ADVERTISEMENT

ಏಷ್ಯನ್ ಫುಟ್‌ಬಾಲ್‌: ಐಎಸ್‌ಎಲ್‌ಗೆ ಎಎಫ್‌ಸಿಯ ಮಾನ್ಯತೆ

ಪಿಟಿಐ
Published 15 ಜನವರಿ 2026, 14:04 IST
Last Updated 15 ಜನವರಿ 2026, 14:04 IST
<div class="paragraphs"><p>ಫುಟ್‌ಬಾಲ್‌</p></div>

ಫುಟ್‌ಬಾಲ್‌

   

ನವದೆಹಲಿ: ಮೊಟಕುಗೊಂಡಿರುವ ಇಂಡಿಯನ್ ಸೂಪರ್ ಲೀಗ್‌ಗೆ ಏಷ್ಯನ್ ಫುಟ್‌ಬಾಲ್‌ ಒಕ್ಕೂಟವು ಮಾನ್ಯತೆ ನೀಡಿದೆ ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್ ಗುರುವಾರ ತಿಳಿಸಿದೆ. 

ಈ ಲೀಗ್‌ನಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು, ಏಷ್ಯನ್ ಚಾಂಪಿಯನ್ಸ್‌ ಲೀಗ್‌ಗೆ ನೇರ ಪ್ರವೇಶದ ಬದಲು ವಲಯ ಕ್ವಾಲಿಫೈರ್‌ಗಳ ಮೂಲಕ (ಅಪರೋಕ್ಷ) ಪ್ರವೇಶ ಪಡೆಯಲಿವೆ.

ADVERTISEMENT

ಫೆಡರೇಷನ್‌ಗೆ ವಾಣಿಜ್ಯ ಪಾಲುದಾರ ಸಿಗದೇ ಈ ಬಾರಿಯ ಐಎಸ್‌ಎಲ್‌ ವಿಳಂಬವಾಗಿದೆ. ಹೀಗಾಗಿ ಕ್ಲಬ್‌ಗಳು ಈ ಋತುವಿನಲ್ಲಿ  ಕಡ್ಡಾಯ 24 ಪಂದ್ಯಗಳನ್ನು ಆಡಲು ಸಾಧ್ಯವಾಗುತ್ತಿಲ್ಲ. ಎಎಫ್‌ಸಿ ಚಾಂಪಿಯನ್ಸ್‌ ಲೀಗ್ 2 ಹಂತದಲ್ಲಿ ಆಡುವ ಅರ್ಹತೆ ಪಡೆಯಬೇಕಾದರೆ ತಂಡಗಳು ಒಂದು ಋತುವಿನಲ್ಲಿ 24 ಪಂದ್ಯಗಳನ್ನು ಆಡುವುದು ಕಡ್ಡಾಯ.

ಐಎಸ್‌ಎಲ್‌ನಲ್ಲಿ 14 ತಂಡಗಳು ಭಾಗವಹಿಸುತ್ತಿವೆ. ಹೆಚ್ಚಿನ ಕ್ಲಬ್‌ಗಳು 16 ಪಂದ್ಯಗಳನ್ನು ಮಾತ್ರ ಆಡಲಿವೆ. ತಂಡಗಳು ಐಎಸ್‌ಎಲ್‌ನಲ್ಲಿ ಒಂದು ಸುತ್ತಿನ ಪಂದ್ಯಗಳನ್ನು (ತಲಾ 13) ಆಡಲಿವೆ. ಜೊತೆಗೆ ಎಐಎಫ್‌ಎಫ್‌ ಸೂಪರ್ ಕಪ್‌ನಲ್ಲಿ ಕನಿಷ್ಠ ಮೂರು ಪಂದ್ಯಗಳನ್ನು ಆಡಲಿವೆ. ಒಟ್ಟು 91 ಪಂದ್ಯಗಳು ನಡೆಯಬೇಕಾಗಿದೆ.

ನಿಯಮದಿಂದ ಒಂದು ಬಾರಿಯ ವಿನಾಯಿತಿ ನೀಡುವಂತೆ ಎಎಫ್‌ಸಿಗೆ ಮನವಿ ಮಾಡುವಂತೆ ಕ್ಲಬ್‌ಗಳು ಎಐಎಫ್‌ಎಫ್‌ಗೆ ಒತ್ತಾಯಿಸಿದ್ದವು. ಎಐಎಫ್‌ಎಫ್‌ ಉಪ ಮಹಾ ಕಾರ್ಯದರ್ಶಿ ಎಂ. ಸತ್ಯನಾರಾಯಣ ಅವರು ಈ ಸಂಬಂಧ ಎಎಫ್‌ಸಿಗೆ ಪತ್ರ ಬರೆದಿದ್ದರು.

‘ಸದಸ್ಯ ರಾಷ್ಟ್ರಗಳು ನೇರ ಪ್ರವೇಶ ಪಡೆಯಬೇಕಾದರೆ ಅರ್ಹತಾ ಮಾನದಂಡ ಪಾಲಿಸಬೇಕಾಗುತ್ತದೆ. ಆದರೆ 4.4ನೇ ವಿಧಿಯ ಪ್ರಕಾರ ಪರೋಕ್ಷ ಪ್ರವೇಶಕ್ಕೆ ಅವಕಾಶವಿದೆ’ ಎಂದು ಏಷ್ಯನ್ ಫುಟ್‌ಬಾಲ್‌ ಒಕ್ಕೂಟ ಗುರುವಾರ ಎಐಎಫ್‌ಎಫ್‌ಗೆ ಪತ್ರ ಬರೆದಿದೆ.

‘ಈ ವಿನಾಯಿತಿ ದೊರಕಿರುವುದು, ಲೀಗ್ ಪುನರಾರಂಭಿಸುವ ಎಐಎಫ್‌ಎಫ್‌ ಪ್ರಯತ್ನಗಳಿಗೆ ದೊರೆತ ಬೆಂಬಲವಾಗಿದೆ.  ಭಾರತದ ಫುಟ್‌ಬಾಲ್‌ಗೆ ಎದುರಾದ ಸವಾಲಿನ ಸಮಯದಲ್ಲಿ ಕ್ಲಬ್‌ಗಳಿಗೂ ಉತ್ತೇಜನ ದೊರಕಿದಂತಾಗಿದೆ’ ಎಂದು ಎಂ. ಸತ್ಯನಾರಾಯಣ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.