
ಬೆಂಗಳೂರು: ತವರಿನಲ್ಲಿ ಅಜೇಯ ಓಟ ಮುಂದುವರಿಸುವ ಛಲದಲ್ಲಿರುವ ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್‌ನ ಪಂದ್ಯದಲ್ಲಿ ಶುಕ್ರವಾರ ಪಂಜಾಬ್ ತಂಡವನ್ನು ಎದುರಿಸಲಿದೆ.
ಕಂಠೀರವ ಕ್ರೀಡಾಂಗಣದಲ್ಲಿ ತನ್ನ ಮೊದಲೆರಡು ಪಂದ್ಯಗಳನ್ನು ಆಡಿದ್ದ ಬಿಎಫ್‌ಸಿ ತಂಡವು ಒಂದನ್ನು ಗೆದ್ದರೆ, ಮತ್ತೊಂದರಲ್ಲಿ ಡ್ರಾ ಸಾಧಿಸಿದೆ. ಜಮ್ಶೆಡ್‌ಪುರ ಎಫ್‌ಸಿ ವಿರುದ್ಧ 1–0ಯಿಂದ ಸೋತಿರುವ ಪಂಜಾಬ್ ತಂಡವು ಹಾಲಿ ಋತುವಿನಲ್ಲಿ ಗೆಲುವಿನ ಖಾತೆ ತೆರೆಯುವ ಛಲದಲ್ಲಿದೆ.
ನಾರ್ತ್‌ಈಸ್ಟ್ ಯುನೈಟೆಡ್ ವಿರುದ್ಧದ ಪಂದ್ಯವು 1-1ರಲ್ಲಿ ಡ್ರಾಗೊಂಡ ಬಳಿಕ ಚೆಟ್ರಿ ಪಡೆಯು ಗೆಲುವಿನ ಹಾದಿಗೆ ಮರಳಲು ಎದುರು ನೋಡುತ್ತಿದೆ. ಇದಕ್ಕೂ ಮೊದಲು ಬಿಎಫ್‌ಸಿ ತಂಡವು 2–0ಯಿಂದ ಸ್ಪೋರ್ಟಿಂಗ್ ಡೆಲ್ಲಿ ವಿರುದ್ಧ ಜಯದೊಂದಿಗೆ ಋತುವಿನ ಅಭಿಯಾನ ಆರಂಭಿಸಿತ್ತು.
ಉಭಯ ತಂಡಗಳು ಅನುಭವಿ ಆಟಗಾರರೊಂದಿಗೆ ಉದಯೋನ್ಮುಖ ಆಟಗಾರರನ್ನು ಹೊಂದಿದೆ. ಬ್ರಾಯನ್ ಸಾಂಚೆಝ್ ಅವರ ಚುರುಕಾದ ದೃಷ್ಟಿ ಮತ್ತು ಸೃಜನಶೀಲತೆಯು ಬಿಎಫ್‌ಸಿ ತಂಡಕ್ಕೆ ಮಿಡ್‌ಫೀಲ್ಡ್‌ನಲ್ಲಿ ಹೆಚ್ಚಿನ ಬಲ ದೊರೆಯಲಿದೆ. ವಿಂಗರ್ ಅಶಿಕ್ ಕುರುಣಿಯಾನ್ ಅವರ ವೇಗವು ಎದುರಾಳಿ ತಂಡದ ರಕ್ಷಣಾ ವ್ಯೂಹವನ್ನು ಬೇಧಿಸಲು ಪ್ರಮುಖ ಅಸ್ತ್ರವಾಗಿದೆ. ಅಂತೆಯೇ ಸಿರೋಜಿದ್ದಿನ್ ಕುಝಿಯೇವ್ ಅವರ ತಾಂತ್ರಿಕ ಕೌಶಲವು ತಂಡದ ಧನಾತ್ಮಕ ಅಂಶಗಳಲ್ಲಿ ಒಂದಾಗಿದೆ.
‘ಎದುರಾಳಿ ತಂಡ ಯಾವುದೇ ಆಗಿರಲಿ, ಮೈದಾನದಲ್ಲಿ ಸಂಪೂರ್ಣ ಹೋರಾಟ ನೀಡುವುದು ಮುಖ್ಯ. ತಂಡದ ಆಟಗಾರರು ಪ್ರತಿ ಪಂದ್ಯವನ್ನು ಕೊನೆಯ ಪಂದ್ಯದಂತೆ ಭಾವಿಸಿ, ರಕ್ಷಣೆ ಮತ್ತು ದಾಳಿಯಲ್ಲಿ ಹೋರಾಟ ನಡೆಸಲಿದ್ದಾರೆ’ ಎಂದು ಬಿಎಫ್‌ಸಿ ತಂಡದ ಮುಖ್ಯ ಕೋಚ್ ರೆನೆಡಿ ಸಿಂಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.