ADVERTISEMENT

ದಕ್ಷಿಣ ಡರ್ಬಿಯಲ್ಲಿ ಸಿಎಫ್‌ಸಿ–ಎಚ್‌ಎಫ್‌ಸಿ ಸೆಣಸು

ಇಂಡಿಯನ್‌ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಎಟಿಕೆ ಮೋಹನ್ ಬಾಗನ್‌ಗೆ ಕೇರಳ ಬ್ಲಾಸ್ಟರ್ಸ್ ಎದುರಾಳಿ

ಪಿಟಿಐ
Published 30 ಜನವರಿ 2021, 14:44 IST
Last Updated 30 ಜನವರಿ 2021, 14:44 IST
ಚೆನ್ನೈಯಿನ್ ಎಫ್‌ಸಿ ತಂಡದ ಆಟಗಾರರು ಅಭ್ಯಾಸ ನಡೆಸಿದರು –ಐಎಸ್‌ಎಲ್‌ ಮೀಡಿಯಾ ಚಿತ್ರ
ಚೆನ್ನೈಯಿನ್ ಎಫ್‌ಸಿ ತಂಡದ ಆಟಗಾರರು ಅಭ್ಯಾಸ ನಡೆಸಿದರು –ಐಎಸ್‌ಎಲ್‌ ಮೀಡಿಯಾ ಚಿತ್ರ   

ವಾಸ್ಕೊ, ಗೋವಾ: ಪ್ಲೇ ಆಫ್‌ ಹಂತದ ಮೇಲೆ ದೃಷ್ಟಿ ನೆಟ್ಟಿರುವ ಹೈದರಾಬಾದ್ ಎಫ್‌ಸಿ ಮತ್ತು ಚೆನ್ನೈಯಿನ್ ಎಫ್‌ಸಿ ಭಾನುವಾರ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಸೆಣಸಲಿವೆ.ತಿಲಕ್ ಮೈದಾನ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ದಕ್ಷಿಣ ಡರ್ಬಿಯಲ್ಲಿ ಹೈದರಾಬಾದ್ ತಂಡ ಗೆಲುವು ಸಾಧಿಸಿದರೆ ‍‍ಪ್ಲೇ ಆಫ್ ಹಂತದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿವೆ. ಚೆನ್ನೈಯಿನ್ ಗೆದ್ದರೆ ಪಾಯಿಂಟ್ ಪಟ್ಟಿಯ ಅಗ್ರ ನಾಲ್ಕರಲ್ಲಿ ಸ್ಥಾನ ಗಳಿಸಲಿದೆ.

ಹೈದರಾಬಾದ್ ಈ ಬಾರಿ ಅತ್ಯುತ್ತಮ ಸಾಮರ್ಥ್ಯ ತೋರುತ್ತ ಮುಂದಡಿ ಇಡುತ್ತಿದೆ. ಹಿಂದಿನ ಆರು ಪಂದ್ಯಗಳಲ್ಲಿ ಈ ತಂಡ ಸೋಲರಿಯದೆ ಮುನ್ನುಗ್ಗಿದೆ. ಆದರೆ ಈ ಆರು ಪಂದ್ಯಗಳ ಪೈಕಿ ನಾಲ್ಕು ಡ್ರಾದಲ್ಲಿ ಕೊನೆಗೊಂಡಿವೆ ಎಂಬುದು ಕೋಚ್ ಮ್ಯಾನ್ಯುಯೆಲ್ ಮಾರ್ಕ್ವೆಜ್‌ ಅವರ ಆತಂಕಕ್ಕೆ ಕಾರಣವಾಗಿದೆ. ಈ ಸಮಸ್ಯೆಗೆ ಪರಿಹಾರವೂ ಇದೆ ಎನ್ನುವ ಅವರು ಮುಂದಿನ ಪಂದ್ಯಗಳಲ್ಲಿ ಸ್ಟ್ರೈಕರ್‌ಗಳು ಹೆಚ್ಚು ಶ್ರಮವಹಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಮತ್ತು ಆ ಅವಕಾಶಗಳಲ್ಲಿ ಚೆಂಡನ್ನು ಗುರಿಮುಟ್ಟಿಸಲು ಪ್ರಯತ್ನಿಸಬೇಕು. ಕೆಲವು ಪಂದ್ಯಗಳಲ್ಲಿ ಗೆಲುವಿನ ಸನಿಹದಲ್ಲಿ ಎಡವಿದ್ದೇವೆ. ಚೆನ್ನೈಯಿನ್ ಎದುರಿನ ಪಂದ್ಯದಲ್ಲಿ ಆಟಗಾರರು ಉತ್ತಮ ಸಾಮರ್ಥ್ಯ ತೋರಿ ಜಯ ಸಾಧಿಸುವ ನಿರೀಕ್ಷೆ ಇದೆ’ ಎಂದು ಮಾರ್ಕ್ವೆಜ್ ಹೇಳಿದರು.

ADVERTISEMENT

ಅರಿದಾನೆ ಸಂಟಾನ ಭಾನುವಾರದ ಪಂದ್ಯಕ್ಕೂ ಲಭ್ಯ ಇರುವುದು ತಂಡದಲ್ಲಿ ಸಂತಸ ಮೂಡಿಸಿದೆ. ಹಿಂದಿನ ಪಂದ್ಯದಲ್ಲಿ ಅವರು ನಾಲ್ಕು ಬಾರಿ ಚೆಂಡನ್ನು ಗುರಿಯತ್ತ ಒದೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರು ಎದುರಿನ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಎರಡನೇ ಲೆಗ್‌ನಲ್ಲಿ ಚೆನ್ನೈಯಿನ್ ನಿರೀಕ್ಷಿತ ಸಾಧನೆ ಮಾಡಲಿಲ್ಲ. ಆದ್ದರಿಂದ ಲೋಪಗಳನ್ನು ತಿದ್ದಿಕೊಳ್ಳಲು ಈ ಪಂದ್ಯ ತಂಡಕ್ಕೆ ಅನುಕೂಲಕರವಾಗಲಿದೆ. ಈ ವರೆಗೆ ತಂಡ 11 ಗೋಲು ಗಳಿಸಿದ್ದು ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಇದು ತಂಡದ ತೀರಾ ಕಳಪೆ ‍ಪ್ರದರ್ಶನವಾಗಿದೆ. ಆದರೂ ಕೆಲವು ತಪ್ಪುಗಳನ್ನು ಸರಿಪಡಿಸಿಕೊಂಡರೆ ಪ್ಲೇ ಆಫ್‌ ಹಂತಕ್ಕೇರುವ ಅರ್ಹತೆ ತಂಡಕ್ಕೆ ಇದೆ.

ಎಟಿಕೆ ಎಂಬಿಗೆ ಕೇರಳ ಬ್ಲಾಸ್ಟರ್ಸ್‌ ಎದುರಾಳಿ

ಫತೋರ್ಡ ಕ್ರೀಡಾಂಗಣದಲ್ಲಿ ಸಂಜೆ ನಡೆಯಲಿರುವ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ತಂಡ ಕೇರಳ ಬ್ಲಾಸ್ಟರ್ಸ್ ಎದುರು ಸೆಣಸಲಿದೆ. ಎಟಿಕೆ 14 ಪಂದ್ಯಗಳನ್ನು ಆಡಿದ್ದು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಬಲಿಷ್ಠ ತಂಡವಾಗಿದ್ದರೂ ಕಳೆದ ಕೆಲವು ಪಂದ್ಯಗಳಲ್ಲಿ ಎಟಿಕೆ ಎಂಬಿ ನಿರೀಕ್ಷೆಗೆ ತಕ್ಕಂತೆ ಆಡಿಲ್ಲ. ನಾ‌ರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಸೋಲುವ ಮೂಲಕ ಈ ಬಾರಿ ಮೂರನೇ ಸೋಲು ಕಂಡಿದೆ.

ಹಿಂದಿನ ನಾಲ್ಕು ಪಂದ್ಯಗಳಲ್ಲಿ ಎಟಿಕೆಎಂಬಿ ಕಳಪೆ ಆಟವಾಡಿದೆ. ಒಂದರಲ್ಲಿ ಮಾತ್ರ ಜಯ ಗಳಿಸಿದ್ದು ಎರಡಲ್ಲಿ ಸೋತಿದೆ. ರಕ್ಷಣಾ ವಿಭಾಗ ಎದುರಾಳಿಗಳ ದಾಳಿಯನ್ನು ಮೆಟ್ಟಿನಿಲ್ಲುವಲ್ಲಿ ಯಶಸ್ವಿಯಾಗಲಿಲ್ಲ. ಹೀಗಾಗಿ ನಾಲ್ಕು ಗೋಲುಗಳನ್ನು ಬಿಟ್ಟುಕೊಟ್ಟಿದೆ. ಆರಂಭದ ಒಂಬತ್ತು ಪಂದ್ಯಗಳಲ್ಲಿ ತಂಡ ಕೇವಲ ಮೂರು ಗೋಲುಗಳನ್ನು ಬಿಟ್ಟುಕೊಟ್ಟಿತ್ತು. ಹಿಂದಿನ ನಾಲ್ಕು ಪಂದ್ಯಗಳಲ್ಲಿ ಗೋಲು ಗಳಿಕೆಯಲ್ಲೂ ವೈಫಲ್ಯ ಕಂಡಿದ್ ಮೂರು ಬಾರಿ ಮಾತ್ರ ಚೆಂಡನ್ನು ಗುರಿ ಸೇರಿಸಿದೆ.

ಕೇರಳ ಬ್ಲಾಸ್ಟರ್ಸ್ ಆರಂಭದಲ್ಲಿ ನೀರಸ ಆಟವಾಡಿದ್ದು ನಂತರ ಚೇತರಿಸಿಕೊಂಡಿದೆ. ಈಚಿನ ಐದು ಪಂದ್ಯಗಳಲ್ಲಿ ತಂಡ ಅಜೇಯವಾಗಿದೆ. ಹೀಗಾಗಿ ಪ್ಲೇ ಆಫ್ ಹಂತಕ್ಕೇರುವ ಸಾಧ್ಯತೆ ಇನ್ನೂ ಇದೆ. ಈ ಬಾರಿಯ ಮೊದಲ ಪಂದ್ಯದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾದಾಗ ಎಟಿಕೆ ಎಂಬಿ ಮೇಲುಗೈ ಸಾಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.