ADVERTISEMENT

ಬಿಎಫ್‌ಸಿಗೆ ‘ಹೈಲ್ಯಾಂಡರ್ಸ್’ ಸವಾಲು

ಗೆಲುವಿನ ಓಟ ಮುಂದುವರಿಸುವ ತವಕದಲ್ಲಿ ಚೆಟ್ರಿ ಬಳಗ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 22:30 IST
Last Updated 21 ಫೆಬ್ರುವರಿ 2026, 22:30 IST
ಬೆಂಗಳೂರು ಎಫ್‌ಸಿ ತಂಡದ ನಾಯಕ ಸುನಿಲ್‌ ಚೆಟ್ರಿ –ಪ್ರಜಾವಾಣಿ ಚಿತ್ರ
ಬೆಂಗಳೂರು ಎಫ್‌ಸಿ ತಂಡದ ನಾಯಕ ಸುನಿಲ್‌ ಚೆಟ್ರಿ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ ಅಮೋಘ ಆರಂಭ ಪಡೆದಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ತಂಡವು ತನ್ನ ಎರಡನೇ ಪಂದ್ಯದಲ್ಲಿ ಭಾನುವಾರ ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ತಂಡವನ್ನು ಎದುರಿಸಲಿದೆ. 

ಸ್ಪೋರ್ಟಿಂಗ್‌ ಡೆಲ್ಲಿ (ಎಸ್‌ಸಿ ಡೆಲ್ಲಿ) ವಿರುದ್ಧ ಆರಂಭಿಕ ಪಂದ್ಯದಲ್ಲಿ ಅಧಿಕಾರಯುತ ಜಯ ದಾಖಲಿಸಿರುವ ಸುನಿಲ್‌ ಚೆಟ್ರಿ ಬಳಗವು ಭರ್ತಿ ಆತ್ಮವಿಶ್ವಾಸದಲ್ಲಿದೆ. ತನ್ನ ತವರು ಕಂಠೀರವ ಕ್ರೀಡಾಂಗಣದಲ್ಲಿ ಅಜೇಯ ಓಟವನ್ನು ಮುಂದುವರಿಸುವ ಛಲದಲ್ಲಿದೆ. 

ಕಳೆದ ಭಾನುವಾರ ನಡೆದ ಪಂದ್ಯದಲ್ಲಿ ಹಾಲಿ ರನ್ನರ್ಸ್‌ ಅಪ್‌ ಬಿಎಫ್‌ಸಿ ತಂಡವು 2–0 ಗೋಲುಗಳ ಅಂತರದಿಂದ ಎಸ್‌ಸಿ ಡೆಲ್ಲಿ ತಂಡವನ್ನು ಸದೆಬಡಿದಿತ್ತು. ಮುಂಚೂಣಿ ಆಟಗಾರ ಶಿವಶಕ್ತಿ ನಾರಾಯಣನ್ ಮತ್ತು ಸುನಿಲ್ ಚೆಟ್ರಿ ಗೋಲು ದಾಖಲಿಸಿ ಗೆಲುವಿನ ರೂವಾರಿಗಳಾಗಿದ್ದರು. 41 ವರ್ಷದ ಚೆಟ್ರಿ ಲೀಗ್‌ನಲ್ಲಿ ಗೋಲು ದಾಖಲಿಸಿದ ಅತಿ ಹಿರಿಯ ಆಟಗಾರ ಎಂಬ ಗೌರವಕ್ಕೂ ಪಾತ್ರರಾಗಿದ್ದರು.

ADVERTISEMENT

ಮತ್ತೊಂದೆಡೆ ‘ಹೈಲ್ಯಾಂಡರ್ಸ್’ (ನಾರ್ತ್‌ಈಸ್ಟ್ ಯುನೈಟೆಡ್) ತಂಡವು ಈಸ್ಟ್ ಬೆಂಗಾಲ್ ವಿರುದ್ಧದ ಸೋಲಿನ ಕಹಿ ನೆನಪನ್ನು ಮರೆತು ಗೆಲುವಿನ ಹಾದಿಗೆ ಮರಳಲು ಎದುರು ನೋಡುತ್ತಿದೆ. ಅಲ್ಲದೆ, 2018ರ ನಂತರ ಆ ತಂಡವು ಬೆಂಗಳೂರಿನಲ್ಲಿ ಬಿಎಫ್‌ಸಿ ವಿರುದ್ಧ ಗೆಲುವು ಸಾಧಿಸಿಲ್ಲ. ಆ ಇತಿಹಾಸವನ್ನು ಬದಲಿಸುವ ದೊಡ್ಡ ಸವಾಲು ತಂಡದ ಮುಂದಿದೆ.

ನಾರ್ತ್‌ಈಸ್ಟ್ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಸೋತಿದ್ದರೂ, ಕಳೆದ ಬಾರಿ ಕಂಠೀರವದಲ್ಲಿ 2-2 ಡ್ರಾ ಸಾಧಿಸಿ ಸಮಬಲದ ಪೈಪೋಟಿ ನೀಡಿದ್ದನ್ನು ಬಿಎಫ್‌ಸಿ ತಂಡದ ಮುಖ್ಯಕೋಚ್‌ ರೆನೆಡಿ ಸಿಂಗ್ ನೆನಪಿಸಿಕೊಂಡಿದ್ದಾರೆ. ಹೀಗಾಗಿ, ಎದುರಾಳಿಗಳನ್ನು ಲಘುವಾಗಿ ಪರಿಗಣಿಸದಂತೆ ತಂಡದ ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.

ತಾಂತ್ರಿಕ ಸಿದ್ಧತೆಗಳ ಬಗ್ಗೆ ಮಾತನಾಡಿದ ಸಿಂಗ್ ಅವರು, ‘ಪ್ರತಿಯೊಂದು ತಂಡವೂ ಚೆಂಡನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಬಯಸುತ್ತದೆ. ಆದರೆ, ನಾವು ಹೇಗೆ ಸಾಂಘಿಕವಾಗಿ ಆಕ್ರಮಣ ಮತ್ತು ರಕ್ಷಣಾತ್ಮಕ ಆಟವಾಡುತ್ತೇವೆ ಎಂಬುದು ಮುಖ್ಯವಾಗುತ್ತದೆ. ತವರಿನಲ್ಲಿ ನಮಗೆ ಗೆಲುವಿನ ಅವಕಾಶಗಳು ಹೆಚ್ಚು ಇವೆ’ ಎಂದು ರೆನೆಡಿ ವಿಶ್ವಾಸ ವ್ಯಕ್ತಪಡಿಸಿದರು.

‘ಈ ಋತುವಿನ ಸ್ವರೂಪಕ್ಕೆ ತಕ್ಕಂತೆ ನಾವು ಪ್ರತಿ ಪಂದ್ಯವನ್ನು ಗೆಲ್ಲುವ ಮನಸ್ಥಿತಿಯೊಂದಿಗೆ ಕಣಕ್ಕಿಳಿಯಬೇಕಿದೆ’ ಎಂದು ತಂಡದ ಪ್ರಮುಖ ಡಿಫೆಂಡರ್‌ ಚಿಂಗ್ಲೆನ್ಸಾನಾ ಸಿಂಗ್ ಪ್ರತಿಕ್ರಿಯಿಸಿದರು. 

ಇಂದಿನ ಪಂದ್ಯಗಳು

ಬಿಎಫ್‌ಸಿ–ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ 

ತಾಣ: ಕಂಠೀರವ ಕ್ರೀಡಾಂಗಣ, ಸಂಜೆ 5

ಕೇರಳ ಬ್ಲಾಸ್ಟರ್ಸ್‌–ಮುಂಬೈ ಸಿಟಿ

ತಾಣ: ಕೊಚ್ಚಿ, ರಾತ್ರಿ 7.30

ನೇರಪ್ರಸಾರ:ಸೋನಿ ಸ್ಪೋರ್ಟ್ಸ್‌ ಟೆನ್‌ 2, ಫ್ಯಾನ್‌ ಕೋಡ್‌ ಆ್ಯಪ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.