ಹರ್ಮನ್‌ಪ್ರೀತ್ ಕೌರ್
ನವಿ ಮುಂಬೈ: ನಾಯಕಿ ಹರ್ಮನ್‌ಪ್ರೀತ್ ಕೌರ್ (ಔಟಾಗದೇ 71;43ಎ, 4x7, 6x2) ಅವರ ಅಜೇಯ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಮಂಗಳವಾರ ಮಹಿಳಾ ಪ್ರೀಮಿಯರ್ ಲೀಗ್‌ನ ಪಂದ್ಯದಲ್ಲಿ ಗುಜರಾಜ್ ಜೈಂಟ್ಸ್ ತಂಡವನ್ನು ಏಳು ವಿಕೆಟ್‌ಗಳಿಂದ ಮಣಿಸಿತು.
193 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಹಾಲಿ ಚಾಂಪಿಯನ್ ಮುಂಬೈ ತಂಡವು ನಾಲ್ಕು ಎಸೆತಗಳು ಬಾಕಿ ಇರುವಂತೆ ಜಯ ಸಾಧಿಸಿತು. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತಿದ್ದ ಮುಂಬೈ ತಂಡಕ್ಕೆ ಇದು ಸತತ ಎರಡನೇ ಜಯ. ಇದರೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆಯಿತು. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಜೈಂಟ್ಸ್‌ಗೆ ನಿರಾಸೆಯಾಯಿತು.
ಮುಂಬೈ ತಂಡವು 37 ರನ್ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರ್ತಿರಾದ ಗುಣಲನ್ ಕಮಲಿನಿ (13) ಮತ್ತು ಹೇಲಿ ಮ್ಯಾಥ್ಯೂಸ್ (22) ಪೆವಿಲಿಯನ್ ಸೇರಿದ್ದರು. ನಂತರದಲ್ಲಿ ಅಮನ್‌ಜ್ಯೋತ್ ಕೌರ್ (40;26ಎ) ಮತ್ತು ಹರ್ಮನ್‌ಪ್ರೀತ್ ಅವರು ಮೂರನೇ ವಿಕೆಟ್‌ಗೆ 72 (44ಎ) ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಅಮನ್‌ಜ್ಯೋತ್ ನಿರ್ಗಮನದ ಬಳಿಕ ಕ್ರೀಸ್‌ಗೆ ಬಂದ ನಿಕೋಲಾ ಕ್ಯಾರಿ (ಔಟಾಗದೇ 38;23ಎ) ಅವರು ನಾಯಕಿಗೆ ಉತ್ತಮ ಸಾಥ್ ನೀಡಿದರು. ಅವರಿಬ್ಬರೂ ಮುರಿಯದ ನಾಲ್ಕನೇ ವಿಕೆಟ್‌ಗೆ ಬಿರುಸಿನ 84 (43ಎ) ರನ್ ಗಳಿಸಿ ತಂಡವನ್ನು ದಡ ಸೇರಿಸಿದರು.
ಹರ್ಮನ್‌ಪ್ರೀತ್ ಅವರು 33 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದರು. ಇದು ಡಬ್ಲ್ಯುಪಿಎಲ್‌ನಲ್ಲಿ ಅವರ 10ನೇ ಅರ್ಧಶತಕವಾಗಿದೆ. ಅಲ್ಲದೆ, ಲೀಗ್‌ನಲ್ಲಿ ಸಾವಿರ ರನ್ ಮೈಲಿಗಲ್ಲು ದಾಟಿದ ಭಾರತದ ಮೊದಲ ಆಟಗಾರ್ತಿ ಎಂಬ ಹಿರಿಮೆಗೂ ಪಾತ್ರರಾದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಜೈಂಟ್ಸ್ ತಂಡವು 5 ವಿಕೆಟ್‌ಗೆ 192 ರನ್‌ಗಳ ಸವಾಲಿನ ಮೊತ್ತ ಗಳಿಸಿತು. ಬೆತ್ ಮೂನಿ (33;26ಎ) ತಂಡಕ್ಕೆ ಉತ್ತಮ ಆರಂಭ ನೀಡಿದರು. ಮೊದಲ ಓವರಿನಲ್ಲೇ ವಿಕೆಟ್ ಕೀಪರ್ ಗುನಾಲನ್ ಕಮಲಿನಿ ಅವರಿಂದ ಜೀವದಾನ ಪಡೆದಿದ್ದ ಅವರು ಹೇಲಿ ಮ್ಯಾಥ್ಯೂಸ್ ಮಾಡಿದ ಎರಡನೇ ಓವರಿನಲ್ಲಿ 18 ರನ್ ಬಾಚಿದರು. ಆದರೆ ಮೂರನೇ ಓವರಿನಲ್ಲಿ ಸೋಫಿ ಡಿವೈನ್ (8) ಅವರು ಶಬ್ನಿಮ್ ಇಸ್ಮಾಯಿಲ್ ಬೌಲಿಂಗ್‌ನಲ್ಲಿ ನಿರ್ಗಮಿಸಿದರು.
ಮೂನಿ ಜೊತೆಗೂಡಿದ ಕನಿಕಾ ಅಹುಜಾ (35, 18ಎ) ರನ್ ವೇಗ ಹೆಚ್ಚಿಸಿದರು. ಪವರ್‌ಪ್ಲೇ ಮುಗಿದಾಗ 1 ವಿಕೆಟ್‌ಗೆ 62 ರನ್ ಗಳಿಸಿ ಜೈಂಟ್ಸ್ ಉತ್ತಮ ಸ್ಥಿತಿಯಲ್ಲಿತ್ತು. ಗಾರ್ಡನರ್ ಮತ್ತು ಅಹುಜಾ ನಿರ್ಗಮನದ ನಂತರ (4 ವಿಕೆಟ್‌ಗೆ 99) ಮುಂಬೈ ಇಂಡಿಯನ್ಸ್ ರನ್ ವೇಗಕ್ಕೆ ಲಗಾಮು ಹಾಕಿತು. ಆದರೆ ಕೊನೆಯ ಕೆಲವು ಓವರುಗಳಲ್ಲಿ ಜಾರ್ಜಿಯಾ ವೆರ್ಹ್ಯಾಮ್ (43;33ಎ) ಮತ್ತು ಭಾರತಿ ಫೂಲ್ಮಾಲಿ (36;15ಎ) ಪ್ರದರ್ಶಿಸಿ, ತಂಡದ ಮೊತ್ತವನ್ನು ಇನ್ನೂರ ಸಮೀಪ ಕೊಂಡೊಯ್ದರು.
ಸಂಕ್ಷಿಪ್ತ ಸ್ಕೋರು:
ಗುಜರಾತ್ ಜೈಂಟ್ಸ್: 20 ಓವರುಗಳಲ್ಲಿ 5 ವಿಕೆಟ್‌ಗೆ 192 (ಬೆತ್ ಮೂನಿ 33, ಕನಿಕಾ ಅಹುಜಾ 35, ಜಾರ್ಜಿಯಾ ವೆರ್ಹ್ಯಾಮ್ ಔಟಾಗದೇ 43, ಭಾರತಿ ಫೂಲ್ಮಾಲಿ ಔಟಾಗದೇ 36; ಶಬ್ನಿಮ್ ಇಸ್ಮಾಯಿಲ್ 25ಕ್ಕೆ1).
ಮುಂಬೈ ಇಂಡಿಯನ್ಸ್: 19.2 ಓವರ್‌ಗಳಲ್ಲಿ 3 ವಿಕೆಟ್‌ಗೆ 193 (ಅಮನ್‌ಜ್ಯೋತ್ ಕೌರ್ 40, ಹರ್ಮನ್‌ಪ್ರೀತ್ ಕೌರ್ ಔಟಾಗದೇ 71, ನಿಕೋಲಾ ಕ್ಯಾರಿ ಔಟಾಗದೇ 38; ಸೋಫಿ ಡಿವೈನ್ 29ಕ್ಕೆ 1). ಪಂದ್ಯದ ಆಟಗಾರ್ತಿ: ಹರ್ಮನ್‌ಪ್ರೀತ್ ಕೌರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.