ADVERTISEMENT

ಫುಟ್‌ಬಾಲ್‌: ಬೆಂಗಳೂರು ಯುನೈಟೆಡ್ ಎಫ್‌ಸಿಗೆ ರೋಚಕ ಜಯ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 15:57 IST
Last Updated 15 ನವೆಂಬರ್ 2021, 15:57 IST
ಚೆಂಡಿಗಾಗಿ ಎಡಿಇ ಎಫ್‌ಸಿಯ ನಿಕ್ಕಿ (ಎಡ) ಮತ್ತು ಬಿಯುಎಫ್‌ಸಿಯ ಲಾಲ್‌ಬಿಯಕ್ ಫಂಕಿಮಾ  ಸೆಣಸಾಡಿದರು –ಪ್ರಜಾವಾಣಿ ಚಿತ್ರ
ಚೆಂಡಿಗಾಗಿ ಎಡಿಇ ಎಫ್‌ಸಿಯ ನಿಕ್ಕಿ (ಎಡ) ಮತ್ತು ಬಿಯುಎಫ್‌ಸಿಯ ಲಾಲ್‌ಬಿಯಕ್ ಫಂಕಿಮಾ  ಸೆಣಸಾಡಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಗಾಯ್ ಹರ್ಮನ್ ಅಟಿಮೆಲಿ ಬೆಲೆಕ್ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಬೆಂಗಳೂರು ಯುನೈಟೆಡ್ ಎಫ್‌ಸಿ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆಯ ಸೂಪರ್ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ರೋಚಕ ಜಯ ಸಾಧಿಸಿತು.

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಎಡಿಇ ಎಫ್‌ಸಿಯನ್ನು ಬಿಯುಎಫ್‌ಸಿ 1–0 ಅಂತರದಲ್ಲಿ ಮಣಿಸಿತು. ಕ್ಯಾಮರಾನ್‌ನ 21 ವರ್ಷದೊಳಗಿನವರ ತಂಡದ ಸದಸ್ಯ ಬೆಲೆಕ್ 14ನೇ ನಿಮಿಷದಲ್ಲಿ ಗೋಲು ಗಳಿಸಿದರು. ಕೊನೆಯ ವರೆಗೂ ಮುನ್ನಡೆ ಉಳಿಸಿಕೊಂಡು ಎದುರಾಳಿ ತಂಡವನ್ನು ನಿಯಂತ್ರಿಸುವಲ್ಲಿ ತಂಡ ಯಶಸ್ವಿಯಾಯಿತು.

ಎಫ್‌ಸಿ ಡೆಕ್ಕನ್ ಮತ್ತು ಎಂಇಜಿ–ಸೆಂಟರ್ ಎಫ್‌ಸಿ ನಡುವಿನ ಪಂದ್ಯ 1–1 ಗೋಲಿನಿಂದ ಸಮಬಲವಾಯಿತು. ಡೆಕ್ಕನ್ ಪರ ಲೆನಿನ್ ಮಿತ್ರನ್ (70ನೇ ನಿಮಿಷ) ಮತ್ತು ಎಂಇಜಿ ಪರ ಅರ್ಜುನ್ ಮಧು (72ನೇ ನಿ) ಗೋಲು ಗಳಿಸಿದರು.

ADVERTISEMENT

ಥಾಂಕೋಸ್ ಸ್ಟೂಡೆಂಟ್ಸ್ ಯೂನಿಯನ್ ಎಫ್‌ಸಿ ಮತ್ತು ಜವಾಹರ್ ಯೂನಿಯನ್ ಎಫ್‌ಸಿ ನಡುವಿನ ಪಂದ್ಯವೂ 1–1ರಲ್ಲಿ ಸಮವಾಯಿತು. ಜವಾಹರ್‌ಗಾಗಿ ಮೊಹಮ್ಮದ್ ಜವಾಸಿನ್ (15ನೇ ನಿ) ಮತ್ತು ಥಾಂಕೋಸ್‌ಗಾಗಿ ಜಪಾನ್ ಆಟಗಾರ ತೈಕಿ ಯೊಶಿಡಾ (27ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರು.

ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರು ಡ್ರೀಮ್ ಯುನೈಟೆಡ್ ಎಫ್‌ಸಿ ಮತ್ತು ಬೆಂಗಳೂರು ಇಂಡಿಪೆಂಡೆಂಟ್ಸ್‌ ಎಫ್‌ಸಿ ನಡುವೆ ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.