ADVERTISEMENT

ಫಿಫಾ ರ್‍ಯಾಂಕಿಂಗ್‌: ಎರಡನೇ ಸ್ಥಾನಕ್ಕೇರಿದ ಅರ್ಜೆಂಟೀನಾ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2022, 15:31 IST
Last Updated 22 ಡಿಸೆಂಬರ್ 2022, 15:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜ್ಯೂರಿಚ್‌ (ಎ‍ಪಿ): ವಿಶ್ವಕಪ್‌ ಗೆದ್ದ ಅರ್ಜೆಂಟೀನಾ ತಂಡ, ಫಿಫಾ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೇರಿದೆ. ಬ್ರೆಜಿಲ್‌ ತಂಡ ಅಗ್ರಸ್ಥಾನ ತನ್ನಲ್ಲೇ ಉಳಿಸಿಕೊಂಡಿದೆ.

ದೋಹಾದಲ್ಲಿ ಭಾನುವಾರ ಕೊನೆಗೊಂಡ ಫಿಫಾ ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಲಯೊನೆಲ್‌ ಮೆಸ್ಸಿ ನೇತೃತ್ವದ ಅರ್ಜೆಂಟೀನಾ, ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್‌ ತಂಡವನ್ನು ಮಣಿಸಿತ್ತು. ಈ ಸಾಧನೆಯಿಂದ ತಂಡವು, ಪಾಯಿಂಟ್‌ ಪಟ್ಟಿಯಲ್ಲಿ ಒಂದು ಸ್ಥಾನ ಮೇಲಕ್ಕೇರಿದೆ. ದಕ್ಷಿಣ ಅಮೆರಿಕದ ತಂಡ 36 ವರ್ಷಗಳ ಬಳಿಕ ವಿಶ್ವಕಪ್‌ ಗೆದ್ದ ಸಾಧನೆ ಮಾಡಿತ್ತು.

ರನ್ನರ್ಸ್‌ ಅಪ್‌ ಫ್ರಾನ್ಸ್‌ ಕೂಡಾ ಒಂದು ಸ್ಥಾನ ಮೇಲಕ್ಕೇರಿ ಮೂರನೇ ಸ್ಥಾನ ಗಳಿಸಿದೆ. ಎರಡು ಕ್ರಮಾಂಕ ಕುಸಿತ ಕಂಡಿರುವ ಬೆಲ್ಜಿಯಂ ನಾಲ್ಕನೇ ಸ್ಥಾನದಲ್ಲಿದೆ.

ADVERTISEMENT

ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲು ಅನುಭವಿಸಿದ್ದ ಇಂಗ್ಲೆಂಡ್‌ ಮತ್ತು ನೆದರ್ಲೆಂಡ್ಸ್‌ ತಂಡಗಳು ಕ್ರಮವಾಗಿ ಐದು ಹಾಗೂ ಆರನೇ ಸ್ಥಾನಗಳಲ್ಲಿವೆ.

ವಿಶ್ವಕ‍ಪ್‌ ಟೂರ್ನಿಯಲ್ಲಿ ಕಂಚು ಗೆದ್ದ ಕ್ರೊವೇಷ್ಯಾ ಏಳನೇ ಸ್ಥಾನಕ್ಕೇರಿದರೆ, 22ನೇ ಸ್ಥಾನದಲ್ಲಿದ್ದ ಮೊರೊಕ್ಕೊ 11ನೇ ಸ್ಥಾನಕ್ಕೆ ಬಡ್ತಿ ಪಡೆದುಕೊಂಡಿದೆ. ಫಿಫಾ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದ ಆಫ್ರಿಕಾದ ಮೊದಲ ತಂಡ ಎಂಬ ಗೌರವವನ್ನು ಮೊರೊಕ್ಕೊ ತನ್ನದಾಗಿಸಿಕೊಂಡಿತ್ತು.

ಬ್ರೆಜಿಲ್‌ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ಕ್ರೊವೇಷ್ಯಾ ಎದುರು ಸೋಲು ಅನುಭವಿಸಿತ್ತು. ಆದರೂ 1,840 ‍‍ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಅರ್ಜೆಂಟೀನಾ ಬಳಿ 1,838 ಪಾಯಿಂಟ್ಸ್‌ಗಳಿವೆ.

ಫಿಫಾ ರ‍್ಯಾಂಕಿಂಗ್‌ (ಅಗ್ರ 10 ಸ್ಥಾನ): 1. ಬ್ರೆಜಿಲ್‌, 2.ಅರ್ಜೆಂಟೀನಾ, 3.ಫ್ರಾನ್ಸ್‌, 4.ಬೆಲ್ಜಿಯಂ, 5.ಇಂಗ್ಲೆಂಡ್‌, 6.ನೆದರ್ಲೆಂ‌ಡ್ಸ್‌, 7.ಕ್ರೊವೇಷ್ಯಾ, 8.ಇಟಲಿ, 9.ಪೋರ್ಚುಗಲ್‌, 10. ಸ್ಪೇನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.