ADVERTISEMENT

ವಿಶ್ವಕಪ್‌ 1999 : ಮರೆಯಲಾಗದ ಕ್ಲೂಸ್ನರ್ ಆಟದ ಸೊಬಗು

ವಿಶ್ವಕಪ್‌ ಹೆಜ್ಜೆಗುರುತು

​ಪ್ರಜಾವಾಣಿ ವಾರ್ತೆ
Published 27 ಮೇ 2019, 3:07 IST
Last Updated 27 ಮೇ 2019, 3:07 IST
ಲ್ಯಾನ್ಸ್ ಕ್ಲೂಸ್ನರ್
ಲ್ಯಾನ್ಸ್ ಕ್ಲೂಸ್ನರ್   

ವಿಶ್ವ ಮಟ್ಟದ ಕ್ರಿಕೆಟ್‌ಗೆ 22 ವರ್ಷಗಳ ನಂತರ ಮರುಪ್ರವೇಶ ಪಡೆದ ಏಳೆಂಟು ವರ್ಷಗಳಲ್ಲೇ ದಕ್ಷಿಣ ಆಫ್ರಿಕಾ ಬಲಾಢ್ಯ ತಂಡವಾಗಿ ಬೆಳೆದದ್ದು ಗೊತ್ತೇ ಇದೆ. 1992ರಲ್ಲಿ ಮಳೆ ಬಂದ ಕಾರಣ ನಿಯಮಗಳಿಂದ ಫೈನಲ್ ಪ್ರವೇಶಿಸಲಾಗದ ನೋವು ತಂಡವನ್ನು ಕಾಡಿತ್ತು. 1999ರಲ್ಲಿ ಸೆಮಿಫೈನಲ್ಸ್ ಪ್ರವೇಶಿಸಿದ್ದರಿಂದ ಅದರ ಆತ್ಮಬಲ ಹೆಚ್ಚಾಗಿತ್ತು. ಆದರೆ ಈ ತಂಡದಿಂದ ವಿಶ್ವಕಪ್‌ನ ಅತಿ ಶ್ರೇಷ್ಠ ಪಂದ್ಯಗಳಲ್ಲಿ ಒಂದು ಎನಿಸಿದ ಆಟ ಹೊಮ್ಮುತ್ತದೆ ಎಂದು ಎಷ್ಟೋ ಜನ ಊಹಿಸಿಯೇ ಇರಲಿಲ್ಲ.

* ಎಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ಮುಖಾಮುಖಿ. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 68 ರನ್‌ಗಳಾಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತು (ಪಾಂಟಿಂಗ್ 37). ಅಲನ್ ಡೊನಾಲ್ಡ್, ಜಾಕ್ ಕಾಲಿಸ್ ಅಂಥ ಪೆಟ್ಟು ಕೊಟ್ಟರು.

* ಆಪದ್ಬಾಂಧವ ಎನಿಸಿದ್ದ ಮೈಕಲ್ ಬೆವನ್ ಹಾಗೂ ನಾಯಕ ಸ್ಟೀವ್ ವಾ (56, 6 ಬೌಂಡರಿ, 1 ಸಿಕ್ಸರ್) ನಿಧಾನವಾಗಿ ಇನಿಂಗ್ಸ್ ಕಟ್ಟಿದರು. ವಾ ಹಾಗೂ ಟಾಮ್ ಮೂಡಿ ವಿಕೆಟ್‌ಗಳನ್ನು ಕಡಿಮೆ ರನ್‌ಗಳ ಅಂತರದಲ್ಲಿ ಪಡೆಯುವ ಮೂಲಕ ಶಾನ್ ಪೊಲಾಕ್ ಮತ್ತೆ ತಮ್ಮ ತಂಡ ಮೇಲುಗೈ ಪಡೆಯುವಂತೆ ಮಾಡಿದರು. ಬೆವನ್ (65, 6 ಬೌಂಡರಿ) ಸಂಯಮದಿಂದಾಗಿ ಆಸ್ಟ್ರೇಲಿಯಾ 213 ರನ್‌ಗಳನ್ನು ದಾಖಲಿಸಿತು. ಪೊಲಾಕ್ ಹಾಗೂ ಡೊನಾಲ್ಡ್ ಕ್ರಮವಾಗಿ 5 ಹಾಗೂ 4 ವಿಕೆಟ್ ಪಡೆದರು.

ADVERTISEMENT

* 13ನೇ ಓವರ್ ಹೊತ್ತಿಗೆ 48 ರನ್ ಗಳಿಸಿ ಒಂದೂ ವಿಕೆಟ್ ಕಳೆದುಕೊಳ್ಳದೆ ಉತ್ತಮ ಸ್ಥಿತಿಯಲ್ಲಿತ್ತು ದಕ್ಷಿಣ ಆಫ್ರಿಕಾ. ಆಗ ಶೇನ್ ವಾರ್ನ್ ಲೆಗ್ ಬ್ರೇಕ್ ಮೋಡಿ ಮಾಡಿತು. ಹರ್ಷೆಲ್ ಗಿಬ್ಸ್‌ಗೆ (30, 6 ಬೌಂಡರಿ) ತಾವು ಬೌಲ್ಡ್ ಆದದ್ದು ಹೇಗೆ ಎನ್ನುವುದೇ ಗೊತ್ತಾಗಲಿಲ್ಲ. ಮರು ಓವರ್‌ನಲ್ಲೇ ಗ್ಯಾರಿ ಕರ್ಸ್ಟನ್ ಹಾಗೂ ನಾಯಕ ಹ್ಯಾನ್ಸಿ ಕ್ರೋನಿಯೆ ವಿಕೆಟ್‌ಗಳನ್ನೂ ವಾರ್ನ್ ಪಡೆದರು. ನೋಡ ನೋಡುತ್ತಲೇ ದಕ್ಷಿಣ ಆಫ್ರಿಕಾ 61ಕ್ಕೆ 4 ವಿಕೆಟ್ ಕಳೆದುಕೊಂಡು ಕಷ್ಟಕ್ಕೆ ಸಿಲುಕಿತು.

* ಜಾಂಟಿ ರೋಡ್ಸ್ (43, 2 ಬೌಂಡರಿ, 1 ಸಿಕ್ಸರ್) ಹಾಗೂ ಜಾಕ್ ಕಾಲಿಸ್ (53, 3 ಬೌಂಡರಿ) 84 ರನ್‌ಗಳ ಜತೆಯಾಟ ಆಡಿದರು. ಪಾಲ್ ರೀಫೆಲ್ ಎಸೆತವನ್ನು ಪುಲ್ ಮಾಡುವ ಯತ್ನದಲ್ಲಿ ರೋಡ್ಸ್, ಬೆವನ್‌ಗೆ ಕ್ಯಾಚಿತ್ತಾಗ ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು 58 ಎಸೆತಗಳಲ್ಲಿ 69 ರನ್ ಬೇಕಿತ್ತು.

* ಕಾಲಿಸ್ ವಿಕೆಟ್ ಕಳೆದುಕೊಂಡಾಗ 31 ಎಸೆತಗಳಲ್ಲಿ 39 ರನ್‌ಗಳ ಅಗತ್ಯ (175/6). ವಾರ್ನ್ ಎಸೆತಗಳಲ್ಲಿ ಶಾನ್ ಪೊಲಾಕ್ ಒಂದು ಬೌಂಡರಿ, ಸಿಕ್ಸರ್ ಗಳಿಸಿದ್ದರಿಂದ ಈ ಸ್ಥಿತಿಗೆ ಬಂತು.

* ಟೂರ್ನಿಯುದ್ದಕ್ಕೂ ಗಮನಸೆಳೆದಿದ್ದ ಲಾನ್ಸ್ ಕ್ಲೂಸ್ನರ್ ಮೇಲೆ ಎಲ್ಲರ ವಿಶ್ವಾಸ. 8 ಎಸೆತಗಳಲ್ಲಿ 16 ರನ್‌ಗಳು ಬೇಕಿದ್ದವು. ಮೆಕ್‌ಗ್ರಾ ಎಸೆತವನ್ನು ಸ್ಟ್ರೇಟ್ ಡೌನ್ ದಿ ಗ್ರೌಂಡ್ ಹೊಡೆದದ್ದೇ ರಫೆಲ್ ಅಂದಾಜು ಮಾಡುವಲ್ಲಿ ವಿಫಲರಾದರು. ಅದು ಸಿಕ್ಸರ್ ಆದದ್ದೇ ದಕ್ಷಿಣ ಆಫ್ರಿಕಾ ಅಭಿಮಾನಿಗಳಲ್ಲಿ ಪುಳಕ. ಮುಂದಿನ ಎಸೆತದಲ್ಲಿ ಅವರು ಒಂದು ರನ್ ತೆಗೆದುಕೊಂಡು ಸ್ಟ್ರೈಕ್ ಉಳಿಸಿಕೊಂಡರು.

* ಕೊನೆಯ ಓವರ್‌ನಲ್ಲಿ 9 ರನ್ ಬೇಕಿದ್ದು, ಒಂದೇ ವಿಕೆಟ್ ಉಳಿದಿತ್ತು. ಫ್ಲೆಮಿಂಗ್ ಅರೌಂಡ್ ದಿ ವಿಕೆಟ್ ಬೌಲ್ ಮಾಡಿದರು. ಮೊದಲ ಎಸೆತವನ್ನೇ ಕ್ಲೂಸ್ನರ್ ಕವರ್ಸ್ ದಿಕ್ಕಿನಲ್ಲಿ ಬೌಂಡರಿಗೆ ಅಟ್ಟಿದರು. ವೈಡ್ ಲಾಂಗ್ ಆಫ್‌ನತ್ತ ಎರಡನೇ ಎಸೆತವನ್ನೂ ಡ್ರೈವ್ ಮಾಡಿ ಬೌಂಡರಿ ಗಿಟ್ಟಿಸಿದಾಗ ಪ್ರೇಕ್ಷಕರು ಕುರ್ಚಿ ತುದಿಗೆ ಬಂದರು. ಮೂರನೇ ಎಸೆತದಲ್ಲಿ ರನ್ ಬರಲಿಲ್ಲ. ನಾಲ್ಕನೇ ಎಸೆತದಲ್ಲಿ ರನ್ ಕದಿಯುವ ಭರದಲ್ಲಿ ಅಲನ್ ಡೊನಾಲ್ಡ್ ರನ್ ಔಟಾದರು. ಅಲ್ಲಿಗೆ ದಕ್ಷಿಣ ಆಫ್ರಿಕಾ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದ್ದರಿಂದ ಪಂದ್ಯ ಟೈ.

* ಕ್ಲೂಸ್ನರ್ 16 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸೇರಿದ್ದ 31 ರನ್ ಗಳಿಸಿ ಔಟಾಗದೆ ಉಳಿದರಾದರೂ ಭಾರವಾದ ಹೆಜ್ಜೆ ಹಾಕಿದ್ದರು. 4 ವಿಕೆಟ್ ಪಡೆದ ಶೇನ್ ವಾರ್ನ್‌ಗೆ ಪಂದ್ಯ ಪುರುಷೋತ್ತಮ ಗೌರವ.

* ‘ಸೂಪರ್ ಸಿಕ್ಸರ್’ನ ಪಾಯಿಂಟ್ ಗಳಿಕೆಯಲ್ಲಿ ಮುಂದಿದ್ದ ಲೆಕ್ಕಾಚಾರದಿಂದಾಗಿ ಆಸ್ಟ್ರೇಲಿಯಾ ಫೈನಲ್‌ಗೆ ಪ್ರವೇಶಿಸಿತು. ದಕ್ಷಿಣ ಆಫ್ರಿಕಾಕ್ಕೆ ಮತ್ತೆ ನಿರಾಸೆ ಕಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.