
ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) ಟೂರ್ನಿಯ 9ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಆರಂಭಿಕ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಆಸರೆಯಾದರು. ತಂಡವು 20 ಓವರ್‌ಗಳ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿದೆ.
ನವಿ ಮುಂಬೈನ ಡಿ.ವೈ.ಪಟೇಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತ್ತು.
ಕಳೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆರ್‌ಸಿಬಿ ಆರಂಭಿಕ ಬ್ಯಾಟರ್‌ಗಳು, ಗುಜರಾತ್ ಜೈಂಟ್ಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾದರು.
ಆರಂಭಿಕ ಆಟಗಾರ್ತಿ ಗ್ರೇಸ್ ಹ್ಯಾರಿಸ್ 17 ರನ್ (8 ಎಸೆತ) ಗಳಿಸಿ ಔಟಾದರು. ನಂತರ ನಾಯಕಿ ಸ್ಮೃತಿ ಮಂದಾನ (5 ರನ್), ದಯಾಳನ್ ಹೇಮಲತಾ(4 ರನ್), ಗೌತಮಿ ನಾಯಕ್ (9 ರನ್) ಪೆವಿಲಿಯನ್ ಪೆರೇಡ್ ನಡೆಸಿದರು.
43 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಆರ್‌ಸಿಬಿ ತಂಡಕ್ಕೆ ರಾಧಾ ಯಾದವ್ (66 ರನ್; 47 ಎಸೆತ) ಹಾಗೂ ರಿಚಾ ಘೋಷ್ (44 ರನ್; 28 ಎಸೆತ) ಆಸರೆಯಾದರು. ಅವರಿಬ್ಬರು 5ನೇ ವಿಕೆಟ್‌ಗೆ 105 ರನ್(66 ಎಸೆತ) ಜೊತೆಯಾಟವಾಡಿದರು. ನಾಡಿನ್ ಡಿ ಕ್ಲರ್ಕ್ (26 ರನ್; 12 ಎಸೆತ) ಡೆತ್ ಓವರ್‌ನಲ್ಲಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ಗುಜರಾತ್ ಜೈಂಟ್ಸ್ ಪರ ಸೋಫಿ ಡಿವೈನ್ 3 ವಿಕೆಟ್, ಕಾಶ್ವೀ ಗೌತಮ್ 2 ವಿಕೆಟ್, ರೇಣುಕಾ ಠಾಕೂರ್ ಹಾಗೂ ಜಾರ್ಜಿಯಾ ವೇರ್ಹ್ಯಾಮ್ ತಲಾ 1 ವಿಕೆಟ್ ಪಡೆದು ಮಿಂಚಿದರು.
ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಆರ್‌ಸಿಬಿ ತಂಡವು ಗುಜರಾತ್ ಜೈಂಟ್ಸ್ ಬ್ಯಾಟರ್‌ಗಳನ್ನು 183 ರನ್ ಒಳಗೆ ಕಟ್ಟಿಹಾಕಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.