
ಗುಜರಾತ್ ಜೈಂಟ್ಸ್ ತಂಡದ ಆ್ಯಷ್ಲೆ ಗಾರ್ಡನರ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಜೆಮಿಮಾ ರಾಡ್ರಿಗಸ್
ವಡೋದರಾ: ಕಳೆದ ಮೂರು ಆವೃತ್ತಿಗಳಲ್ಲಿ ರನ್ನರ್ಸ್ ಅಪ್ ಆಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮಂಗಳವಾರ ಮಹಿಳಾ ಪ್ರೀಮಿಯರ್ ಲೀಗ್‌ನ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.
ಹಾಲಿ ಆವೃತ್ತಿಯಲ್ಲಿ ಕೊನೆಯ ಹಂತದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಜೆಮಿಮಾ ರಾಡ್ರಿಗಸ್ ನಾಯಕತ್ವದ ತಂಡವು ಲೀಗ್ ಹಂತದಲ್ಲಿ ಅಗ್ರ ಮೂರರಲ್ಲಿ ಸ್ಥಾನ ಪಡೆದಿದೆ. ಇದುವರೆಗಿನ ನಾಲ್ಕು ಋತುಗಳಲ್ಲಿ ಪ್ಲೇ ಆಫ್‌ಗೆ ಅರ್ಹತೆ ಪಡೆದ ಏಕೈಕ ತಂಡ ಇದಾಗಿದೆ.
ಸತತ ನಾಲ್ಕನೇ ಬಾರಿ ಫೈನಲ್ ಪ್ರವೇಶದ ಕನಸು ಕಾಣುತ್ತಿರುವ ಡೆಲ್ಲಿ ತಂಡವು ಹಾಲಿ ಆವೃತ್ತಿಯಲ್ಲಿ ಮಿಶ್ರ ಫಲಿತಾಂಶವನ್ನು ಹೊಂದಿದೆ. ಆಡಿದ ಎಂಟು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದರೆ, ಉಳಿದ ಪಂದ್ಯಗಳನ್ನು ಸೋತಿದೆ.
ಡೆಲ್ಲಿ ತಂಡದ ಬೌಲಿಂಗ್ ವಿಭಾಗವನ್ನು ವೇಗಿ ನಂದನಿ ಶರ್ಮಾ ಮುನ್ನಡೆಸುತ್ತಿದ್ದಾರೆ. ಅವರು ಡೆತ್ ಬೌಲಿಂಗ್‌ನಲ್ಲಿ ಪರಿಣಾಮಕಾರಿ ಎನಿಸಿದ್ದಾರೆ. ಅವರಿಗೆ ಎಡಗೈ ಸ್ಪಿನ್ನರ್ ಶ್ರೀಚರಣಿ (14) ಮತ್ತು ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಮರೈಝಾನ್ ಕಾಪ್ (10) ಉತ್ತಮ ಬೆಂಬಲ ನೀಡಿದ್ದಾರೆ.
ದಕ್ಷಿಣ ಆಫ್ರಿಕಾದ ಮತ್ತೊಬ್ಬ ಆಟಗಾರ್ತಿ ಲಾರಾ ವೋಲ್ವಾರ್ಟ್ (241 ರನ್‌ಗಳು) ಮತ್ತು ಲಿಜೆಲ್ ಲೀ (240) ಅವರು ಬ್ಯಾಟಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ (208) ಅವರಿಂದ ನಿರೀಕ್ಷಿತ ಆಟ ಮೂಡಿಬರದಿರುವುದು ತಂಡಕ್ಕೆ ಹಿನ್ನಡೆಯಾಗಿದೆ.
ಮತ್ತೊಂದೆಡೆ ಮೂರು ಪಂದ್ಯಗಳ ಸತತ ಸೋಲಿನಿಂದ ಚೇತರಿಸಿಕೊಂಡ ನಂತರ ಗುಜರಾತ್ ಜೈಂಟ್ಸ್ ತಂಡವು ಉತ್ತಮ ಪ್ರದರ್ಶನ ನೀಡಿ ಎಲಿಮಿನೇಟರ್‌ಗೆ ಪ್ರವೇಶಿಸಿದೆ. ಕೊನೆಯ ಮೂರು ಪಂದ್ಯಗಳಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಆತ್ಮವಿಶ್ವಾಸ ವನ್ನು ಹೆಚ್ಚಿಸಿಕೊಂಡಿದೆ.
ಲೀಗ್ ಹಂತದ ಎರಡೂ ಪಂದ್ಯಗಳಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿರುವುದರಿಂದ ಜೈಂಟ್ಸ್ ತಂಡವು ಮತ್ತೆ ಪ್ರಾಬಲ್ಯ ಸಾಧಿಸಿ, ಮೊದಲ ಬಾರಿ ಪ್ರಶಸ್ತಿ ಸುತ್ತಿಗೇರುವ ಛಲದಲ್ಲಿದೆ. ಎಲಿಮಿನೇಟರ್ ಪಂದ್ಯದ ವಿಜೇತರು ಇದೇ 5ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದ್ದಾರೆ.
ಪಂದ್ಯ ಆರಂಭ: ರಾತ್ರಿ 7.30, ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.