ADVERTISEMENT

ಬಿಎಫ್‌ಸಿಗೆ ಫೈನಲ್‌ ಕನಸು: ಚೆಟ್ರಿ ಮೇಲೆ ನಿರೀಕ್ಷೆಯ ಭಾರ

ಇಂಡಿಯನ್‌ ಸೂಪರ್‌ ಲೀಗ್‌: ಇಂದು ಎಟಿಕೆ ವಿರುದ್ಧ ಸೆಮಿ ‘ಫೈಟ್‌’:

ಜಿ.ಶಿವಕುಮಾರ
Published 29 ಫೆಬ್ರುವರಿ 2020, 18:30 IST
Last Updated 29 ಫೆಬ್ರುವರಿ 2020, 18:30 IST
ಬಿಎಫ್‌ಸಿ ತಂಡ ಸುನಿಲ್‌ ಚೆಟ್ರಿ ಮೇಲೆ ಹೆಚ್ಚು ಅವಲಂಬಿತವಾಗಿದೆ
ಬಿಎಫ್‌ಸಿ ತಂಡ ಸುನಿಲ್‌ ಚೆಟ್ರಿ ಮೇಲೆ ಹೆಚ್ಚು ಅವಲಂಬಿತವಾಗಿದೆ   
""

ಬೆಂಗಳೂರು: ಏಳು ಬೀಳಿನ ಹಾದಿಯಲ್ಲಿ ಸಾಗಿ ಪ್ರಯಾಸದಿಂದಲೇ ‘ಪ್ಲೇ ಆಫ್‌’ ಪ್ರವೇಶಿಸಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡಕ್ಕೆ ಈಗ ಅಗ್ನಿಪರೀಕ್ಷೆ ಎದುರಾಗಿದೆ.

ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಆರನೇ ಆವೃತ್ತಿಯಲ್ಲಿ ಫೈನಲ್‌ ಪ್ರವೇಶಿಸುವ ಹಂಬಲದಲ್ಲಿರುವ ಬೆಂಗಳೂರಿನ ತಂಡ ಈ ಕನಸು ಸಾಕಾರಗೊಳಿಸಿಕೊಳ್ಳಲು ಇನ್ನೆರಡು ಮೆಟ್ಟಿಲುಗಳನ್ನು ಏರಬೇಕಿದೆ.

ಎಟಿಕೆ ಎಫ್‌ಸಿ ವಿರುದ್ಧದ ಸೆಮಿಫೈನಲ್‌ನ ಮೊದಲ ಲೆಗ್‌ನ ಹಣಾಹಣಿಗೆ ಕಂಠೀರವ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ಧಗೊಂಡಿದ್ದು, ಭಾನುವಾರ ನಡೆಯುವ ಈ ಪೈಪೋಟಿಯಲ್ಲಿ ಸುನಿಲ್‌ ಚೆಟ್ರಿ ಪಡೆ ದೊಡ್ಡ ಅಂತರದಿಂದ ಗೆಲ್ಲಬೇಕು. ಹಾಗಾದಲ್ಲಿ ಇದೇ ತಿಂಗಳ 8ರಂದು ಕೋಲ್ಕತ್ತದ ಸಾಲ್ಟ್‌ಲೇಕ್‌ ಮೈದಾನದಲ್ಲಿ ನಡೆಯುವ ಎರಡನೇ ಲೆಗ್‌ನ ಹೋರಾಟದಲ್ಲಿ ಒತ್ತಡ ರಹಿತವಾಗಿ ಕಣಕ್ಕಿಳಿಯಬಹುದು.

ADVERTISEMENT

ಹಾಲಿ ಚಾಂಪಿಯನ್‌ ಬಿಎಫ್‌ಸಿ ತಂಡ ಈ ಬಾರಿ ಹಿಂದಿನಷ್ಟು ಪರಿಣಾಮಕಾರಿಯಾಗಿ ಆಡಲು ವಿಫಲವಾಗಿದೆ. 18 ಪಂದ್ಯಗಳಿಂದ ಕೇವಲ 22 ಗೋಲುಗಳನ್ನಷ್ಟೇ ದಾಖಲಿಸಿರುವುದು ಇದಕ್ಕೆ ಸಾಕ್ಷಿ.

ತಂಡದಲ್ಲಿ ಪ್ರತಿಭಾನ್ವಿತ ಆಟಗಾರರ ಕೊರತೆ ಇಲ್ಲ. ಅವರಲ್ಲಿ ಹಲವರು ಪದೇ ಪದೇ ಗೋಲು ಗಳಿಸಲು ವಿಫಲರಾಗುತ್ತಿರುವುದು ಬೆಂಗಳೂರಿನ ತಂಡದ ಚಿಂತೆಗೆ ಕಾರಣವಾಗಿದೆ.

ನಾಯಕ ಚೆಟ್ರಿ ಮೇಲೆ ತಂಡವು ಹೆಚ್ಚು ಅವಲಂಬಿತವಾಗಿದೆ. ಚೆಟ್ರಿಕಾಲ್ಚಳಕದಿಂದ ಗೋಲು ಅರಳದಿದ್ದರೆ ತಂಡ ಸೋಲಿನ ಸುಳಿಯಲ್ಲಿ ಸಿಲುಕುವಂತಹ ಪರಿಸ್ಥಿತಿ ಇದೆ. ಹಿಂದಿನ ಹಲವು ಹಣಾಹಣಿಗಳಲ್ಲಿ ಏಕಾಂಗಿಯಾಗಿಯೇ ತಂಡಕ್ಕೆ ಗೆಲುವು ತಂದುಕೊಟ್ಟಿದ್ದ ಚೆಟ್ರಿ, ಭಾನುವಾರವೂ ಚಮತ್ಕಾರ ಮಾಡಬೇಕಿದೆ.

ಗಾಯದ ಕಾರಣ ಮೂರು ವಾರ ಮೈದಾನದಿಂದ ದೂರ ಉಳಿದಿದ್ದ ಚೆಟ್ರಿ, ಮೂರು ದಿನಗಳ ಹಿಂದೆ ಕಂಠೀರವದಲ್ಲೇ ನಡೆದಿದ್ದ ಮಝಿಯಾ ವಿರುದ್ಧದ ಎಎಫ್‌ಸಿ ಕಪ್‌ ಅರ್ಹತಾ ಪಂದ್ಯದಲ್ಲಿ ಮೋಡಿ ಮಾಡಿದ್ದರು.

ಜಮೈಕಾದ ದೇಶಾನ್‌ ಬ್ರೌನ್‌, ರೊಮೇರಿಯೊ ಫ್ರಾಟರ್ ಮತ್ತು ಎರಿಕ್ ಪಾರ್ಟಲು ಅವರಿಂದ ಚೆಟ್ರಿಗೆ ಅಗತ್ಯ ಬೆಂಬಲ ಸಿಗಬೇಕಿದೆ.

ರಕ್ಷಣಾ ವಿಭಾಗದಲ್ಲಿ ಆತಿಥೇಯರು ಬಲಿಷ್ಠವಾಗಿದ್ದಾರೆ. ಗುರುಪ್ರೀತ್‌ ಸಿಂಗ್‌ ಸಂಧು ‘ಗೋಡೆ’ ಯಂತೆ ನಿಂತು ಎದುರಾಳಿಗಳ ಪ್ರಯತ್ನಗಳನ್ನು ವಿಫಲಗೊಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಜುನಾನ್‌ ಗೊಂಜಾಲೆಸ್, ರಾಹುಲ್‌ ಭೆಕೆ ಮತ್ತು ಅಲ್ಬರ್ಟ್‌ ಸೆರಾನ್‌ ಅವರೂ ಎದುರಾಳಿಗಳು ರಕ್ಷಣಾ ಕೋಟೆಯ ಸನಿಹ ಸುಳಿಯದಂತೆ ಎಚ್ಚರ ವಹಿಸುತ್ತಿದ್ದಾರೆ. ಇದು ತಂಡಕ್ಕೆ ವರವಾಗಿ ಪರಿಣಮಿಸಿದೆ.

ಜಯದತ್ತ ಎಟಿಕೆ ಚಿತ್ತ: ಈ ಬಾರಿಯ ಲೀಗ್‌ನ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನದೊಂದಿಗೆ ‘ಪ್ಲೇ ಆಫ್‌’ ಪ್ರವೇಶಿಸಿರುವ ಕೋಲ್ಕತ್ತದ ತಂಡವು ಚೆಟ್ರಿ ಪಡೆಯ ಜಯದ ಕನಸಿಗೆ ತಣ್ಣೀರುವ ಸುರಿಯುವ ತವಕದಲ್ಲಿದೆ. ಈ ತಂಡದ ರಕ್ಷಣಾ ವಿಭಾಗವೂ ಬಲಿಷ್ಠವಾಗಿದೆ.

ಮುಂಚೂಣಿ ವಿಭಾಗದಲ್ಲೂ ಈ ತಂಡ ಶಕ್ತಿಯುತವಾಗಿದೆ. ರಾಯ್‌ ಕೃಷ್ಣ, ಎಡ್ವರ್ಡ್‌ ಗಾರ್ಸಿಯಾ ಮಾರ್ಟಿನ್‌, ಡೇವಿಡ್‌ ವಿಲಿಯಮ್ಸ್‌ ಮತ್ತು ಮೈಕಲ್‌ ಸೂಸೈರಾಜ್‌ ಅವರು ಆತಿಥೇಯರ ರಕ್ಷಣಾ ಕೋಟೆಗೆ ಸವಾಲಾಗಬಲ್ಲರು. ಇವರನ್ನು ಕಟ್ಟಿಹಾಕಲು ಬೆಂಗಳೂರಿನ ತಂಡವು ವಿಶೇಷ ರಣತಂತ್ರ ಹೆಣೆದು ಕಣಕ್ಕಿಳಿಯಬೇಕು. ಹಾಗಾದಾಗ ಮಾತ್ರ ಗೆಲುವಿನ ಹಾದಿ ಸುಗಮವಾಗಬಹುದು.

**

ಎಎಫ್‌ಸಿ ಕಪ್‌ ಅರ್ಹತಾ ಪಂದ್ಯದ ಸೋಲಿನಿಂದ ತುಂಬಾ ನಿರಾಸೆಯಾಗಿದೆ. ಹಾಗಂತ ನಮ್ಮ ಆಟಗಾರರು ಎದೆಗುಂದಿಲ್ಲ. ಎಟಿಕೆ ವಿರುದ್ಧ ಪೂರ್ಣ ಸಾಮರ್ಥ್ಯದೊಂದಿಗೆ ಆಡಲು ಸಜ್ಜಾಗಿದ್ದಾರೆ.
ಕಾರ್ಲಸ್‌ ಕ್ವದ್ರತ್‌, ಬಿಎಫ್‌ಸಿ ಕೋಚ್‌

**

ಎರಡು ಬಲಿಷ್ಠ ತಂಡಗಳು ಮುಖಾಮುಖಿಯಾಗುತ್ತಿರುವ ಕಾರಣ ಭಾನುವಾರ ಜಿದ್ದಾಜಿದ್ದಿನ ಹೋರಾಟ ಏರ್ಪಡುವುದು ಖಚಿತ. ಬಿಎಫ್‌ಸಿ ತಂಡವನ್ನು ಮಣಿಸುವುದು ನಮ್ಮ ಗುರಿ.
–ಆ್ಯಂಟೋನಿಯೊ ಹಬಾಸ್‌, ಎಟಿಕೆ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.