ಯಜುವೇಂದ್ರ ಚಾಹಲ್ ಮತ್ತು ಧನಶ್ರೀ
–ಟ್ವಿಟರ್ ಚಿತ್ರ
ಮುಂಬೈ: ಕ್ರಿಕೆಟಿಗ ಯುಜುವೇಂದ್ರ ಚಾಹಲ್ ಹಾಗೂ ಅವರ ಪತ್ನಿ ಧನಶ್ರೀ ವರ್ಮಾ ಅವರು ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 20ರೊಳಗೆ ನಿರ್ಧಾರ ಕೈಗೊಳ್ಳುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ಬಾಂಬೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13ಬಿ ಅಡಿಯಲ್ಲಿ ನೀಡಲಾಗಿದ್ದ ಕಾಯುವಿಕೆ ಅವಧಿಯನ್ನೂ ರದ್ದು ಮಾಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯು ಸದ್ಯದಲ್ಲೇ ಆರಂಭವಾಗಲಿದ್ದು, ಚಾಹಲ್ ಅವರು ಅದರಲ್ಲಿ ಪಾಳ್ಗೊಳ್ಳಲು ತೆರಳಲಿದ್ದಾರೆ. ಹಾಗಾಗಿ, ನಾಳೆಯೊಳಗೆ ನಿರ್ಧಾರ ಕೈಗೊಳ್ಳಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.
'ಒಪ್ಪಂದದಂತೆ, ಚಾಹಲ್ ಅವರು ವರ್ಮಾಗೆ ₹ 4.75 ಕೋಟಿ ಶಾಶ್ವತ ಜೀವನಾಂಶ ನೀಡಲು ಒಪ್ಪಿಕೊಂಡಿದ್ದಾರೆ. ಇದರಲ್ಲಿ ₹2.37 ಕೋಟಿಯನ್ನು ಈಗಾಗಲೇ ಪಾವತಿಸಲಾಗಿದೆ. ಉಳಿದ ಮೊತ್ತ ಪಾವತಿಸದಿದ್ದಲ್ಲಿ ಅದನ್ನು, ಕುಟುಂಬ ನ್ಯಾಯಾಲಯದ ಆದೇಶದ ಉಲ್ಲಂಘನೆ ಎಂದೇ ಪರಿಗಣಿಸಲಾಗುವುದು' ಎಂದು 'ಬಾರ್ ಮತ್ತು ಬೆಂಚ್' ಹೇಳಿದೆ.
ಇಬ್ಬರೂ ಎರಡೂವರೆ ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಜೀವನಾಂಶದ ವಿಚಾರಲ್ಲಿ ಇಬ್ಬರ ನಿಲುವು ಒಂದೇ ಆಗಿದೆ ಎಂದು ವರದಿಯಾಗಿದೆ.
ಚಾಹಲ್ ಮತ್ತು ಧನಶ್ರೀ ಅವರು ಪರಸ್ಪರ ವಿಚ್ಛೇದನ ಕೋರಿ ಇದೇ ವರ್ಷ ಫೆಬ್ರುವರಿ 5ರಂದು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಫೆ. 20ರಂದು ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ, ಕಾಯುವಿಕೆಯ ಅವಧಿಗೆ ವಿನಾಯಿತಿ ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಇವರಿಬ್ಬರು ಹೈಕೋರ್ಟ್ ಮೊರೆ ಹೋಗಿದ್ದರು.
ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಪರಿಚಯವಾಗಿದ್ದ ಈ ಜೋಡಿ, 2020ರ ಡಿಸೆಂಬರ್ 11ರಂದು ವಿವಾಹವಾಗಿದ್ದರು.
ಇತ್ತೀಚೆಗೆ ಮುಕ್ತಾಯವಾದ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ವೇಳೆ ಚಾಹಲ್ ಅವರು ತಮ್ಮ ಸ್ನೇಹಿತೆ ಆರ್.ಜೆ. ಮಹ್ವಾಶ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಆ ಸಂದರ್ಭದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.