ADVERTISEMENT

WPL: ಆರ್‌ಸಿಬಿಗೆ ರೋಚಕ ಜಯ– ಆಲ್‌ರೌಂಡರ್ ನದೀನ್ ಡಿ ಕ್ಲರ್ಕ್ ಗೆಲುವಿನ ರೂವಾರಿ

ಹರ್ಮನ್ ಬಳಗಕ್ಕೆ ನಿರಾಶೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜನವರಿ 2026, 18:05 IST
Last Updated 9 ಜನವರಿ 2026, 18:05 IST
<div class="paragraphs"><p>ಆರ್‌ಸಿಬಿ ಆಟಗಾರ್ತಿಯರ ಸಂಭ್ರಮ</p></div>

ಆರ್‌ಸಿಬಿ ಆಟಗಾರ್ತಿಯರ ಸಂಭ್ರಮ

   

ನವಿ ಮುಂಬೈ (ಪಿಟಿಐ): ಆಲ್‌ರೌಂಡರ್ ನದೀನ್ ಡಿ ಕ್ಲರ್ಕ್ ಅವರು ಶುಕ್ರವಾರ ರಾತ್ರಿ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಕೈಗಳಿಂದ ಗೆಲುವನ್ನು ಕಸಿದುಕೊಂಡರು. ಇದರಿಂದಾಗಿ ರಾಯಲ್ ಚಾಲೆಂಜರ್ಸ್ ಬಳಗವು ರೋಚಕ ಜಯದೊಂದಿಗೆ ಮಹಿಳಾ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿತು. 

ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮುನ್ನಡೆಸಿದ ಮುಂಬೈ ಇಂಡಿಯನ್ಸ್ ತಂಡವು 154 ರನ್‌ಗಳ ಗುರಿಯೊಡ್ಡಿತ್ತು. ಈ ಹಾದಿಯಲ್ಲಿ ಸ್ಮೃತಿ ಬಳಗವು  65 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಹಾದಿಯಲ್ಲಿತ್ತು.  ಆರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ನದೀನ್ (ಅಜೇಯ 63; 44ಎ) ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು. ದಕ್ಷಿಣ ಆಫ್ರಿಕಾದ ಆಟಗಾರ್ತಿ ಎದುರಾಳಿಬೌಲರ್‌ಗಳನ್ನು ದಿಟ್ಟತನದಿಂದ ಎದುರಿಸಿದರು. ಅರುಂಧತಿ ರೆಡ್ಡಿ (20; 25ಎ) 52 ರನ್ ಸೇರಿಸಿದರು. ಆದರೆ  ಅರುಂಧತಿ ಹಾಗೂ ಶ್ರೇಯಾಂಕಾ ಪಾಟೀಲ ಅವರು ಒಂದೇ ಓವರ್‌ನಲ್ಲಿ ಔಟಾದರು. ಆಗ ಆರ್‌ಸಿಬಿ ಜಯಕ್ಕೆ 3 ಓವರ್‌ಗಳಲ್ಲಿ  34 ರನ್‌ಗಳ ಅಗತ್ಯವಿತ್ತು. ಆದರೂ ಧೈರ್ಯಗೆಡದ ಕ್ಲರ್ಕ್ ತಮ್ಮ ಬೀಸಾಟ ಮುಂದುವರಿಸಿದರು. 

ADVERTISEMENT

ಅದರಲ್ಲೂ ಕೊನೆಯ ಓವರ್‌ನಲ್ಲಿ 18 ರನ್‌ ಬೇಕಿದ್ದ ಸಂದರ್ಭದಲ್ಲಿ ರೋಚಕತೆ ಮುಗಿಲುಮುಟ್ಟಿತು. ನ್ಯಾಟ್ ಶಿವರ್ ಬ್ರಂಟ್ ಹಾಕಿದ ಈ ಓವರ್‌ನಲ್ಲಿ ಮೊದಲೆರಡೂ ಎಸೆತಗಳು ಡಾಟ್ ಆದವು. ಹರ್ಮನ್ ಬಳಗದಲ್ಲಿ ಒಂದಿಷ್ಟು ನಿರಾಳತೆ ಸುಳಿದಾಡಿತು. ಆದರೆ ನಂತರದ ನಾಲ್ಕು ಎಸೆತಗಳಲ್ಲಿ ಕ್ಲರ್ಕ್ 6,4,6 ಮತ್ತು 4 ಹೊಡೆಯುವುದರೊಂದಿಗೆ ಜಯದ ಸಂಭ್ರಮ ಆಚರಿಸಿದರು.  ಆರ್‌ಸಿಬಿ 20 ಓವರ್‌ಗಳಲ್ಲಿ 7ಕ್ಕೆ 157 ರನ್ ಗಳಿಸಿತು. 

ಕ್ಲರ್ಕ್ ಅವರು ಬೌಲಿಂಗ್‌ನಲ್ಲಿಯೂ ಮಿಂಚಿದ್ದರು. ಆರ್‌ಸಿಬಿಯು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ ತಂಡವು ದೊಡ್ಡ ಮೊತ್ತ ಗಳಿಸದಂತೆ ನೋಡಿಕೊಂಡಿದ್ದು ಕ್ಲರ್ಕ್ (26ಕ್ಕೆ4) ಅವರೇ. 

ಮುಂಬೈ ತಂಡದ ಆರಂಭ ಚೆನ್ನಾಗಿರಲಿಲ್ಲ.  67 ರನ್‌ಗಳಿಗೆ 4 ವಿಕೆಟ್‌ಗಳು ಪತನವಾಗಿದ್ದವು. ನಿಕೊಲಾ ಕ್ಯಾರಿ (40; 29ಎ, 4X4) ಹಾಗೂ ಸಜೀವನ್ ಸಜನಾ  (45;25ಎ, 4X7, 6X1) ಅವರ ಆಟದ ಕಾರಣದಿಂದ ತಂಡವು  20 ಓವರ್‌ಗಳಲ್ಲಿ 6ಕ್ಕೆ154 ರನ್ ಗಳಿಸಿತು. ಕ್ಯಾರಿ ಮತ್ತು ಸಜೀವನ್ಸೇ ಐದನೇ ವಿಕೆಟ್ ಜೊತೆಯಾಟದಲ್ಲಿ 82 (49ಎಸೆತ) ರನ್‌ ಸೇರಿಸಿದರು. ಇನಿಂಗ್ಸ್‌ನ ಕೊನೆ ಓವರ್‌ನಲ್ಲಿ ಇವರಿಬ್ಬರ ವಿಕೆಟ್‌ಗಳನ್ನು ಕ್ಲರ್ಕ್ ತಮ್ಮ ಬುಟ್ಟಿಗೆ ಹಾಕಿಕೊಂಡರು. 

ಸಂಕ್ಷಿಪ್ತ ಸ್ಕೋರು: ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 6ಕ್ಕೆ154 (ಜಿ. ಕಮಲಿನಿ 32, ಹರ್ಮನ್‌ಪ್ರೀತ್ ಕೌರ್ 20, ನಿಕೊಲಾ ಕ್ಯಾರಿ 40, ಸಜೀವನ್ ಸಜನಾ 45, ನದೀನ್ ಡಿ ಕ್ಲರ್ಕ್ 26ಕ್ಕೆ4, ಶ್ರೇಯಾಂಕಾ ಪಾಟೀಲ 32ಕ್ಕೆ1, ಲಾರೆನ್ ಬೆಲ್ 14ಕ್ಕೆ1) ಆರ್‌ಸಿಬಿ: 20 ಓವರ್‌ಗಳಲ್ಲಿ 7ಕ್ಕೆ157 ಗ್ರೇಸ್ ಹ್ಯಾರಿಸ್ 25, ಸ್ಮೃತಿ ಮಂದಾನ 18, ನದೀನ್ ಡಿ ಕ್ಲರ್ಕ್ ಔಟಾಗದೇ 63, ಅರುಂಧತಿ ರೆಡ್ಡಿ 20, ನಿಕೊಲಾ ಕ್ಯಾರಿ 35ಕ್ಕೆ2, ಅಮೆಲಿಯಾ ಕೆರ್ 13ಕ್ಕೆ2) ಫಲಿತಾಂಶ: ಆರ್‌ಸಿಬಿಗೆ 3 ವಿಕೆಟ್ ಜಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.