ADVERTISEMENT

ಫುಟ್‌ಬಾಲ್‌ ದಿಗ್ಗಜ ಪೆಲೆ ಅಂತಿಮ ದರ್ಶನ; ಭಾವುಕ ಕ್ಷಣ

ಫುಟ್‌ಬಾಲ್‌ ದಿಗ್ಗಜ ಪೆಲೆ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 16:01 IST
Last Updated 2 ಜನವರಿ 2023, 16:01 IST
ಪೆಲೆ ಅವರ ಪತ್ನಿ ಮಾರ್ಸಿಯಾ ಅವೊಕಿ (ಬಲ) ಅಂತಿಮ ದರ್ಶನ ಪಡೆದರು –ಎಎಫ್‌ಪಿ ಚಿತ್ರ
ಪೆಲೆ ಅವರ ಪತ್ನಿ ಮಾರ್ಸಿಯಾ ಅವೊಕಿ (ಬಲ) ಅಂತಿಮ ದರ್ಶನ ಪಡೆದರು –ಎಎಫ್‌ಪಿ ಚಿತ್ರ   

ಸ್ಯಾಂಟೊಸ್‌: ಅದ್ಭುತ ಕಾಲ್ಚಳಕದ ಮೂಲಕ ಫುಟ್‌ಬಾಲ್‌ ಕ್ರೀಡೆಯ ಸೌಂದರ್ಯ ಹೆಚ್ಚಿಸಿದ್ದ ದಿಗ್ಗಜ ಆಟಗಾರ ಪೆಲೆ ಅವರ ಮೃತದೇಹದ ಅಂತಿಮ ದರ್ಶನಕ್ಕೆ ಸಾವಿರಾರು ಮಂದಿ ಇಲ್ಲಿನ ವಿಲಾ ಬೆಲ್ಮಿರೊ ಕ್ರೀಡಾಂಗಣಕ್ಕೆ ಹರಿದುಬಂದರು.

ಪೆಲೆ ಎಂದೇ ಜನಪ್ರಿಯರಾಗಿರುವ ಎಡ್ಸನ್ ಅರಾಂಟೆಸ್ ಡು ನಸಿಮೆಂಟೊ ಗುರುವಾರ ನಿಧನರಾಗಿದ್ದರು. ಅಂತ್ಯಕ್ರಿಯೆ ಮಂಗಳವಾರ ನಡೆಯಲಿದ್ದು, ಅಂತಿಮ ದರ್ಶನಕ್ಕೆ ಸೋಮವಾರ ವ್ಯವಸ್ಥೆ ಕಲ್ಪಿಸಲಾಗಿತ್ತು.

ತಮ್ಮ ನೆಚ್ಚಿನ ತಾರೆಯನ್ನು ಕೊನೆಯ ಬಾರಿ ನೋಡಲು ಜನರು ಬೆಳಿಗ್ಗೆಯಿಂದಲೇ ಕ್ರೀಡಾಂಗಣದ ಬಳಿಕ ಸಾಲುಗಟ್ಟಿ ನಿಂತಿದ್ದರು. ಮೃತದೇಹದ ಬಳಿ ಬರುತ್ತಿದ್ದಂತೆಯೇ ಹಲವರು ಭಾವುಕರಾದರು.

ADVERTISEMENT

ಫಿಫಾ ಅಧ್ಯಕ್ಷ ಗಿಯಾನಿ ಇನ್‌ಫ್ಯಾಂಟಿನೊ, ದಕ್ಷಿಣ ಅಮೆರಿಕ ಫುಟ್‌ಬಾಲ್‌ ಫೆಡರೇಷನ್ ಅಧ್ಯಕ್ಷ ಅಲೆಕ್ಸಾಂಡ್ರೊ ಡಾಮಿನಿಗ್ವೆಜ್‌ ಮತ್ತು ಬ್ರೆಜಿಲ್ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಗಿಲ್ಮರ್‌ ಮೆಂಡೆಸ್‌ ಅವರು ಬೆಳಿಗ್ಗೆಯೇ ಅಂತಿಮ ದರ್ಶನ ಪಡೆದರು.

ಪೆಲೆ ತಮ್ಮ ಜೀವನದ ಬಹುಪಾಲು ಅವಧಿಯನ್ನು ಸಾವೊ ಪೌಲೊದಿಂದ 75 ಕಿ.ಮೀ. ದೂರದಲ್ಲಿರುವ ಸ್ಯಾಂಟೊಸ್‌ ನಗರದಲ್ಲಿ ಕಳೆದಿದ್ದರು.

ಕ್ರೀಡಾಂಗಣದಲ್ಲಿ ಮೂರು ಬೃಹತ್‌ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಒಂದರಲ್ಲಿ ಪೆಲೆ 10ನೇ ನಂಬರ್‌ ಜರ್ಸಿ ತೊಟ್ಟಿರುವ ಚಿತ್ರ ಇದೆ. ಇನ್ನುಳಿದ ಎರಡು ಬ್ಯಾನರ್‌ಗಳಲ್ಲಿ ‘ಲಾಂಗ್‌ ಲಿವ್‌ ದಿ ಕಿಂಗ್‌‘, ‘ಪೆಲೆ 82 ವರ್ಷ’ ಎಂದು ಬರೆಯಲಾಗಿದೆ.

ಮಂಗಳವಾರ ಬೆಳಿಗ್ಗೆ 10ರ ವರೆಗೆ ಅಂತಿಮ ದರ್ಶನ ನಡೆಯಲಿದೆ. ಆ ಬಳಿಕ ಮೃತದೇಹವನ್ನು ಕ್ರೀಡಾಂಗಣದ ಸಮೀಪದಲ್ಲೇ ಇರುವ ಸ್ಯಾಂಟೊಸ್‌ ಸ್ಮಾರಕ ಸ್ಮಶಾನಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುವುದು.

ಮೆರವಣಿಗೆಯು ಪೆಲೆ ಅವರ ತಾಯಿ, ಶತಾಯುಷಿ ಸೆಲೆಸ್ಟಿ ಅರಾಂಟೆಸ್ ವಾಸಿಸುತ್ತಿರುವ ಮನೆಯ ಮುಂದೆಯೇ ಸಾಗಲಿದೆ. ಸ್ಮರಣಶಕ್ತಿ ಕುಂದಿರುವ ಸೆಲೆಸ್ಟಿ ಅವರಿಗೆ ಪೆಲೆ ಸಾವಿನ ಕುರಿತು ಯಾವುದೇ ಮಾಹಿತಿ ಕೊಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.