ಶಿಲ್ಲಾಂಗ್: ಇದೇ 25ರಿಂದ ಆರಂಭವಾಗುವ ಎಎಫ್‌ಸಿ ಏಷ್ಯನ್ ಕಪ್ ಕ್ವಾಲಿಫೈಯರ್‌ನ ಮೂರನೇ ಸುತ್ತಿನ ಪಂದ್ಯಗಳ ಪೂರ್ವಸಿದ್ಧತೆಯ ಭಾಗವಾಗಿ ಭಾರತ ತಂಡವು ಬುಧವಾರ ಮಾಲ್ಡೀವ್ಸ್ ತಂಡದೊಂದಿಗೆ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯವನ್ನು ಆಡಲಿದೆ.
ಕಳೆದ ವರ್ಷ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಘೋಷಿಸಿದ್ದ ನಿವೃತ್ತಿಯನ್ನು ಕೈಬಿಟ್ಟಿರುವ ಅನುಭವಿ ಆಟಗಾರ ಸುನಿಲ್ ಚೆಟ್ರಿ ಈ ಪಂದ್ಯದಲ್ಲಿ ಭಾರತ ತಂಡಕ್ಕೆ ಮರಳುತ್ತಿದ್ದು, ಎಲ್ಲರ ಗಮನ ಸೆಳೆದಿದೆ. ಇಲ್ಲಿನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಮಾರ್ಚ್ 25ರಂದು ಕ್ವಾಲಿಫೈಯರ್ ಹಂತದ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶವನ್ನು ಇದೇ ಕ್ರೀಡಾಂಗಣದಲ್ಲಿ ಎದುರಿಸಲಿದೆ.
ಮನೊಲೊ ಮಾರ್ಕ್ವೆಜ್ ಮಾರ್ಗದರ್ಶನದ ಭಾರತ ತಂಡವು ಸೌಹಾರ್ದ ಪಂದ್ಯದಲ್ಲಿ ಗೆಲುವು ಸಾಧಿಸಿ, ಕ್ವಾಲಿಫೈಯರ್ ಪಂದ್ಯಗಳಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಗುರಿ ಹೊಂದಿದೆ. ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ಗೋಲು ಗಳಿಸಿದ ದಾಖಲೆ ಹೊಂದಿರುವ 40 ವರ್ಷ ವಯಸ್ಸಿನ ಚೆಟ್ರಿ ಅವರು ವಿದಾಯವನ್ನು ಹಿಂಪಡೆದ ಬಳಿಕ ಮೊದಲ ಬಾರಿ ಕಣಕ್ಕೆ ಇಳಿಯುವರು.
‘ಭಾರತ ತಂಡವು ಇದೇ ಮೊದಲ ಬಾರಿ ಇಲ್ಲಿನ ಕ್ರೀಡಾಂಗಣದಲ್ಲಿ ಆಡುತ್ತಿದೆ. ಮಾಲ್ಡೀವ್ಸ್ ಎದುರು ಸೌಹಾರ್ದ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿ, ಬಾಂಗ್ಲಾ ವಿರುದ್ಧದ ಪಂದ್ಯವನ್ನು ಗೆಲ್ಲುವುದು ನಮ್ಮ ಗುರಿ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾರ್ಕ್ವೆಜ್ ಹೇಳಿದರು.
ಸಂದೇಶ್ ಜಿಂಗನ್ ನಾಯಕತ್ವದ ಭಾರತ ತಂಡವು ವಿಶ್ವ ರ‍್ಯಾಂಕಿಂಗ್‌ನಲ್ಲಿ 126ನೇ ಸ್ಥಾನದಲ್ಲಿದ್ದರೆ, ಮಾಲ್ಡೀವ್ಸ್ 162ನೇ ಸ್ಥಾನದಲ್ಲಿದೆ. ಮಾಲ್ಡೀವ್ಸ್ ತಂಡವು ಇದೇ 25ರಂದು ತನ್ನ ತವರಿನಲ್ಲಿ ಕ್ವಾಲಿಫೈಯರ್ ಹಂತದ ಪಂದ್ಯದಲ್ಲಿ ಫಿಲಿಪ್ಪೀನ್ಸ್ ತಂಡವನ್ನು ಎದುರಿಸಲಿದೆ.
ಪಂದ್ಯ ಆರಂಭ: ರಾತ್ರಿ 7, ನೇರಪ್ರಸಾರ: ಜಿಯೊ ಹಾಟ್‌ಸ್ಟಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.