ADVERTISEMENT

WPL–2025: ಮುಂಬೈಗೆ ಮಣಿದ ವಾರಿಯರ್ಸ್‌– ಅಮೆಲಿಯಾಗೆ ಐದು ವಿಕೆಟ್‌, ಹೆಲಿ ಅರ್ಧಶತಕ

ಮುಂಬೈ ಇಂಡಿಯನ್ಸ್‌ ತಂಡವು ಮಹಿಳಾ ಪ್ರೀಮಿಯರ್ ಲೀಗ್‌ನ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಯು.ಪಿ. ವಾರಿಯರ್ಸ್‌ ತಂಡವನ್ನು ಮಣಿಸಿತು.

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2025, 18:11 IST
Last Updated 6 ಮಾರ್ಚ್ 2025, 18:11 IST
<div class="paragraphs"><p>ಮುಂಬೈ ಇಂಡಿಯನ್ಸ್ ತಂಡದ ಅಮೆಲಿಯಾ ಕೆರ್ –ಪ್ರಜಾವಾಣಿ ಸಂಗ್ರಹ ಚಿತ್ರ</p></div>

ಮುಂಬೈ ಇಂಡಿಯನ್ಸ್ ತಂಡದ ಅಮೆಲಿಯಾ ಕೆರ್ –ಪ್ರಜಾವಾಣಿ ಸಂಗ್ರಹ ಚಿತ್ರ

   

ಲಖನೌ: ಅಮೆಲಿಯಾ ಕೆರ್ (38ಕ್ಕೆ5) ಪರಿಣಾಮಕಾರಿ ಬೌಲಿಂಗ್‌ ಬಳಿಕ ಹೆಲಿ ಮ್ಯಾಥ್ಯೂಸ್ (68;46ಎ) ಅವರ ಅರ್ಧಶತಕದ ಬಲದಿಂದ ಮುಂಬೈ ಇಂಡಿಯನ್ಸ್‌ ತಂಡವು ಮಹಿಳಾ ಪ್ರೀಮಿಯರ್ ಲೀಗ್‌ನ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಯು.ಪಿ. ವಾರಿಯರ್ಸ್‌ ತಂಡವನ್ನು ಮಣಿಸಿತು.

ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಮುಂಬೈ ತಂಡವು ಹ್ಯಾಟ್ರಿಕ್‌ ಗೆಲುವಿನೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆಯಿತು. ಜೊತೆಗೆ ಪ್ಲೇ ಆಫ್‌ ಸ್ಥಾನಕ್ಕೆ ಮತ್ತಷ್ಟು ಹತ್ತಿರವಾಯಿತು. ಮತ್ತೊಂದೆಡೆ ಸತತ ಮೂರು ಪಂದ್ಯಗಳಲ್ಲಿ ಸೋತ ವಾರಿಯರ್ಸ್ ತಂಡವು ಪ್ಲೇ ಆಫ್‌ ರೇಸ್‌ನಿಂದ ಹೊರಬಿತ್ತು.

ADVERTISEMENT

ಎಕನಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಆತಿಥೇಯ ವಾರಿಯರ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 150 ರನ್ ಗಳಿಸಿತ್ತು. ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಮುಂಬೈ ತಂಡವು 9 ಎಸೆತ ಬಾಕಿ ಇರುವಂತೆ 4 ವಿಕೆಟ್‌ಗೆ 153 ರನ್‌ ಗಳಿಸಿ ಗೆಲುವು ಸಾಧಿಸಿತು.

ಆರಂಭಿಕ ಬ್ಯಾಟರ್‌ ಅಮೆಲಿಯಾ (10) ನಿರಾಸೆ ಮೂಡಿಸಿದರೂ ಹೆಲಿ ಮತ್ತು ನಾಟ್ ಸಿವರ್ ಬ್ರಂಟ್ (37;23ಎ) ಅವರು ಎರಡನೇ ವಿಕೆಟ್‌ ಜೊತೆಯಾಟದಲ್ಲಿ 92 ರನ್‌ ಸೇರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಕೊನೆಯಲ್ಲಿ ಅಮನ್‌ಜೋತ್ ಕೌರ್ (ಔಟಾಗದೇ 12) ಮತ್ತು ಯಸ್ತಿಕಾ ಭಾಟಿಯಾ (ಔಟಾಗದೇ 10) ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮೊದಲು ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಫೀಲ್ಡಿಂಗ್‌ ಆಯ್ದುಕೊಂಡಿತು. ವಾರಿಯರ್ಸ್ ತಂಡಕ್ಕೆ ಗ್ರೇಸ್ ಹ್ಯಾರಿಸ್ (28; 25ಎ, 4X3, 6X1) ಮತ್ತು ಜಾರ್ಜಿಯಾ ವೊಲ್ (55; 33ಎ, 4X12) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 74 ರನ್ ಸೇರಿಸಿದರು. ಕೇವಲ 8 ಓವರ್‌ಗಳಲ್ಲಿ ಈ ಮೊತ್ತ ದಾಖಲಾಯಿತು. ಹೆಲಿ ಮ್ಯಾಥ್ಯೂಸ್ ಬೌಲಿಂಗ್‌ನಲ್ಲಿ ಗ್ರೇಸ್ ಹ್ಯಾರಿಸ್‌ ಔಟಾಗುವುದರೊಂದಿಗೆ ಜೊತೆಯಾಟ ಮುರಿಯಿತು.

ನಂತರದ ಆಟದಲ್ಲಿ ಕಿವೀಸ್ ಆಟಗಾರ್ತಿ ಅಮೆಲಿಯಾ ಅವರದ್ದೇ ಪಾರುಪತ್ಯ. ಕಿರಣ್ ನವಗಿರೆ, ನಾಯಕಿ ದೀಪ್ತಿ ಶರ್ಮಾ, ವೃಂದಾ ದಿನೇಶ್‌ ಮತ್ತು ಷಿನೆಲಿ ಹೆನ್ರಿ ಅವರ ವಿಕೆಟ್‌ಗಳನ್ನು ಕಬಳಿಸಿದರು. ಕೊನೆಯಲ್ಲಿ ಮಿಂಚುತ್ತಿದ್ದ ಸೋಫಿ ಎಕ್ಲೆಸ್ಟೊನ್ ಅವರಿಗೂ ಅಮೆಲಿಯಾ ಪೆವಿಲಿಯನ್ ದಾರಿ ತೋರಿಸಿದರು.

ಸಂಕ್ಷಿಪ್ತ ಸ್ಕೋರು: ಯು.ಪಿ ವಾರಿಯರ್ಸ್: 20 ಓವರ್‌ಗಳಲ್ಲಿ 9ಕ್ಕೆ150 (ಗ್ರೇಸ್ ಹ್ಯಾರಿಸ್ 28, ಜಾರ್ಜಿಯಾ ವೊಲ್ 55, ದೀಪ್ತಿ ಶರ್ಮಾ 27, ವೃಂದಾ ದಿನೇಶ್ 10, ಸೋಫಿ ಎಕ್ಲೆಸ್ಟೊನ್ 16, ಅಮೆಲಿಯಾ ಕೇರ್ 38ಕ್ಕೆ5, ಹೆಲಿ ಮ್ಯಾಥ್ಯೂಸ್ 25ಕ್ಕೆ2). ಮುಂಬೈ ಇಂಡಿಯನ್ಸ್: 18.3 ಓವರ್‌ಗಳಲ್ಲಿ 4ಕ್ಕೆ 153 (ಹೆಲಿ ಮ್ಯಾಥ್ಯೂಸ್‌ 68, ನಾಟ್ ಸಿವರ್ ಬ್ರಂಟ್ 37; ಗ್ರೇಸ್ ಹ್ಯಾರಿಸ್ 11ಕ್ಕೆ 2). ಪಂದ್ಯದ ಆಟಗಾರ್ತಿ: ಹೆಲಿ ಮ್ಯಾಥ್ಯೂಸ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.