ಲಯೊನೆಲ್ ಮೆಸ್ಸಿ
ಬ್ಯೂನೊ ಏರ್ಸ್: ಅರ್ಜೆಂಟೀನಾ ತಂಡ ಮುಂದಿನ ವರ್ಷ ಅಮೆರಿಕ– ಕೆನಡಾ– ಮೆಕ್ಸಿಕೊದಲ್ಲಿ ನಡೆಯಲಿರುವ ವಿಶ್ವಕಪ್ ಫುಟ್‌ಬಾಲ್ ಟೂರ್ನಿಗೆ ಟಿಕೆಟ್ ಪಡೆದಿದೆ. ಈಗ ಅಭಿಮಾನಿಗಳ ಮುಂದಿರುವ ಮುಂದಿರುವ ಪ್ರಶ್ನೆ– ಸ್ಟಾರ್ ಆಟಗಾರ ಲಯೊನೆಲ್ ಮೆಸ್ಸಿ ಅವರು ತಮ್ಮ ಆರನೇ ವಿಶ್ವಕಪ್‌ನಲ್ಲಿ ಆಡುವರೇ ಎಂಬುದು.
37 ವರ್ಷ ವಯಸ್ಸಿನ ಮೆಸ್ಸಿ ತಮ್ಮ ತಂಡ ಕತಾರ್‌ನಲ್ಲಿ ನಡೆದ 2022ರ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್ ಆದಾಗ ನಾಯಕರಾಗಿದ್ದರು. ಸತತ ಎರಡನೇ ಬಾರಿ ವಿಶ್ವಕಪ್ ಗೆಲ್ಲಿಸಿಕೊಡುವರೇ ಎಂಬ ಕುತೂಹಲವಿದೆ. ಆದರೆ ಈ ಪ್ರಭಾವಿ ಆಟಗಾರನಿಲ್ಲದೇ ಪಂದ್ಯ ಗೆಲ್ಲಲು ತಂಡ ಸಮರ್ಥವಾಗಿದೆ ಎಂಬುದನ್ನು ಅರ್ಜೆಂಟೀನಾ ಸಾಬೀತುಪಡಿಸಿದೆ.
‘ವಿಶ್ವಕಪ್‌ಗೆ ಸಾಕಷ್ಟು ಸಮಯವಿದೆ, ಮುಂದೇನಾಗುವುದೊ ನೋಡೋಣ’ ಎಂದು ಹೇಳಿದ್ದಾರೆ ಅರ್ಜೆಂಟೀನಾ ಕೋಚ್ ಲಯೊನೆಲ್ ಸ್ಕಾಲೊನಿ.
‘ಈಗ ಒಂದೊಂದೇ ಪಂದ್ಯಗಳನ್ನು ಗಮನದಲ್ಲಿಟುಕೊಂಡು ಆಡಬೇಕಾಗಿದೆ. ಇಲ್ಲವಾದರೆ ವರ್ಷದುದ್ದಕ್ಕೂ ಪದೇ ಪದೇ ಅದೇ ವಿಷಯ ಮಾತನಾಡಬೇಕಾಗುತ್ತದೆ. ಅವರನ್ನು ಅವರ ಪಾಡಿಗೆ ಬಿಟ್ಟುಬಿಡೋಣ. ಅವರೇ ನಿರ್ಧರಿಸುತ್ತಾರೆ. ಅವರ ತಲೆಕೆಡಿಸಬೇಡಿ’ ಎಂದು ಹೇಳಿದ್ದಾರೆ.
ಉರುಗ್ವೆ ಜೊತೆ ಬೊಲಿವಿಯಾ ಡ್ರಾ ಮಾಡಿಕೊಂಡ ಕಾರಣ ವಿಶ್ವಕಪ್‌ಗೆ ಅರ್ಹತೆ ಪಡೆವ ಅರ್ಜೆಂಟೀನಾ ಹಾದಿ ಸುಗಮವಾಯಿತು. ಮಂಗಳವಾರ ನಡೆದ ಆ ಪಂದ್ಯದಲ್ಲಿ ಬೊಲಿವಿಯಾ ಗೆದ್ದಿದ್ದರೆ ಅರ್ಹತೆಗೆ ಕಾಯಬೇಕಾಗುತಿತ್ತು. ಇದಾಗಿ ಎರಡು ಗಂಟೆಗಳ ಬಳಿಕ ಅರ್ಜೆಂಟೀನಾ 4–1 ರಿಂದ ಸಾಂಪ್ರದಾಯಿಕ ಎದುರಾಳಿ ಬ್ರೆಜಿಲ್ ತಂಡವನ್ನು 4–1 ರಿಂದ ಸೋಲಿಸಿತ್ತು. ಇದಕ್ಕೆ ಮೊದಲು ಅರ್ಜೆಂಟೀನಾ 1–0 ಯಿಂದ ಉರುಗ್ವೆ ವಿರುದ್ಧ ಜಯಗಳಿಸಿತ್ತು. ಈ ಎರಡೂ ಪಂದ್ಯಗಳಲ್ಲಿ ಮೆಸ್ಸಿ ಆಡಿರಲಿಲ್ಲ.
ವರ್ಷದ ಶ್ರೇಷ್ಠ ಆಟಗಾರನಿಗೆ ನೀಡುವ ಬ್ಯಾಲನ್ ಡಿ ಒರ್ ಪ್ರಶಸ್ತಿಯನ್ನು ಎಂಟು ಬಾರಿ ಗೆದ್ದಿರುವ ಮೆಸ್ಸಿ ಸಣ್ಣ ಪ್ರಮಾಣದಲ್ಲಿ ತೊಡೆಯ ಸ್ನಾಯು ನೋವು ಅನುಭವಿಸಿದ ಕಾರಣ ಅವರನ್ನು ಆಡಿಸಿರಲಿಲ್ಲ. ಈ ಋತುವಿನಲ್ಲಿ ಇಂಟರ್ ಮಯಾಮಿ ತಂಡ ಗಾಯದ ಆತಂಕದಿಂದ ಸಮಸ್ಯೆಯಿಂದಾಗಿ ಅವರನ್ನು ಕೆಲವು ಪಂದ್ಯಗಳಲ್ಲಿ ಆಡಿಸಿರಲಿಲ್ಲ.
ಆದರೆ, ಅರ್ಜೆಂಟೀನಾ ರಾಷ್ಟ್ರೀಯ ತಂಡದ ಆಟಗಾರರಿಗೆ ಅವರು ತಂಡಕ್ಕೆ ಮರಳುವ ಬಗ್ಗೆ ಸ್ವಲ್ಪವೂ ಅನುಮಾನ ಉಳಿದಿಲ್ಲ. ‘ಮೆಸ್ಸಿ ಆಡಿದಿದ್ದರೆ ಇನ್ನೂ ಎರಡು ಅಥವಾ ಮೂರು ಗೋಲುಗಳನ್ನು ನಾವು ಗಳಿಸಬಹುದಿತ್ತು’ ಎನ್ನುತ್ತಾರೆ ಸ್ಟ್ರೈಕರ್ ಜೂಲಿಯನ್ ಆಲ್ವಾರೆಸ್. ಬ್ರೆಜಿಲ್ ವಿರುದ್ಧ ಮಂಗಳವಾರದ ಪಂದ್ಯದಲ್ಲಿ ಅವರೂ ಗೋಲು ಗಳಿಸಿದ್ದರು.
‘ನಂ.10 ಆಟಗಾರ (ಮೆಸ್ಸಿ) ಆಡುತ್ತಿದ್ದರೆ ನಮ್ಮ ತಂಡ ಎಂದೆಂದೂ ಉತ್ತಮವಾಗಿರುತ್ತದೆ’ ಎಂದು ಡಿ ಪಾಲ್ ಹೇಳಿದ್ದಾರೆ. ‘ಏಕೆಂದರೆ ಅವರು ಸಾರ್ವಕಾಲಿಕ ಶ್ರೇಷ್ಠ ಆಟಗಾರ’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.