ADVERTISEMENT

WPL–2023 | ಮುಂಬೈ ಇಂಡಿಯನ್ಸ್‌ಗೆ 156 ರನ್ ಗುರಿ ನೀಡಿದ ಆರ್‌ಸಿಬಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಮಾರ್ಚ್ 2023, 16:02 IST
Last Updated 6 ಮಾರ್ಚ್ 2023, 16:02 IST
ಹರ್ಮನ್‌ಪ್ರೀತ್‌ ಕೌರ್‌ ಹಾಗೂ ಸ್ಮೃತಿ ಮಂದಾನ (ಚಿತ್ರಕೃಪೆ: @mipaltan)
ಹರ್ಮನ್‌ಪ್ರೀತ್‌ ಕೌರ್‌ ಹಾಗೂ ಸ್ಮೃತಿ ಮಂದಾನ (ಚಿತ್ರಕೃಪೆ: @mipaltan)   

ಮುಂಬೈ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಮಹಿಳಾ ತಂಡವು ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಯ ಮುಂಬೈ ಇಂಡಿಯನ್ಸ್‌ ವಿರುದ್ಧ 18.4 ಓವರ್‌ಗಳಲ್ಲಿ 155 ರನ್‌ ಗಳಿಸಿ ಆಲೌಟ್‌ ಆಗಿದೆ.

ಇಲ್ಲಿನ ಬ್ರೆಬೋರ್ನ್‌ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿಗೆ ನಾಯಕಿ ಸ್ಮೃತಿ ಮಂದಾನ ಹಾಗೂ ಸೋಫಿ ಡಿವೈನ್‌ ಜೋಡಿ ಬಿರುಸಿನ ಆರಂಭ ನೀಡಿದರು. ಇವರಿಬ್ಬರು ಕೇವಲ 4.1 ಓವರ್‌ಗಳಲ್ಲಿ 39 ರನ್‌ ಗಳಿಸಿ, ಉತ್ತಮ ಜೊತೆಯಾಟದ ಮುನ್ನುಗ್ಗಿದ್ದರು. ಆದರೆ, ಈ ಹಂತದಲ್ಲಿ ಸೈಕಾ ಇಷಕ್ಯೂ ಆರ್‌ಸಿಬಿಗೆ ಆಘಾತ ನೀಡಿದರು. ಒಂದೇ ಓವರ್‌ನಲ್ಲಿ ಸೋಫಿ (16) ಹಾಗೂ ದಿಶಾ ಕಾಸತ್‌ (0) ವಿಕೆಟ್ ಪಡೆದು ತಮ್ಮ ತಂಡಕ್ಕೆ ನೆರವಾದರು.

ನಂತರದ ಓವರ್‌ನಲ್ಲಿ ನಾಯಕಿ ಸ್ಮೃತಿ (23) ಹಾಗೂ ಹೆಥರ್ ನೈಟ್‌ (0) ಅವರನ್ನು ಹೀಲಿ ಮ್ಯಾಥ್ಯೂಸ್‌ ಪೆವಿಲಿಯನ್‌ಗೆ ಅಟ್ಟಿದರು. ಕೇವಲ 4 ರನ್ ಅಂತರದಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡದ್ದು ಆರ್‌ಸಿಬಿಗೆ ಹಿನ್ನಡೆಯಾಯಿತು.

ADVERTISEMENT

ರಿಚಾ ಘೋಷ್‌ (28), ಕನಿಕಾ ಅಹುಜಾ (22), ಶ್ರೇಯಾಂಕಾ ಪಾಟಿಲ್‌ (23) ಹಾಗೂ ಮೇಗನ್‌ ಶುಟ್‌ (20) ಕೆಳ ಕ್ರಮಾಂಕದಲ್ಲಿ ಉಪಯುಕ್ತ ಆಟವಾಡಿದರು. ಹೀಗಾಗಿ ತಂಡದ ಮೊತ್ತ 150ರ ಗಡಿ ದಾಟಲು ಸಾಧ್ಯವಾಯಿತು.

ಮುಂಬೈ ಪರ ಹೀಲಿ ಮ್ಯಾಥ್ಯೂಸ್‌ 3 ವಿಕೆಟ್‌ ಪಡೆದರೆ, ಸೈಕಾ ಇಷಕ್ಯೂ ಹಾಗೂ ಅಮೇಲಿಯಾ ಕೆರ್‌ ತಲಾ ಎರಡು ವಿಕೆಟ್‌ ಪಡೆದರು. ಸ್ಕೀವರ್‌ ಬ್ರಂಟ್ ಮತ್ತು ಪೂಜಾ ವಸ್ತ್ರಾಕರ್‌ ಒಂದೊಂದು ವಿಕೆಟ್‌ ಹಂಚಿಕೊಂಡರು. ಹೀಗಾಗಿ ಆರ್‌ಸಿಬಿ ಇನ್ನೂ 8 ಎಸೆತಗಳು ಬಾಕಿ ಇರುವಂತೆಯೇ ಸರ್ವಪತನ ಕಂಡಿತು.

ಹರ್ಮನ್‌ಪ್ರೀತ್‌ ಕೌರ್‌ ಪಡೆ ಗೆಲ್ಲಲು 156 ರನ್‌ ಗಳಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.