ADVERTISEMENT

WPL 2026 | ಸೋಫಿ ಡಿವೈನ್‌ ಆಲ್‌ರೌಂಡ್‌ ಆಟ: ಗುಜರಾತ್‌ ಜೈಂಟ್ಸ್‌ಗೆ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜನವರಿ 2026, 18:21 IST
Last Updated 11 ಜನವರಿ 2026, 18:21 IST
<div class="paragraphs"><p>ಗುಜರಾತ್ ಟೈಟನ್ಸ್ ತಂಡದ ಸೋಫಿ ಡಿವೈನ್‌</p></div>

ಗುಜರಾತ್ ಟೈಟನ್ಸ್ ತಂಡದ ಸೋಫಿ ಡಿವೈನ್‌

   

-ಪಿಟಿಐ ಚಿತ್ರ

ನವಿ ಮುಂಬೈ: ಸೋಫಿ ಡಿವೈನ್ ಐದು ರನ್‌ಗಳ ಅಂತರದಿಂದ ಶತಕ ವಂಚಿತರಾದರು. ಆದರೆ, ಕೊನೆ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ 7 ರನ್‌ ಬೇಕಿದ್ದಾಗ ಕೇವಲ ಎರಡು ರನ್‌ ನೀಡಿ ಗುಜರಾತ್‌ ಜೈಂಟ್ಸ್‌ ತಂಡಕ್ಕೆ ರೋಚಕ ಗೆಲುವು ತಂದಿತ್ತರು.

ಡಿ.ವೈ ಪಾಟೀಲ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಹಿಳಾ ಪ್ರಿಮಿಯರ್ ಲೀಗ್ (ಡಬ್ಲ್ಯುಪಿಎಲ್) ಪಂದ್ಯದಲ್ಲಿ ಸೋಫಿ (95; 42 ಎ, 4x7; 6x8) ಅವರು ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರು. ನಂದನಿ ಶರ್ಮಾ (33ಕ್ಕೆ5) ಅವರ ಪರಿಣಾಮಕಾರಿ ಬೌಲಿಂಗ್‌ ನಡುವೆಯೂ ಗುಜರಾತ್ ತಂಡವು 20 ಓವರ್‌ಗಳಲ್ಲಿ 209 ರನ್ ಗಳಿಸಿತು.

ಕಠಿಣ ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ದಕ್ಷಿಣ ಆಫ್ರಿಕಾದ ಲಿಝೆಲ್‌ ಲೀ (86 ರನ್‌; 54 ಎ, 4x12, 6x3) ಉತ್ತಮ ಅಡಿಪಾಯ ಹಾಕಿಕೊಟ್ಟರು. ಬಳಿಕ, ದಕ್ಷಿಣ ಆಫ್ರಿಕಾದ ಮತ್ತೊಬ್ಬ ಆಟಗಾರ್ತಿ ಲಾರಾ ವೋಲ್ವಾರ್ಟ್‌ (77; 38 ಎ; 4x9; 6x3) ಲೀ ಅವರೊಂದಿಗೆ ಎರಡನೇ ವಿಕೆಟ್‌ಗೆ 90 ರನ್‌ ಸೇರಿಸಿದರು.

ವೋಲ್ವಾರ್ಟ್‌ ಅವರು ನಾಯಕಿ ಜೆಮಿಮಾ ರಾಡ್ರಿಗಸ್‌ ಜೊತೆಗೂಡಿ ನಾಲ್ಕನೇ ವಿಕೆಟ್‌ಗೆ ಕೇವಲ 21 ಎಸೆತಗಳಲ್ಲಿ 58 ರನ್‌ ಬಾರಿಸಿದರು. 18 ಮತ್ತು 19ನೇ ಓವರ್‌ಗಳಿಂದ 41 ರನ್‌ ಬಾರಿಸಿದ ಡೆಲ್ಲಿ ಸುಲಭ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ, ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಸೋಫಿ ಇವರಿಬ್ಬರ ವಿಕೆಟ್‌ ಪಡೆದು ಗೆಲುವು ಕಸಿದರು. ಡೆಲ್ಲಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 205 ರನ್‌ ಗಳಿಸಿ ಹೋರಾಟ ಮುಗಿಸಿತು.

ಇದಕ್ಕೆ ಮೊದಲು, ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಗುಜರಾತ್‌ ತಂಡಕ್ಕೆ ಸೋಫಿ ಹಾಗೂ ನಾಯಕಿ ಆ್ಯಷ್ಲೆ ಗಾರ್ಡನರ್ (49; 26ಎ) ಆಸರೆಯಾದರು. ಇನಿಂಗ್ಸ್ ಆರಂಭದಿಂದಲೇ ಸೋಫಿ ಬೀಸಾಟವಾಡಿದರು. 25 ಎಸೆತಗಳಲ್ಲಿ ಅರ್ಧಶತಕ ದಾಟಿದರು. ಸ್ನೇಹ ರಾಣಾ ಅವರ ಓವರ್‌ನಲ್ಲಿ ಎರಡು ಬೌಂಡರಿ ಮತ್ತು ಸತತ ನಾಲ್ಕು ಸಿಕ್ಸರ್‌ ಬಾರಿಸಿದರು. ಈ ಓವರ್‌ನಲ್ಲಿ ಒಟ್ಟು 32 ರನ್‌ಗಳು ಬಂದವು. ಆದರೆ 11ನೇ ಓವರ್‌ನಲ್ಲಿ ಮಧ್ಯಮವೇಗಿ ನಂದನಿ ಶರ್ಮಾ ಅವರ ಎಸೆತದಲ್ಲಿ ಶ್ರೀಚರಣಿಗೆ ಕ್ಯಾಚಿತ್ತ ಸೋಫಿ ನಿರ್ಗಮಿಸಿದರು.

ನಂದನಿ ಅವರು ಇನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಹ್ಯಾಟ್ರಿಕ್ ದಾಖಲಿಸಿದರು. ಕನಿಕಾ ಅಹುಜಾ (19.4), ರಾಜೇಶ್ವರಿ ಗಾಯಕವಾಡ (19.5) ಮತ್ತು ರೇಣುಕಾ ಸಿಂಗ್ ಠಾಕೂರ್ (19.6) ಅವರ ವಿಕೆಟ್ ಪಡೆದರು. ಇದೇ ಓವರ್‌ನ ಎರಡನೇ ಎಸೆತದಲ್ಲಿ ಕಶ್ವಿ ಗೌತಮ್ ವಿಕೆಟ್ ಕೂಡ ಕಬಳಿಸಿದ್ದರು.

ಸಂಕ್ಷಿಪ್ತ ಸ್ಕೋರು:

ಗುಜರಾತ್ ಟೈಟನ್ಸ್: 20 ಓವರ್‌ಗಳಲ್ಲಿ 209 (ಸೋಫಿ ಡಿವೈನ್ 95, ಆ್ಯಷ್ಲೆಗಾರ್ಡನರ್ 49, ಬೆತ್ ಮೂನಿ 19, ಕಶ್ವಿ ಗೌತಮ್ 14, ಅನುಷ್ಕಾ ಶರ್ಮಾ 13, ಚೈನೆಲಿ ಹೆನ್ರಿ 43ಕ್ಕೆ2, ನಂದನಿ ಶರ್ಮಾ 33ಕ್ಕೆ5, ಶ್ರೀಚರಣಿ 42ಕ್ಕೆ2).

ಡೆಲ್ಲಿ ಕ್ಯಾಪಿಟಲ್ಸ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 205 (ಲಿಝೆಲ್‌ ಲೀ 86, ಲಾರಾ ವೋಲ್ವಾರ್ಟ್‌ 77; ಸೋಫಿ ಡಿವೈನ್ 21ಕ್ಕೆ2, ರಾಜೇಶ್ವರಿ ಗಾಯಕವಾಡ 34ಕ್ಕೆ2).

ಪಂದ್ಯದ ಆಟಗಾರ್ತಿ: ಸೋಫಿ ಡಿವೈನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.