
ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್ ಮೆಗಾ ಹರಾಜು ನವದೆಹಲಿಯಲ್ಲಿ ಆರಂಭಗೊಂಡಿದೆ. ಇದರಲ್ಲಿ ಭಾರತ ಕ್ರಿಕೆಟ್ ತಂಡದ ತಾರಾ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರನ್ನು ಬಾರೀ ಮೊತ್ತಕ್ಕೆ ಅವರ ಹಳೆಯ ಫ್ರಾಂಚೈಸಿ ಯುಪಿ ವಾರಿಯರ್ಸ್ ಖರೀದಿಸುವಲ್ಲಿ ಯಶಸ್ವಿಯಾಗಿದೆ.
ದೀಪ್ತಿ ಶರ್ಮಾ ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಗಮನಾರ್ಹ ಪ್ರದರ್ಶನ ನೀಡಿ, ಸರಣಿ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡಿದ್ದರು. ರಿಟೇನ್ ಮಾಡಿಕೊಳ್ಳದೆ ತಂಡದಿಂದ ಬಿಟ್ಟಿದ್ದ ಯುಪಿ ವಾರಿಯರ್ಸ್ ಸದ್ಯ ₹3.20 ಕೋಟಿಗೆ ರೈಟ್ ಟು ಮ್ಯಾಚ್ ಕಾರ್ಡ್ (RTM) ಬಳಕೆ ಮಾಡಿ ಅವರನ್ನು ಖರೀದಿಸಿದೆ.
ದೀಪ್ತಿ ಶರ್ಮಾರನ್ನು ಖರೀದಿಸಲು ಆರಂಭದಿಂದಲೂ ಡೆಲ್ಲಿ ಹಾಗೂ ಯುಪಿ ತಂಡಗಳು ಪೈಪೋಟಿ ನಡೆಸಿದವು. ಅಂತಿಮವಾಗಿ ಡೆಲ್ಲಿ ₹3.20 ಕೋಟಿ ನೀಡುವುದಾಗಿ ಘೋಷಣೆ ಮಾಡಿತು. ಆದರೆ, ತನ್ನ ಬಳಿ ಇದ್ದ ಆರ್‌ಟಿಎಂ ಕಾರ್ಡ್ ಬಳಸಿದ ಯುಪಿ ತಂಡ ಅಷ್ಟೇ ಮೊತ್ತಕ್ಕೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು.
ಆಸ್ಟ್ರೇಲಿಯಾದ ತಾರಾ ಬ್ಯಾಟರ್ ಆಗಿರುವ ಮೆಗ್ ಲ್ಯಾನಿಂಗ್ ಅವರನ್ನು ಕೂಡ ಯುಪಿ ತಂಡ ಬರೋಬ್ಬರಿ ₹1. 90 ಕೋಟಿ ನೀಡಿ ಖರೀದಿಸುವಲ್ಲಿ ಯಶಸ್ವಿಯಾಯಿತು.
ಇವರ ಜೊತೆಗೆ ಇಂಗ್ಲೆಂಡ್ ತಂಡದ ಬೌಲರ್ ಸೋಫಿ ಎಕ್ಲಸ್ಟೋನ್ ಅವರನ್ನು ಕೂಡ ಆರ್‌ಟಿಎಂ ಕಾರ್ಡ್ ಬಳಸಿ ₹85 ಲಕ್ಷಕ್ಕೆ ಯುಪಿ ವಾರಿಯರ್ಸ್ ತಂಡ ತನ್ನ ತೆಕ್ಕೆಗೆ ಹಾಕಿಕೊಂಡಿದೆ.
RTM ಕಾರ್ಡ್ ಎಂದರೇನು?
ಯಾವುದೇ ಆಟಗಾರ್ತಿಯನ್ನು ಈ ಹಿಂದೆ ಆಡಿರುವ ಫ್ರಾಂಚೈಸಿಗೆ ಖರೀದಿಸಲು ನೀಡುವ ಅವಕಾಶವಾಗಿದೆ. ಉದಾಹರಣೆಗೆ ಹರಾಜಿನಲ್ಲಿ ದೀಪ್ತಿ ಶರ್ಮಾ ಅವರಿಗೆ ₹3.20 ಕೋಟಿ ನೀಡುವುದಾಗಿ ಡೆಲ್ಲಿ ತಿಳಿಸಿತು. ಬಳಿಕ ಆರ್‌ಟಿಎಂ ಬಳಕೆ ಮಾಡುತ್ತೀರಾ? ಎಂದು ಯುಪಿ ವಾರಿಯರ್ಸ್ ತಂಡವನ್ನು ಕೇಳಿದಾಗ ಅವರು ‘ಹೌದು’ ಎಂದು ಹೇಳುವ ಮೂಲಕ ಆರ್‌ಟಿಎಂ ಬಳಸಿ ದೀಪ್ತಿಯವರನ್ನು ಖರೀದಿಸಿದರು. ಈ ರೀತಿಯ ಐದು ಅವಕಾಶವನ್ನು ಪ್ರತೀ ಫ್ರಾಂಚೈಸಿ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.