ನವದೆಹಲಿ: ಇದೇ 12ರಂದು ನಡೆಯಲಿರುವ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ (ಎಐಎಫ್‌ಎಫ್) ವಿಶೇಷ ಮಹಾಸಭೆಯಲ್ಲಿ ಕರಡು ನಿಯಮಾವಳಿ ಅಂಗೀಕಾರಗೊಂಡರೆ ಫೆಡರೇಷನ್‌ನ ಕಾರ್ಯಕಾರಿ ಸಮಿತಿಯ ಬಹುಪಾಲು ಸದಸ್ಯರು ತಮ್ಮ ಸ್ಥಾನಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶನದಲ್ಲಿ ರೂಪಿಸಲಾಗಿರುವ ಕರಡು ನಿಯಮಾವಳಿಯನ್ನು ಅಂಗೀಕರಿಸಲು ಫೆಡರೇಷನ್ ವಿಶೇಷ ಮಹಾಸಭೆಯನ್ನು ಕರೆಯಲಾಗಿದೆ. ಹೊಸ ನಿಯಮಾವಳಿ ಯನ್ನು ಅಕ್ಟೋಬರ್ 30ರೊಳಗೆ ಅಂಗೀಕರಿಸುವಂತೆ ಫಿಫಾ, ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ಗೆ ಗಡುವು ವಿಧಿಸಿದೆ.
ವಿಶೇಷ ಸಭೆಯಲ್ಲಿ ಕರಡು ನಿಯಮಾವಳಿಯನ್ನು ಅಂಗೀಕರಿಸಿದರೆ ಫೆಡರೇಷನ್‌ನ ಕಾರ್ಯಕಾರಿ ಸಮಿತಿಯ ಹೆಚ್ಚಿನ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡ ಬೇಕಾಗಬಹುದು ಇಲ್ಲವೇ ರಾಜ್ಯ ಘಟಕಗಳಲ್ಲಿನ ತಮ್ಮ ಉನ್ನತ ಹುದ್ದೆಗಳನ್ನು ಕಳೆದುಕೊಳ್ಳಲಿದ್ದಾರೆ.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ಅವರು ಈ ನಿಯಮಾವಳಿ ರೂಪಿಸಿದ್ದು, ಸುಪ್ರೀಂ ಕೋರ್ಟ್ ಇದಕ್ಕೆ ಕೆಲವು ಮಾರ್ಪಾಡುಗಳೊಂದಿಗೆ ಸೆ.19ರಂದು ಸಮ್ಮತಿ ನೀಡಿತ್ತು. ನಾಲ್ಕು ವಾರಗಳ ಒಳಗೆ ಸರ್ವ ಸದಸ್ಯರ ಸಭೆ ಕರೆದು ಇದನ್ನು ಅಂಗೀಕರಿಸುವಂತೆ ಎಐಎಫ್‌ಎಫ್‌ಗೆ ನಿರ್ದೇಶನವನ್ನೂ ನೀಡಿತ್ತು.
ಆದರೆ ಕರಡು ನಿಯಮಾವಳಿಯಲ್ಲಿನ ಒಂದು ನಿರ್ದಿಷ್ಟ ಷರತ್ತು ಎಐಎಫ್‌ಎಫ್‌ನ ಉನ್ನತ ಅಧಿಕಾರಿಗಳಿಗೆ ತಲೆನೋವು ಉಂಟು ಮಾಡಿದೆ. ಕಾರ್ಯಕಾರಿ ಸಮಿತಿಯ ಹೆಚ್ಚಿನ ಸದಸ್ಯರು ರಾಜ್ಯ ಘಟಕಗಳಲ್ಲಿ ಪ್ರಮುಖ ಸ್ಥಾನಗಳನ್ನು ಹೊಂದಿರುವುದೇ ಇದಕ್ಕೆ ಕಾರಣ.
ಕರಡು ನಿಯಮಾವಳಿಯ 25.3ನೇ (ಸಿ) ವಿಧಿಯ ಪ್ರಕಾರ, ‘ಒಬ್ಬ ವ್ಯಕ್ತಿಯು ಎಐಎಫ್‌ಎಫ್‌ನ ಕಾರ್ಯಕಾರಿ ಸಮಿತಿಯಲ್ಲಿ ಮತ್ತು ರಾಜ್ಯ ಸಂಸ್ಥೆಯಲ್ಲಿ ಪದಾಧಿಕಾರಿ ಸ್ಥಾನವನ್ನು ಹೊಂದಿದ್ದರೆ ಅವರು ಸ್ವಯಂಚಾಲಿತವಾಗಿ ರಾಜ್ಯ ಘಟಕದಲ್ಲಿ ತಮ್ಮ ಸ್ಥಾನ ತೆರವು ಮಾಡಿದಂತೆ’ ಎಂದು ಪರಿಗಣಿಸಲಾಗುತ್ತದೆ.
ಆದಾಗ್ಯೂ, ಅವರು ವಿಶೇಷ ಮಹಾಸಭೆಗೆ ಮುಂಚಿತವಾಗಿ ಫೆಡರೇಷನ್‌ನ ಕಾರ್ಯಕಾರಿ ಸಮಿತಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರೆ ರಾಜ್ಯ ಘಟಕಗಳಲ್ಲಿನ ತಮ್ಮ ಹುದ್ದೆಗಳಲ್ಲಿ ಮುಂದುವರಿಯುವ ಅವಕಾಶವಿದೆ.
ಆದರೆ, ಈ ನಿರ್ದಿಷ್ಟ ಷರತ್ತು ಎಐಎಫ್‌ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ಅವರ ಮೇಲೆ ಪರಿಣಾಮ ಬೀರುವುದಿಲ್ಲ. ಏಕೆಂದರೆ ಅವರು ಯಾವುದೇ ರಾಜ್ಯ ಘಟಕದ ಪದಾಧಿಕಾರಿಯಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.