ADVERTISEMENT

ಐಎಸ್‌ಎಲ್‌ ಫುಟ್‌ಬಾಲ್ ಟೂರ್ನಿ: ಎಟಿಕೆಎಂಬಿ ಸವಾಲಿಗೆ ಬಿಎಫ್‌ಸಿ ಸಜ್ಜು

ಕೋಲ್ಕತ್ತ ತಂಡಕ್ಕೆ ಅಗ್ರಸ್ಥಾನಕ್ಕೇರುವ ನಿರೀಕ್ಷೆ

ಪಿಟಿಐ
Published 8 ಫೆಬ್ರುವರಿ 2021, 14:46 IST
Last Updated 8 ಫೆಬ್ರುವರಿ 2021, 14:46 IST
ಸುನಿಲ್ ಚೆಟ್ರಿ ಮತ್ತು ಬಳಗ ಎಟಿಕೆಎಂಬಿ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ –ಐಎಸ್‌ಎಲ್ ಮೀಡಿಯಾ ಚಿತ್ರ
ಸುನಿಲ್ ಚೆಟ್ರಿ ಮತ್ತು ಬಳಗ ಎಟಿಕೆಎಂಬಿ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ –ಐಎಸ್‌ಎಲ್ ಮೀಡಿಯಾ ಚಿತ್ರ   

ಫತೋರ್ಡ, ಗೋವಾ: ನೀರಸ ಆಟಕ್ಕೆ ಬೆಲೆತೆತ್ತು ಸೋಲಿನ ಸುಳಿಯಲ್ಲಿ ಸಿಲುಕಿದ್ದರೂ ಈಚಿನ ಪಂದ್ಯಗಳಲ್ಲಿ ಲಯ ಕಂಡುಕೊಂಡಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಮಂಗಳವಾರ ಎಟಿಕೆ ಮೋಹನ್ ಬಾಗನ್ ವಿರುದ್ಧ ಸೆಣಸಲಿದೆ.

ಸತತ ನಾಲ್ಕು ಸೋಲಿನ ನಂತರ ಚೇತರಿಸಿಕೊಂಡಿದ್ದ ಹಂಗಾಮಿ ಕೋಚ್ ನೌಶಾದ್ ಮೂಸಾ ಬಳಗ ಹಿಂದಿನ ನಾಲ್ಕು ಪಂದ್ಯಗಳಲ್ಲಿ ಸೋಲಿಗೆ ಶರಣಾಗಲಿಲ್ಲ. ಆ ಪೈಕಿ ಕೊನೆಯ ಎರಡು ಪಂದ್ಯಗಳಲ್ಲಿ ಒಂದು ಗೋಲು ಕೂಡ ಬಿಟ್ಟುಕೊಡದೇ ಇರುವುದರಿಂದ ತಂಡದ ಭರವಸೆ ಹೆಚ್ಚಿದೆ; ಎಟಿಕೆ ವಿರುದ್ಧ ಜಯ ಗಳಿಸುವ ನಿರೀಕ್ಷೆ ಮೂಡಿದೆ.

ಹಿಂದಿನ ಪಂದ್ಯದಲ್ಲಿ ಚೆನ್ನೈಯಿನ್‌ ಎಫ್‌ಸಿ ವಿರುದ್ಧ ಬಿಎಫ್‌ಸಿ ಮೋಹಕ ಆಟವಾಡಿತ್ತು. ಗುರುಪ್ರೀತ್ ಸಿಂಗ್ ಸಂಧು ಗೋಲ್‌ಕೀಪಿಂಗ್‌ನಲ್ಲಿ ಮತ್ತೆ ಲಯ ಕಂಡುಕೊಡಿದ್ದರು. ಪಂದ್ಯದಲ್ಲಿ ಒಟ್ಟು ಆರು ಬಾರಿ ಚೆನ್ನೈಯಿನ್ ಆಕ್ರಮಣವನ್ನು ತಡೆದು ಅವರು ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು. ಈ ಮೂಲಕ ಐಎಸ್‌ಎಲ್‌ನಲ್ಲಿ ವೈಯಕ್ತಿಕ ಒಟ್ಟು 29ನೇ ಕ್ಲೀನ್‌ ಶೀಟ್ ದಾಖಲಿಸಿದ್ದರು. ಆದರೆ ಎಟಿಕೆ ಮೋಹನ್ ಬಾಗನ್ ವಿರುದ್ಧ ರಕ್ಷಣಾ ವಿಭಾಗ ಚುರುಕಾಗಿ ಆಡಬೇಕು ಎಂದು ನೌಶಾದ್ ಮೂಸಾ ಸಲಹೆ ನೀಡಿದ್ದಾರೆ. ಎಲ್ಲ ಭಾರವನ್ನು ಗೋಲ್‌ಕೀಪರ್ ಮೇಲೆ ಹಾಕುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಗೋಲು ಬಿಟ್ಟುಕೊಡದೇ ಇರುವುದಕ್ಕೆ ಮಾತ್ರ ಒತ್ತು ನೀಡಿದರೆ ಸಾಲದು. ಚೆಂಡನ್ನು ಗುರಿ ಮುಟ್ಟಿಸುವುದರ ಮೇಲೆಯೂ ಗಮನ ನೀಡಬೇಕು. ಇದು ತಂಡದ ಆಟಗಾರರಿಗೆ ಚೆನ್ನಾಗಿ ಗೊತ್ತಿದೆ. ಸುನಿಲ್ ಚೆಟ್ರಿ ಮತ್ತು ಕ್ಲೀಟನ್ ಸಿಲ್ವಾ ಅವರಂಥ ಆಟಗಾರರು ಇರುವಾಗ ಎಂಥ ತಂಡವನ್ನಾದರೂ ಎದುರಿಸುವುದು ದೊಡ್ಡ ಸವಾಲು ಆಗಲಾರದು’ ಎಂದು ನೌಶಾದ್ ಮೂಸಾ ಹೇಳಿದರು.

ಎಟಿಕೆಎಂಬಿಯ ಕೋಚ್ ಆ್ಯಂಟೊನಿಯೊ ಹಬಾಸ್ ಅವರ ತಂತ್ರಗಳಿಗೆ ಪ್ರತಿತಂತ್ರ ಹೂಡುವಲ್ಲಿ ಬೆಂಗಳೂರು ಎಫ್‌ಸಿ ಈ ಹಿಂದೆ ಅನೇಕ ಬಾರಿ ವಿಫಲವಾಗಿದೆ. ಈ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ ಎಂದು ಅಭಿಪ್ರಾಯಪಟ್ಟಿರುವ ಮೂಸಾ ಆಟಗಾರರ ಮೇಲೆ ಒತ್ತಡ ಹಾಕುವುದಿಲ್ಲ. ನಿರಾಳವಾಗಿ ಆಡಿದರಷ್ಟೇ ಉತ್ತಮ ಫಲಿತಾಂಶ ಗಳಿಸಲು ಸಾಧ್ಯ. ಮನ್ವೀರ್ ಸಿಂಗ್ ಮತ್ತು ರಾಯ್ ಕೃಷ್ಣ ಅವರಂಥ ಪ್ರಬಲ ಸ್ಟ್ರೈಕರ್‌ಗಳು ಇರುವ ಎಟಿಕೆಎಂಬಿ ವಿರುದ್ಧ ಜಾಗರೂಕತೆಯಿಂದ ಆಡಬೇಕಷ್ಟೆ ಎಂದರು.

ಮೋಹನ್ ಬಾಗನ್ ಸದ್ಯ ಪಾಯಿಂಟ್ ಪಟ್ಟಿಯ ಎರಡನೇ ಸ್ಥಾನದಲ್ಲಿ ಭದ್ರವಾಗಿ ನೆಲೆಯೂರಿದೆ. ಮೂರನೇ ಸ್ಥಾನದಲ್ಲಿರುವ ಹೈದರಾಬಾದ್ ಎಫ್‌ಸಿಗೂ ಎಟಿಕೆಎಂಬಿಗೂ ಏಳು ಪಾಯಿಂಟ್‌ಗಳ ವ್ಯತ್ಯಾಸವಿದೆ. ಆರನೇ ಸ್ಥಾನದಲ್ಲಿರುವ ಬಿಎಫ್‌ಸಿಗೂ ಎಟಿಕೆಎಂಬಿಗೂ 11 ಪಾಯಿಂಟ್‌ಗಳ ವ್ಯತ್ಯಾಸವಿದೆ. ಬಿಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಿದರೆ ಎಟಿಕೆಎಂಬಿ ತಂಡ ಮುಂಬೈ ಸಿಟಿ ಎಫ್‌ಸಿಯನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಲಿದೆ.

‘ಪ್ಲೇ ಆಫ್‌ ಹಂತದಲ್ಲಿ ಉಳಿಯುವುದು ನಮ್ಮ ಮೊದಲ ಗುರಿ. ಪಾಯಿಂಟ್‌ ಪಟ್ಟಿಯ ಅಗ್ರ ಸ್ಥಾನದಲ್ಲಿ ಕಾಣಿಸಿಕೊಳ್ಳುವ ಹಂಬಲವೂ ಇದೆ. ದಿನದಿಂದ ದಿನಕ್ಕೆ ಮತ್ತು ಪಂದ್ಯದಿಂದ ಪಂದ್ಯಕ್ಕೆ ಸಾಮರ್ಥ್ಯವನ್ನು ಉತ್ತಮಪಡಿಸಿಕೊಳ್ಳಲು ತಂಡದ ಆಟಗಾರರು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಫಲ ಸಿಗಲಿದೆ’ ಎಂದು ಹಬಾಸ್ ಹೇಳಿದರು.

ಹಿಂದಿನ ಪಂದ್ಯದಲ್ಲಿ ಒಡಿಶಾ ಎಫ್‌ಸಿಯನ್ನು 4–1ರಲ್ಲಿ ಮಣಿಸಿದ ಖುಷಿಯಲ್ಲಿರುವ ಎಟಿಕೆಎಂಬಿ ತಂಡ ಮನ್ವೀರ್ ಸಿಂಗ್‌, ಪ್ರಣಯ್ ಹಲ್ದರ್ ಮುಂತಾದವರ ಮೇಲೆ ಭರವಸೆ ಇರಿಸಿಕೊಂಡಿದೆ. ಅಮಾನತು ಶಿಕ್ಷೆ ಮುಗಿಸಿ ಕಾರ್ಲ್‌ ಮೆಕ್‌ಹ್ಯೂಗ್‌ ಮರಳಿರುವುದು ತಂಡದಲ್ಲಿ ಹುಮ್ಮಸ್ಸು ಮೂಡಿಸಿದೆ.

‘ಸಾಗಬೇಕಾದ ಹಾದಿ ಸುದೀರ್ಘವಾಗಿದೆ. ಸದ್ಯ ಎಟಿಕೆಎಂಬಿ ವಿರುದ್ಧದ ಪಂದ್ಯದ ಮೇಲೆ ಗಮನ ಇರಿಸಲಾಗಿದೆ. ತಂಡದ ಪ್ರಮುಖ ಆಟಗಾರರೆಲ್ಲರೂ ಉತ್ತಮ ಸಾಮರ್ಥ್ಯ ತೋರುವ ನಿರೀಕ್ಷೆಯಲ್ಲಿದ್ದಾರೆ’ ಎಂದು ನೌಶಾದ್ ಮೂಸಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.