ADVERTISEMENT

ಪಾರ್ಟಲು ಒಪ್ಪಂದ ವಿಸ್ತರಿಸಿದ ಬಿಎಫ್‌ಸಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 19:45 IST
Last Updated 30 ಮಾರ್ಚ್ 2020, 19:45 IST
ಎರಿಕ್ ಪಾರ್ಟಲು (ಎಡ) 
ಎರಿಕ್ ಪಾರ್ಟಲು (ಎಡ)    

ಬೆಂಗಳೂರು: ಆಸ್ಟ್ರೇಲಿಯಾದ ಮಿಡ್‌ಫೀಲ್ಡರ್‌ ಎರಿಕ್‌ ಪಾರ್ಟಲು 2020ರವರೆಗೆ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಪರ ಆಡಲಿದ್ದಾರೆ.

ಬಿಎಫ್‌ಸಿ ಫ್ರಾಂಚೈಸ್‌, ಪಾರ್ಟಲು ಜೊತೆಗಿನ ಒಪ್ಪಂದವನ್ನು ಇನ್ನು ಎರಡು ವರ್ಷ ವಿಸ್ತರಿಸಿದೆ. ಈ ವಿಷಯವನ್ನು ಸೋಮವಾರ ಪ್ರಕಟಿಸಿದೆ.

ಸುನಿಲ್‌ ಚೆಟ್ರಿ ಸಾರಥ್ಯದ ಬಿಎಫ್‌ಸಿ ತಂಡ ಈ ಬಾರಿಯ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಲು ವಿಫಲವಾಗಿತ್ತು.

ADVERTISEMENT

‘ಹಿಂದಿನ ಮೂರು ವರ್ಷಗಳಿಂದ ಬಿಎಫ್‌ಸಿ ಪರ ಆಡುತ್ತಿದ್ದೇನೆ. ಹೀಗಾಗಿ ಬೆಂಗಳೂರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿದ್ದೇನೆ. ಇಲ್ಲಿನ ಅಭಿಮಾನಿಗಳ ಪ್ರೀತಿ ಕಂಡು ಮೂಕ ವಿಸ್ಮಿತನಾಗಿದ್ದೇನೆ. ಇನ್ನೂ ಎರಡು ವರ್ಷ ಬಿಎಫ್‌ಸಿ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರುವುದಕ್ಕೆ ಖುಷಿಯಾಗಿದೆ’ ಎಂದು ಪಾರ್ಟಲು ಹೇಳಿದ್ದಾರೆ.

33 ವರ್ಷ ವಯಸ್ಸಿನ ಪಾರ್ಟಲು, ಮಿಡ್‌ಫೀಲ್ಡ್‌ ವಿಭಾಗದಲ್ಲಿ ಬಿಎಫ್‌ಸಿಯ ಬೆನ್ನೆಲುಬಾಗಿದ್ದಾರೆ. ಬೆಂಗಳೂರಿನ ತಂಡವು ಐಎಸ್‌ಎಲ್‌ ಮತ್ತು ಸೂಪರ್‌ ಕಪ್‌ನಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ನಿಭಾಯಿಸಿದ್ದರು.

‘ಸಹ ಆಟಗಾರರು, ಕೋಚ್‌ ಹಾಗೂ ನೆರವು ಸಿಬ್ಬಂದಿಯ ಸಹಕಾರ ಮತ್ತು ಪ್ರೋತ್ಸಾಹ ಕಂಡು ಪುಳಕಿತನಾಗಿದ್ದೇನೆ. ಎಲ್ಲರೊಂದಿಗೂ ಉತ್ತಮ ಒಡನಾಟವಿದೆ. ತಂಡದ ಕೆಲ ಆಟಗಾರರು ನನಗೆ ಪರಮಾಪ್ತ ಸ್ನೇಹಿತರೂ ಆಗಿ ಬಿಟ್ಟಿದ್ದಾರೆ’ ಎಂದೂ ಪಾರ್ಟಲು ನುಡಿದಿದ್ದಾರೆ.

‘ಪಾರ್ಟಲು ಅವರು ಬಿಎಫ್‌ಸಿ ಕುಟುಂಬದ ಬಹುಮುಖ್ಯ ಸದಸ್ಯರಾಗಿಬಿಟ್ಟಿದ್ದಾರೆ. ಹಿಂದಿನ ಮೂರು ವರ್ಷಗಳಿಂದ ಅವರು ತಂಡದ ಯಶಸ್ಸಿಗಾಗಿ ಶ್ರಮಿಸಿದ್ದಾರೆ. ಹೀಗಾಗಿ ಅವರೊಂದಿಗಿನ ಒಪ್ಪಂದವನ್ನು ವಿಸ್ತರಿಸಲು ತೀರ್ಮಾನಿಸಿದ್ದೇವೆ’ ಎಂದು ಬಿಎಫ್‌ಸಿ ಸಿಇಒ ಮಂದಾರ ತಮ್ಹಾನೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.