ADVERTISEMENT

WPL: ಮಂದಾನ ಪಡೆಗೆ ಗುಜರಾತ್ ಜೈಂಟ್ಸ್‌ ಸವಾಲು; ಅಜೇಯ ಓಟದತ್ತ ಆರ್‌ಸಿಬಿ ಚಿತ್ತ

ವಡೋದರದಲ್ಲಿ ಇಂದು: ಶ್ರೇಯಾಂಕಾ ಮೇಲೆ ನಿರೀಕ್ಷೆ

ಪಿಟಿಐ
Published 18 ಜನವರಿ 2026, 23:30 IST
Last Updated 18 ಜನವರಿ 2026, 23:30 IST
ಶ್ರೇಯಾಂಕಾ ಪಾಟೀಲ 
ಶ್ರೇಯಾಂಕಾ ಪಾಟೀಲ    

ವಡೋದರ: ನವಿ ಮುಂಬೈನ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಡಿದ ಎಲ್ಲ ನಾಲ್ಕು ಪಂದ್ಯಗಳನ್ನೂ ಗೆದ್ದಿದೆ. ಸೋಮವಾರ ಕೊತಂಬಿಯಲ್ಲಿ ನಡೆಯುವ ಮಹಿಳಾ ಪ್ರಿಮಿಯರ್ ಲೀಗ್ (ಡಬ್ಲ್ಯುಪಿಎಲ್) ಪಂದ್ಯದಲ್ಲಿಯೂ ಗೆಲುವಿನ ಓಟ ಮುಂದುವರಿಸುವ ಛಲದಲ್ಲಿದೆ. ಇಲ್ಲಿ ತಂಡವು ಗುಜರಾತ್ ಜೈಂಟ್ಸ್ ವಿರುದ್ಧ ಸೆಣಸಲಿದೆ.

ಆರ್‌ಸಿಬಿ ವನಿತೆಯರು ಈ ಟೂರ್ನಿಯಲ್ಲಿ ಅಮೋಘ ಆರಂಭ ಮಾಡಿದ್ದಾರೆ. ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿದ್ದಾರೆ. ನಾಯಕಿ ಸ್ಮೃತಿ ಮಂದಾನ ಅವರು ಶನಿವಾರದ ಪಂದ್ಯದಲ್ಲಿ 96 ರನ್ ಗಳಿಸಿದ್ದರು. ಬಹುದಿನಗಳ ನಂತರ ಅವರು ತಮ್ಮ ಲಯಕ್ಕೆ ಮರಳಿದ್ದು, ತಂಡದ ಶಕ್ತಿ ಹೆಚ್ಚಿಸಿದೆ. ಆರಂಭಿಕ ಬ್ಯಾಟರ್ ಗ್ರೇಸ್ ಹ್ಯಾರಿಸ್ ಕೂಡ ಉತ್ತಮವಾಗಿ ಆಡುತ್ತಿದ್ದಾರೆ. ಜಾರ್ಜಿಯಾ ವೊಲ್ ಅಮೋಘ ಫಾರ್ಮ್‌ನಲ್ಲಿದ್ದಾರೆ. ಅವರು ಅಜೇಯ ಅರ್ಧಶತಕ ಗಳಿಸಿದ್ದರು.

ಮೂರನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಎದುರು  ಸ್ಪಿನ್ನರ್ ಶ್ರೇಯಾಂಕಾ ಪಾಟೀಲ ಅವರು ಐದು ವಿಕೆಟ್ ಗೊಂಚಲು ಗಳಿಸಿದ್ದರು. ಅದರಿಂದಾಗಿ ಆರ್‌ಸಿಬಿಯು 32 ರನ್‌ಗಳಿಂದ ಗೆದ್ದಿತ್ತು. ಅವರಲ್ಲದೇ ಲಾರೆನ್ ಬೆಲ್ ಮತ್ತು ಸಯಾಲಿ ಸತ್ಘರೆ ಅವರೂ ಬೆಂಗಳೂರು ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಿದ್ದಾರೆ.

ADVERTISEMENT

ಆ್ಯಷ್ಲೆ ಗಾರ್ಡನರ್ ನಾಯಕತ್ವದ ಗುಜರಾತ್ ತಂಡವು ಟೂರ್ನಿಯಲ್ಲಿ ಮೊದಲೆರಡು ಪಂದ್ಯಗಳನ್ನು ಜಯಿಸುವ ಮೂಲಕ ಶುಭಾರಂಭ ಮಾಡಿತ್ತು. ಆದರೆ ನಂತರದ ಎರಡು ಪಂದ್ಯಗಳಲ್ಲಿ ಮುಗ್ಗರಿಸಿತು. ಇದೀಗ ಮತ್ತೆ ಗೆಲುವಿನ ಹಳಿಗೆ ಮರಳುವ ಯತ್ನದಲ್ಲಿದೆ.

ತಂಡದ ಬ್ಯಾಟಿಂಗ್ ವಿಭಾಗಕ್ಕೆ ಆಸ್ಟ್ರೇಲಿಯಾದ ದಂತಕತೆ ಬೆತ್ ಮೂನಿ, ಸೋಫಿ ಡಿವೈನ್, ಕನಿಕಾ ಅಹುಜಾ, ಗಾರ್ಡನರ್, ಜಾರ್ಜಿಯಾ ವೆರ್ಹ್ಯಾಮ್ ಹಾಗೂ ಭಾರತದ ಭಾರತಿ ಫೂಲ್ಮಾಲಿ ಅವರ ಬಲವಿದೆ. ಆದರೆ ಕಳೆದೆರಡೂ ಪಂದ್ಯಗಳಲ್ಲಿ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿಲ್ಲ. ರೇಣುಕಾ ಸಿಂಗ್, ಕಶ್ವಿ ಗೌತಮ್ ಮತ್ತು ಸೋಫಿ ಡಿವೈನ್ ಅವರ ಮೇಲೆ ಬೌಲಿಂಗ್ ವಿಭಾಗದ ಹೊಣೆ ಇದೆ. ಸ್ಮೃತಿ ಬಳಗದ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವುದರ ಜೊತೆಗೆ ಮೂರು ದಿನಗಳ ಹಿಂದೆ ಸೋಲಿಗೆ ತೀರಿಸಿಕೊಳ್ಳುವ ಸವಾಲು ಕೂಡ ಅವರ ಮುಂದಿದೆ.

  • ಪಂದ್ಯ ಆರಂಭ: ರಾತ್ರಿ 7.30

  • ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೊ ಹಾಟ್‌ಸ್ಟಾರ್ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.