಆಸ್ಟ್ರೇಲಿಯಾ ಬೃಹತ್ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.

ಮೊದಲ ವಿಕೆಟ್ ಜೊತೆಯಾಟದಲ್ಲಿ ಹರಿದುಬಂದ ರನ್‌ಗಳನ್ನು ನೋಡಿದಾಗ ಆಸ್ಟ್ರೇಲಿಯಾ ತಂಡವು ಬಹುತೇಕ 370–380 ರನ್‌ಗಳನ್ನು ಗಳಿಸುವ ಅವಕಾಶ ಇತ್ತು. ಅಮೀರ್ 23ನೇ ಓವರ್‌ನಲ್ಲಿ ಫಿಂಚ್ ವಿಕೆಟ್ ಪಡೆದರು. ನಂತರ ಶಾನ್ ಮಾರ್ಷ್, ಉಸ್ಮಾನ್ ಖ್ವಾಜಾ, ಅಲೆಕ್ಸ್ ಕ್ಯಾರಿ ಮತ್ತು ಮಿಷೆಲ್ ಸ್ಟಾರ್ಕ್‌ ವಿಕೆಟ್‌ಗಳನ್ನು ಕಬಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.