ADVERTISEMENT

ಬಿಎಫ್‌ಸಿಗೆ ಮತ್ತೆ ‘ಇಂಜುರಿ’

ಐಎಸ್‌ಎಲ್‌ ಟೂರ್ನಿ: ಕೊನೆಯ ನಿಮಿಷಗಳಲ್ಲಿ ಗೋಲು ಕೊಟ್ಟ ಚೆಟ್ರಿ ಪಡೆ

ಪಿಟಿಐ
Published 28 ಜನವರಿ 2021, 18:15 IST
Last Updated 28 ಜನವರಿ 2021, 18:15 IST
ಬಿಎಫ್‌ಸಿ ಪರ ಗೋಲು ಗಳಿಸಿದ ಸುನಿಲ್ ಚೆಟ್ರಿ ಸಂಭ್ರಮ. ಎರಡನೇ ಗೋಲು ಗಳಿಸಿದ ಲಿಯೋನ್ ಆಗಸ್ಟಿನ್‌ ಇದ್ದಾರೆ –ಐಎಸ್‌ಎಲ್ ಮೀಡಿಯಾ ಚಿತ್ರ
ಬಿಎಫ್‌ಸಿ ಪರ ಗೋಲು ಗಳಿಸಿದ ಸುನಿಲ್ ಚೆಟ್ರಿ ಸಂಭ್ರಮ. ಎರಡನೇ ಗೋಲು ಗಳಿಸಿದ ಲಿಯೋನ್ ಆಗಸ್ಟಿನ್‌ ಇದ್ದಾರೆ –ಐಎಸ್‌ಎಲ್ ಮೀಡಿಯಾ ಚಿತ್ರ   

ವಾಸ್ಕೊ: ಇಂಜುರಿ ಅವಧಿ ಸೇರಿದಂತೆ ಕೊನೆಯ ನಾಲ್ಕು ನಿಮಿಷಗಳಲ್ಲಿ ಎರಡು ಗೋಲುಗಳನ್ನು ಬಿಟ್ಟುಕೊಟ್ಟ ಬೆಂಗಳೂರು ಫುಟ್‌ಬಾಲ್‌ ಕ್ಲಬ್ (ಬಿಎಫ್‌ಸಿ) ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಮತ್ತೊಮ್ಮೆ ನಿರಾಸೆಗೆ ಒಳಗಾಯಿತು. ಒಂಬತ್ತು ಮತ್ತು 61ನೇ ನಿಮಿಷಗಳಲ್ಲಿ ಗೋಲು ಗಳಿಸಿ ಮುನ್ನಡೆ ಕಾಯ್ದುಕೊಂಡು ಗೆಲುವಿನತ್ತ ಹೆಜ್ಜೆ ಹಾಕಿದ್ದ ಬಿಎಫ್‌ಸಿ ಕೊನೆಗೆ 2–2 ಗೋಲುಗಳ ಡ್ರಾಗೆ ಸಮಾಧಾನಪಟ್ಟುಕೊಳ್ಳಬೇಕಾಯಿತು.

ತಿಲಕ್ ಮೈದಾನದಲ್ಲಿ ಗುರುವಾರ ರಾತ್ರಿ ನಡೆದ ಹೈದರಾಬಾದ್ ಎಫ್‌ಸಿ ಎದುರಿನ ಪಂದ್ಯದಲ್ಲಿ ನಾಯಕ ಸುನಿಲ್ ಚೆಟ್ರಿ ಒಂಬತ್ತನೇ ನಿಮಿಷದಲ್ಲಿ ಬಿಎಫ್‌ಸಿಗೆ ಮುನ್ನಡೆ ತಂದುಕೊಟ್ಟರು. 61ನೇ ನಿಮಿಷದಲ್ಲಿ ಲಿಯಾನ್ ಆಗಸ್ಟಿನ್ ಗಳಿಸಿದ ಗೋಲಿನ ಮೂಲಕ ತಂಡ ಮುನ್ನಡೆ ಹೆಚ್ಚಿಸಿಕೊಂಡಿತು.

ಆದರೆ ಅರಿದಾನೆ ಸಂಟಾನಾ (86ನೇ ನಿಮಿಷ) ಮತ್ತು ಫ್ರಾನ್ ಸಾಂಡಾಸ (90ನೇ ನಿ) ಗಳಿಸಿದ ಗೋಲುಗಳು ಹೈದರಾಬಾದ್‌ ಪಾಳಯದಲ್ಲಿ ಸಂಭ್ರಮದ ಅಲೆ ಉಕ್ಕಿಸಿದವು.

ADVERTISEMENT

ಬೆಂಗಾಲ್‌ಗೆ ಗೋವಾ ಸವಾಲು

ಫತೋರ್ಡದಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ಮತ್ತು ಆತಿಥೇಯ ಗೋವಾ ತಂಡಗಳು ಸೆಣಸಲಿವೆ. ಸತತ ಆರು ಪಂದ್ಯಗಳಲ್ಲಿ ಸೋಲರಿಯದ ಗೋವಾ ಜಯ ಗಳಿಸಿ ಪಾಯಿಂಟ್ ಪಟ್ಟಿಯ ಅಗ್ರ ನಾಲ್ಕರಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಪ್ರಯತ್ನಿಸಲಿದೆ. ಪ್ರಮುಖ ಡಿಫೆಂಡರ್‌ಗಳಾದ ಇವಾನ್ ಗೊನ್ಸಾಲ್ವಸ್‌ ಹಾಗೂ ಜೇಮ್ಸ್ ದೊನಾಚೆ ಈ ಪಂದ್ಯದಲ್ಲಿ ಕಣಕ್ಕೆ ಇಳಿಯುತ್ತಿಲ್ಲ. ಕೇರಳ ಬ್ಲಾಸ್ಟರ್ಸ್ ಎದುರಿನ ಪಂದ್ಯದಲ್ಲಿ ಗೊನ್ಸಾಲ್ವಸ್ ಅಮಾನತುಗೊಂಡಿದ್ದರೆ ದೊನಾಚೆ ಗಾಯಗೊಂಡಿದ್ದಾರೆ. ಶುಕ್ರವಾರದ ಪಂದ್ಯದ ವೇಳೆ ಕೋಚ್ ಜುವಾನ್ ಫೆರಾಂಡೊ ಕೂಡ ತಂಡ ದೊಂದಿಗೆ ಇರುವುದಿಲ್ಲ.

ನಿಯಮ ಉಲ್ಲಂಘಿಸಿದ ಕಾರಣ ಅವರು ಕೂಡ ಒಂದು ಪಂದ್ಯದಿಂದ ಅಮಾನತುಗೊಂಡಿದ್ದಾರೆ. ಈ ಎಲ್ಲ ಕಾರಣಗಳಿಂದ ಗೋವಾ ಕೊಂಚ ಒತ್ತಡದಲ್ಲೇ ಆಡಲಿದೆ.

ಮೊದಲ ಲೆಗ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾದಾಗ ಕೇವಲ 10 ಮಂದಿ ಆಟಗಾರರನ್ನೊಳಗೊಂಡಿದ್ದ ಈಸ್ಟ್ ಬೆಂಗಾಲ್ ತಂಡ 1-1ರಲ್ಲಿ ಡ್ರಾ ಮಾಡಿಕೊಂಡಿತ್ತು. ಬ್ರೈಟ್ ಎನೊಬಾಖರೆ ಅವರ ಅಮೋಘ ಆಟದಿಂದಾಗಿ ಈಸ್ಟ್ ಬೆಂಗಾಲ್ ನಿಟ್ಟುಸಿರು ಬಿಟ್ಟಿತ್ತು. ನೈಜಿರಿಯಾದ ಈ ಆಟಗಾರ ಮತ್ತೊಮ್ಮೆ ಮಿಂಚುವ ಭರವಸೆಯಲ್ಲಿದ್ದಾರೆ. ಈಸ್ಟ್ ಬೆಂಗಾಲ್ ಕೂಡ ಈಚೆಗೆ ಉತ್ತಮ ಸಾಮರ್ಥ್ಯ ತೋರುತ್ತಿದೆ. ಹೈದರಾಬಾದ್ ಎಫ್‌ಸಿಯಿಂದ ಬಂದಿರುವ ಆದಿಲ್ ಖಾನ್ ಅವರು ಗೋವಾ ವಿರುದ್ಧದ ಪಂದ್ಯದಲ್ಲಿ ಬೆಂಗಾಲ್ ಪರ ಪದಾರ್ಪಣೆ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.