
ನವದೆಹಲಿ: ಇದೇ 14ರಂದು ಪ್ರಾರಂಭವಾಗುವ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಋತುವಿಗೆ ದಿಗ್ಗಜ ಸುನಿಲ್ ಚೆಟ್ರಿ ಸೇರಿದಂತೆ ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡದ ಆಟಗಾರರು ವೇತನ ಕಡಿತಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಕ್ಲಬ್ ಮಾಲೀಕ ಪಾರ್ಥ್ ಜಿಂದಾಲ್ ಹೇಳಿದ್ದಾರೆ.
ಫ್ರ್ಯಾಂಚೈಸಿ ಮತ್ತು ಕ್ರೀಡೆಯ ಹಿತದೃಷ್ಟಿಯಿಂದ ಈ ತ್ಯಾಗ ಮಾಡಿದ್ದಕ್ಕಾಗಿ ತಂಡದ ಆಟಗಾರರನ್ನು ಜಿಂದಾಲ್ ಶ್ಲಾಘಿಸಿದ್ದಾರೆ. ಆಡಳಿತ ಮಂಡಳಿಯು ತಂಡದ ಆಟಗಾರರೊಂದಿಗೆ ಮುಕ್ತ, ಪ್ರಾಮಾಣಿಕ ಸಂಭಾಷಣೆ ನಡೆಸಿದೆ ಎಂದು ಅವರು ತಿಳಿಸಿದ್ದಾರೆ.
‘ಭಾರತ ಫುಟ್‌ಬಾಲ್ ಎದುರಿಸುತ್ತಿರುವ ಸವಾಲಿನ ಬಗ್ಗೆ ಎಲ್ಲರಿಗೂ ಚೆನ್ನಾಗಿ ತಿಳಿದಿದೆ. ಬಿಎಫ್‌ಸಿ ತಂಡದ ಮಾಲೀಕನಾಗಿ ಮತ್ತು ಕ್ರೀಡೆಯ ಬಗ್ಗೆ ತೀವ್ರ ಒಲವು ಹೊಂದಿರುವ ನನಗೆ ಇದು ಅತ್ಯಂತ ಕಠಿಣ ಅವಧಿಗಳಲ್ಲಿ ಒಂದಾಗಿದೆ. ಈ ಹಂತದಲ್ಲಿ ತಮ್ಮ ಸಂಭಾವನೆಯನ್ನು ಕಡಿತ ಮಾಡಲು ಒಪ್ಪಿಕೊಂಡಿರುವ ತಂಡದ ಮೊದಲ ಆಯ್ಕೆಯ ಆಟಗಾರರಿಗೆ ನಾನು ಕೃತಜ್ಞನಾಗಿದ್ದೇನೆ’ ಎಂದು ಜಿಂದಾಲ್ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.
ನಾಲ್ಕು ತಿಂಗಳಿಗಿಂತ ಹೆಚ್ಚು ಕಾಲ ಸ್ಥಗಿತಗೊಂಡಿದ್ದ ಐಎಸ್‌ಎಲ್ ಇದೇ 14ರಂದು ಆರಂಭವಾಗಲಿದೆ. ಲೀಗ್‌ನ ಹಣಕಾಸಿನ ವೆಚ್ಚದ ಶೇ 60ರಷ್ಟು ಕ್ಲಬ್‌ಗಳು (ಪ್ರತಿ ಕ್ಲಬ್‌ಗೆ ಸುಮಾರು ₹ 1 ಕೋಟಿ) ಹಂಚಿಕೊಳ್ಳಬೇಕಾಗುತ್ತದೆ. ಮುಂಬರುವ ಋತುವಿನ ಒಟ್ಟು ವೆಚ್ಚವನ್ನು ಎಐಎಫ್‌ಎಫ್ ₹ 25 ಕೋಟಿ ಎಂದು ನಿಗದಿಪಡಿಸಿದೆ. ಪಂದ್ಯಗಳ ವೇಳಾಪಟ್ಟಿ ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.