ADVERTISEMENT

WPL 2025: ತವರಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ಗೆ ಮಣಿದ ಆರ್‌ಸಿಬಿ

ಗಿರೀಶದೊಡ್ಡಮನಿ
Published 21 ಫೆಬ್ರುವರಿ 2025, 18:02 IST
Last Updated 21 ಫೆಬ್ರುವರಿ 2025, 18:02 IST
   

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯದ ಸಂಭ್ರಮ ಆಚರಿಸುವ ಅವಕಾಶ ಸಿಗಲಿಲ್ಲ. ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಅಮನ್ಜೋತ್ ಕೌರ್ ಅವರ ಜೊತೆಯಾಟಕ್ಕೇ ಜಯ ಒಲಿಯಿತು.

ಇಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ 3ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವು 4 ವಿಕೆಟ್‌ಗಳಿಂದ ರೋಚಕ ಜಯ ಸಾಧಿಸಿದಾಗ, ಇನಿಂಗ್ಸ್‌ನಲ್ಲಿ ಇನ್ನೊಂದು ಎಸೆತ ಮಾತ್ರ ಬಾಕಿ ಇತ್ತು. ವಡೋದರಾದಲ್ಲಿ ನಡೆದಿದ್ದ ಟೂರ್ನಿಯ ಮೊದಲ ಸುತ್ತಿನ ಎರಡು ಪಂದ್ಯಗಳಲ್ಲಿ ಆರ್‌ಸಿಬಿ ಜಯಿಸಿತ್ತು. ತವರಿನಂಗಳದಲ್ಲಿ ಆಡಿದ ಮೊದಲ ಪಂದ್ಯದಲ್ಲಿಯೂ ಗೆದ್ದ ಹ್ಯಾಟ್ರಿಕ್ ಸಾಧಿಸುವ ವಿಶ್ವಾಸದಲ್ಲಿತ್ತು.

168 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಮುಂಬೈ ತಂಡದ ಆರಂಭ ಉತ್ತಮವಾಗಿರಲಿಲ್ಲ. ಮೊದಲ ವಿಕೆಟ್ ಪತನವಾದಾಗ 9 ರನ್‌ಗಳಷ್ಟೇ ತಂಡದ ಖಾತೆಯಲ್ಲಿದ್ದವು. ಹೆಲಿ ಮ್ಯಾಥ್ಯೂಸ್ (15 ರನ್) ಮತ್ತು ನ್ಯಾಟ್ ಶಿವರ್ ಬ್ರಂಟ್ (42; 21ಎ, 4X9) ಚೇತರಿಕೆ ನೀಡಿದರು. ಇದರಿಂದಾಗಿ ಪವರ್‌ಪ್ಲೇನಲ್ಲಿಯೇ ತಂಡವು 66 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿತು.

ADVERTISEMENT

ಈ ಹಂತದಲ್ಲಿ ಕ್ರೀಸ್‌ಗೆ ಬಂದ ನಾಯಕಿ ಹರ್ಮನ್ ಲಯ ಕಂಡುಕೊಂಡರು. ಆದರೆ ಕಿಮ್ ಗಾರ್ಥ್ ಅವರ ಓವರ್‌ ನಲ್ಲಿ ಬ್ರಂಟ್ ಮತ್ತು ಜಾರ್ಜಿಯಾ ಬೌಲಿಂಗ್‌ನಲ್ಲಿ ಅಮೆಲಿಯಾ ಕೆರ್ ಔಟಾದರು. ಇದರಿಂದಾಗಿ ರನ್‌ ಗಳಿಕೆ ವೇಗ ಕುಂಠಿತವಾಯಿತು.

ಹರ್ಮನ್ ಜೊತೆಗೂಡಿದ ಅಮನ್ ಅವರು 5ನೇ ವಿಕೆಟ್ ಜೊತೆಯಾಟದಲ್ಲಿ 62 ರನ್ ಸೇರಿಸಿ ತಂಡದಲ್ಲಿ ಗೆಲುವಿನ ಭರವಸೆ ಮೂಡಿಸಿದರು.

ಜಾರ್ಜಿಯಾಗೂ ತಪ್ಪಿದ ಹ್ಯಾಟ್ರಿಕ್: 18ನೇ ಓವರ್‌ನಲ್ಲಿ ಜಾರ್ಜಿಯಾ ಅವರು ಸತತ ಎರಡು ಎಸೆತಗಳಲ್ಲಿ ಹರ್ಮನ್‌ಪ್ರೀತ್ (50; 38ಎ, 4X8) ಮತ್ತು ಸಜೀವನ್ ಸಜನಾ ಅವರ ವಿಕೆಟ್ ಗಳಿಸಿದರು. ನಂತರದ ಎಸೆತದಲ್ಲಿ ಅವರಿಗೆ ಹ್ಯಾಟ್ರಿಕ್ ಗಳಿಸುವ ಅವಕಾಶವನ್ನು ಯುವ ಬ್ಯಾಟರ್ ಜಿ. ಕಮಲಿನಿ ತಪ್ಪಿಸಿದರು. ಅಮನ್‌ (ಔಟಾಗದೆ 34; 27ಎ, 4X2, 6X2) ಮತ್ತು ಕಮಲಿನಿ (ಔಟಾಗದೇ 11) ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಕೊನೆಯ ಎರಡು ಓವರ್‌ಗಳಲ್ಲಿ 22 ರನ್‌ಗಳ ಅವಶ್ಯಕತೆ ಮುಂಬೈಗೆ ಇತ್ತು. ಕನಿಕಾ ಅಹುಜಾ ಹಾಕಿದ ಈ ಓವರ್‌ನ ಮೊದಲ ಹಾಗೂ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಅಮನ್‌ ಗೆಲುವಿಗೆ ಮತ್ತಷ್ಟು ಹತ್ತಿರವಾದರು. ಕೊನೆಯ ಓವರ್‌ನಲ್ಲಿ ಬೇಕಾದ 6 ರನ್‌ ಬೇಕಾಗಿದ್ದವು. ಇಬ್ಬರೂ ಬ್ಯಾಟರ್‌ಗಳು ತಾಳ್ಮೆಯಿಂದ ಗುರಿ ಸಾಧಿಸಿದರು.

ಸಂಕ್ಷಿಪ್ತ ಸ್ಕೋರು:

ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್‌ಗಳಲ್ಲಿ 7ಕ್ಕೆ 167 (ಸ್ಮೃತಿ ಮಂದಾನ 26, ಎಲಿಸ್ ಪೆರಿ 81, ರಿಚಾ ಘೋಷ್ 28, ಶಬ್ನಿಮ್ ಇಸ್ಮಾಯಿಲ್ 36ಕ್ಕೆ1, ನ್ಯಾಟ್ ಶಿವರ್ ಬ್ರಂಟ್ 40ಕ್ಕೆ1, ಹೆಲಿ ಮ್ಯಾಥ್ಯೂಸ್ 37ಕ್ಕೆ1, ಸಂಸ್ಕೃತಿ ಗುಪ್ತಾ 3ಕ್ಕೆ1, ಅಮನಜ್ಯೋತ್ ಕೌರ್ 22ಕ್ಕೆ3)

ಮುಂಬೈ ಇಂಡಿಯನ್ಸ್‌ : 19.5 ಓವರ್‌ಗಳಲ್ಲಿ 6ಕ್ಕೆ170 (ಶಿವರ್ ಬ್ರಂಟ್ 42, ಹರ್ಮನ್‌ಪ್ರೀತ್ ಕೌರ್ 50, ಅಮನ್ಜೋತ್ ಕೌರ್ ಔಟಾಗದೇ 34, ಜಿ. ಕಮಲಿನಿ ಔಟಾಗದೇ 11, ಗಾರ್ಥ್ 30ಕ್ಕೆ2, ವೇರ್‌ಹ್ಯಾಮ್ 21ಕ್ಕೆ3) ಫಲಿತಾಂಶ:ಮುಂಬೈ ಇಂಡಿಯನ್ಸ್‌ಗೆ 4 ವಿಕೆಟ್ ಜಯ. ಪಂದ್ಯದ ಆಟಗಾರ್ತಿ: ಅಮನ್ಜೋತ್ ಕೌರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.