ADVERTISEMENT

ಬೆಂಗಳೂರು ತಂಡಕ್ಕೆ ಮುಂಬೈ ಅಗ್ನಿಪರೀಕ್ಷೆ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಬಿಎಫ್‌ಸಿಗೆ ಜಯದ ಲಯಕ್ಕೆ ಮರಳುವ ಬಯಕೆ

ಪಿಟಿಐ
Published 4 ಜನವರಿ 2021, 13:21 IST
Last Updated 4 ಜನವರಿ 2021, 13:21 IST
ಬಿಎಫ್‌ಸಿ ಆಟಗಾರರು ಅಭ್ಯಾಸ ನಡೆಸಿದರು –ಟ್ವಿಟರ್ ಚಿತ್ರ
ಬಿಎಫ್‌ಸಿ ಆಟಗಾರರು ಅಭ್ಯಾಸ ನಡೆಸಿದರು –ಟ್ವಿಟರ್ ಚಿತ್ರ   

ಫತೋರ್ಡ್, ಗೋವಾ: ಸತತ ಎರಡು ಸೋಲಿನಿಂದ ಕಂಗೆಟ್ಟಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡ ಮತ್ತೊಂದು ಅಗ್ನಿಪರೀಕ್ಷೆಗೆ ಸಜ್ಜಾಗಿದೆ. ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಸುನಿಲ್ ಚೆಟ್ರಿ ನಾಯಕತ್ವದ ಬಿಎಫ್‌ಸಿ, ಬಲಿಷ್ಠ ಮುಂಬೈ ಸಿಟಿ ಎಫ್‌ಸಿಯನ್ನು ಎದುರಿಸಲಿದೆ. ಅಮೋಘ ಆಟವಾಡುತ್ತ ಜಯದ ನಾಗಾಲೋಟದಲ್ಲಿರುವ ಮುಂಬೈ ಗೆಲುವಿನ ಭರವಸೆಯೊಂದಿಗೆ ಕಣಕ್ಕೆ ಇಳಿಯಲಿರುವುದರಿಂದ ಪಂದ್ಯ ರೋಚಕವಾಗುವ ಸಾಧ್ಯತೆ ಇದೆ.

2014ರಿಂದ ಐಎಸ್‌ಎಲ್‌ನಲ್ಲಿ ಆಡುತ್ತಿರುವ ಬಿಎಫ್‌ಸಿ ಇದೇ ಮೊದಲ ಬಾರಿ ಸತತ ಎರಡು ಪಂದ್ಯಗಳಲ್ಲಿ ಗೋಲು ಗಳಿಸದೇ ಪಂದ್ಯವನ್ನು ಸೋತಿದೆ. ಒಂದು ವಾರದ ವಿರಾಮದ ನಂತರ ತಂಡ ಆಡಲು ಸಜ್ಜಾಗಿದ್ದು ಗೆಲುವಿನ ಲಯಕ್ಕೆ ಮರಳಲು ಪ್ರಯತ್ನಿಸಲಿದೆ. ತಂಡ ಈ ವರೆಗೆ 11 ಗೋಲುಗಳನ್ನು ಗಳಿಸಿದೆ. ಆದರೆ ಅವುಗಳ ಪೈಕಿ ಎಂಟು ಸೆಟ್ ಪೀಸ್ ಮೂಲಕ ಬಂದಿವೆ. ಒಂಬತ್ತು ಗೋಲುಗಳನ್ನು ಬಿಟ್ಟುಕೊಟ್ಟಿದೆ.

‘ತಪ್ಪುಗಳನ್ನು ಮುಂದುವರಿಸಲು ತಂಡ ಇಷ್ಟಪಡುವುದಿಲ್ಲ. ಎರಡು ಪಂದ್ಯಗಳಲ್ಲಿ 1–0 ಅಂತರದಲ್ಲಿ ಸೋತಿರುವುದರಿಂದ ಮಂಗಳವಾರದ ಪಂದ್ಯದಲ್ಲಿ ಗೋಲುಗಳನ್ನು ಬಿಟ್ಟುಕೊಡದೇ ಇರಲು ಪ್ರಯತ್ನಿಸಲಾಗುವುದು. ಗೋಲು ಬಿಟ್ಟುಕೊಟ್ಟರೆ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ಆಟಗಾರರಿಗೆ ಗೊತ್ತಾಗಿದೆ. ಆದ್ದರಿಂದ ಎಚ್ಚರಿಕೆಯಿಂದ ಆಡಲು ಮುಂದಾಗಲಿದ್ದಾರೆ’ ಎಂದು ಕೋಚ್ ಕಾರ್ಲಸ್ ಕ್ವದ್ರತ್ ಹೇಳಿದ್ದಾರೆ.

ADVERTISEMENT

ಐಎಸ್‌ಎಲ್‌ನಲ್ಲಿ ಮುಂಬೈ ವಿರುದ್ಧ ಬೆಂಗಳೂರು ತಂಡ ಸಾಧನೆ ಹೇಳಿಕೊಳ್ಳುವಂತಿಲ್ಲ. ಈ ಹಿಂದಿನ ಎರಡೂ ಪಂದ್ಯಗಳಲ್ಲಿ ಬೆಂಗಳೂರು ವಿರುದ್ಧ ಮುಂಬೈ ಗೆಲುವು ಸಾಧಿಸಿದೆ. ಈ ಬಾರಿ ಕಳೆದ ಏಳು ಪಂದ್ಯಗಳಲ್ಲಿ ಮುಂಬೈ ಅಜೇಯವಾಗಿದ್ದು ಹಿಂದಿನ ಎರಡು ಪಂದ್ಯಗಳಲ್ಲಿ ಒಂದು ಗೋಲನ್ನೂ ಬಿಟ್ಟುಕೊಡದೆ ಎದುರಾಳಿಗಳನ್ನು ಮಣಿಸಿದೆ. ಗೋಲ್‌ಕೀಪರ್ ಅಮರಿಂದರ್ ಸಿಂಗ್ ಅವರು ಅಮೋಘ ಫಾರ್ಮ್‌ನಲ್ಲಿದ್ದು ಎದುರಾಳಿ ತಂಡಗಳ ಆಕ್ರಮಣವನ್ನು ಸಮರ್ಥವಾಗಿ ಎದುರಿಸುತ್ತಿದ್ದಾರೆ.

ಮುಂಬೈ ತಂಡ ಹಿಂದಿನ ಏಳು ಪಂದ್ಯಗಳಲ್ಲಿ ಕನಿಷ್ಠ ಒಂದು ಗೋಲನ್ನಾದರೂ ಗಳಿಸಿದ್ದು ಒಟ್ಟು 13 ಬಾರಿ ಚೆಂಡನ್ನು ಗುರಿಮುಟ್ಟಿಸಿದೆ. ಇದು, ಈ ಬಾರಿ ತಂಡವೊಂದು ಗಳಿಸಿರುವ ಗರಿಷ್ಠ ಗೋಲು.

ಆದರೆ ಬೆಂಗಳೂರು ಎದುರಿನ ಪಂದ್ಯ ಕಠಿಣವಾಗಲಿದೆ ಎಂದು ಕೋಚ್ ಸರ್ಜಿಯೊ ಲೊಬೆರಾ ಅಭಿಪ್ರಾಯಪಟ್ಟಿದ್ದಾರೆ. ‘ಹಿಂದಿನ ಎರಡು ಪಂದ್ಯಗಳಿಗೆ ಹೋಲಿಸಿದರೆ ಮಂಗಳವಾರದ ಪಂದ್ಯ ಸ್ವಲ್ಪ ಭಿನ್ನವಾಗಿರಲಿದೆ. ಬೆಂಗಳೂರು ತಂಡದ ಆಟಗಾರರು ಯಾವುದೇ ಸಂದರ್ಭದಲ್ಲಿ ಪುಟಿದೇಳಬಲ್ಲರು. ಅವರ ರಕ್ಷಣಾ ವಿಭಾಗ ಬಲಿಷ್ಠವಾಗಿದೆ. ಈ ಪರಿಸ್ಥಿತಿಯನ್ನು ಮೆಟ್ಟಿನಿಲ್ಲುವುದು ಸುಲಭವಲ್ಲ’ ಎಂದು ಅವರು ನುಡಿದರು.

‘ಹಿಂದಿನ ಎರಡು ಪಂದ್ಯಗಳಲ್ಲಿ ಗೋಲು ಗಳಿಸುವ ಅವಕಾಶ ಸೃಷ್ಟಿಸಲು ತಂಡ ಪ್ರಯತ್ನಿಸಿತ್ತು. ಆದರೆ ಸಣ್ಣ ತಪ್ಪುಗಳಿಂದಾಗಿ ಫಲ ಸಿಗಲಿಲ್ಲ. ನಿಯಮಿತವಾಗಿ ಗೋಲು ಗಳಿಸುವವರನ್ನು ಹೊರತುಪಡಿಸಿ ಹೊಸ ಆಟಗಾರರು ಕೆಲವು ಪಂದ್ಯಗಳಲ್ಲಿ ಮಿಂಚಿದ್ದಾರೆ ಎಂಬುದು ಖುಷಿಯ ವಿಷಯ. ತಂಡ ಸಾಂಘಿಕವಾಗಿ ಬಲಿಷ್ಠವಾಗುತ್ತಿದೆ ಎಂಬುದರ ಸೂಚನೆ ಇದು’ ಎಂದು ಕಾರ್ಲಸ್ ಕ್ವದ್ರತ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.