ADVERTISEMENT

CWC | ನೆದರ್ಲೆಂಡ್ಸ್‌ ವಿರುದ್ಧ ಪಂದ್ಯ: ಗರ್ಜಿಸಬಲ್ಲವೇ ಬಾಂಗ್ಲಾ ಹುಲಿಗಳು?

ಪಿಟಿಐ
Published 27 ಅಕ್ಟೋಬರ್ 2023, 12:33 IST
Last Updated 27 ಅಕ್ಟೋಬರ್ 2023, 12:33 IST
 ಬಾಂಗ್ಲಾ ಆಟಗಾರರ ಸಂಭ್ರಮ
ಬಾಂಗ್ಲಾ ಆಟಗಾರರ ಸಂಭ್ರಮ    

ಕೋಲ್ಕತ್ತ: ಸೆಮಿಫೈನಲ್ ತಲುಪುವ ಕ್ಷೀಣ ಆಸೆಯನ್ನು ಉಳಿಸಿಕೊಂಡಿರುವ ಬಾಂಗ್ಲಾದೇಶ ತಂಡ ಶನಿವಾರ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ನೆದರ್ಲೆಂಡ್ಸ್‌ ತಂಡವನ್ನು ಎದುರಿಸಲಿದೆ. ಎರಡೂ ತಂಡಗಳು ಐದು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದಿದ್ದು ನಿರ್ಗಮನದ ಹಾದಿಯಲ್ಲಿವೆ.

ಇದು ಹಾಲಿ ವಿಶ್ವಕಪ್‌ನಲ್ಲಿ ಕೋಲ್ಕತ್ತದ ಹೆಗ್ಗುರುತಾದ ಈ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಪಂದ್ಯವೂ ಆಗಿದೆ. ಈ ವಿಶ್ವಕಪ್‌ನಲ್ಲಿ  ಐದು ಪಂದ್ಯಗಳಿಗೆ ಈ ಕ್ರೀಡಾಂಗಣ ಆತಿಥ್ಯ ವಹಿಸಲಿದ್ದು, ಇದರಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಪಂದ್ಯವೂ ಒಳಗೊಂಡಿದೆ. ಎರಡನೇ ಸೆಮಿಫೈನಲ್ ಪಂದ್ಯಕ್ಕೂ ಇದೇ ಮೈದಾನ ವೇದಿಕೆಯಾಗಿದೆ.

ಈ ಟೂರ್ನಿಯಲ್ಲಿ ಅಫ್ಗಾನಿಸ್ತಾನ ವಿರುದ್ಧ ಅರ್ಹ ಗೆಲುವಿನೊಡನೆ ಅಭಿಯಾನ ಆರಂಭಿಸಿದ್ದ ‘ಬಾಂಗ್ಲಾ ಹುಲಿಗಳ’ ಆರ್ಭಟ ನಂತರ ಕ್ಷೀಣವಾಗಿದೆ. ಸ್ಥಿರ ಪ್ರದರ್ಶನ ನೀಡುವಲ್ಲಿ ತಂಡ ಸೋತಿದೆ. ಇನ್ನು ಆ ತಂಡವು ಮುಂದಿನ ಪಂದ್ಯಗಳಲ್ಲಿ ಇಂಗ್ಲೆಂಡ್‌, ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಆಡಬೇಕಾಗಿದೆ. ಹೀಗಾಗಿ ಅದರ ಹಾದಿ ದುರ್ಗಮವಾಗಿದೆ.

ADVERTISEMENT

ಸತತ ನಾಲ್ಕು ಸೋಲುಗಳಿಂದ ತಂಡದೊಳಗಿನ ವಾತಾವರಣ ಕದಡಿದೆ. ನಾಯಕ ಶಕಿಬ್ ಅಲ್ ಹಸನ್ ತವರಿಗೆ ತರಳಿ ಬಾಲ್ಯದ ಕೋಚ್ ನಜ್ಮುಲ್ ಫಾಹಿಂ ಅವರಿಂದ ತ್ರಿಕ ಸಮಸ್ಯೆಗಳಿಗೆ ಪರಿಹಾರ ಕೇಳಿಕೊಂಡುಬಂದಿದ್ದಾರೆ. ನಾಲ್ಕು ಇನಿಂಗ್ಸ್‌ಗಳಿಂದ ಅವರು 56 ರನ್‌ ಮಾತ್ರ ಗಳಿಸಿದ್ದಾರೆ. ಆರು ವಿಕೆಟ್‌ಗಳನ್ನು ಪಡೆದಿದ್ದಾರೆ. ಐಪಿಎಲ್‌ನಲ್ಲಿ ತಮ್ಮ ತವರು ಮೈದಾನದಲ್ಲಿ ಅವರು ಎಂದಿನ ಆಲ್‌ರೌಂಡ್ ಆಟ ಪ್ರದರ್ಶಿಸುವರೊ ಎಂಬ ಕುತೂಹಲ ಮೂಡಿದೆ.

ಎಡಗೈ ಬ್ಯಾಟರ್ ನಜ್ಮುಲ್ ಹೊಸೇನ್ ಶಾಂತೊ ಅವರೂ ರನ್ ಬರ ಎದುರಿಸುತ್ತಿದ್ದಾರೆ. ಇದು ತಂಡಕ್ಕೆ ದೊಡ್ಡ ಹಿನ್ನಡೆ. ಏಷ್ಯಾ ಕಪ್‌ನಲ್ಲಿ ಮಿಂಚಿದ್ದ ತೌಹಿದ್ ಹೃದಯ್ ಕತೆ ಬೇರೆಯಲ್ಲ. ಅನುಭವಿ ಬ್ಯಾಟರ್ ಮಹಮುದುಲ್ಲಾ ಒಂದು ಶತಕ ಗಳಿಸಿದ್ದು ತಂಡಕ್ಕೆ ಚೂರು ನೆಮ್ಮದಿ ಮೂಡಿಸಿದೆ. ಲಿಟ್ಟನ್ ದಾಸ್‌ ಅವರೂ ಎರಡು ಅರ್ಧ ಶತಕ ಗಳಿಸಿದ್ದಾರೆ. ಬೌಲಿಂಗ್‌ನಲ್ಲೂ ಯಾರೂ ಸ್ಥಿರ ಪ್ರದರ್ಶನ ನೀಡುತ್ತಿಲ್ಲ.

ಈಗ ಅಬ್ಬರಿಸುತ್ತಿರುವ ದಕ್ಷಿಣ ಆಫ್ರಿಕಾಕ್ಕೆ ಧರ್ಮಶಾಲಾದಲ್ಲಿ ‘ಶಾಕ್‌’ ನೀಡಿದ್ದ ನೆದರ್ಲೆಂಡ್ಸ್‌ ನಂತರ ಅಂತಹದ್ದೇ ಸ್ಫೂರ್ತಿಯುತ ಪ್ರದರ್ಶನ ನೀಡಿಲ್ಲ. ಈ ಪಂದ್ಯದ ನಂತರ ಶ್ರೀಲಂಕಾಕ್ಕೆ ಸೋತ ಡಚ್‌ ಪಡೆ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 309 ರನ್‌ಗಳ ಮುಖಭಂಗ ಅನುಭವಿಸಬೇಕಾಯಿತು.

ಗಾಯಗೊಂಡ ಬಾಂಗ್ಲಾಹುಲಿಗಳು ಎಷ್ಟರ ಮಟ್ಟಿಗೆ ಗರ್ಜಿಸಬಹುದೆಂಬುದಷ್ಟೇ ಉಳಿದಿರುವ ಕುತೂಹಲ.

ಈ ತಂಡಗಳು ಹಿಂದೆ ಎರಡು ಬಾರಿ ಎದುರಾಳಿಗಳಾಗಿದ್ದು ತಲಾ ಒಂದು ಪಂದ್ಯ ಗೆದ್ದಿವೆ.

‌ಪಂದ್ಯ ಆರಂಭ: ಮಧ್ಯಾಹ್ನ 2.00 ಗಂಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.