ADVERTISEMENT

FIFA World Cup | ಸರ್ಬಿಯಾ ಎದುರು ಕ್ಯಾಮರೂನ್ ದಿಟ್ಟ ಆಟ: ಪಂದ್ಯ 3–3ರಲ್ಲಿ ಡ್ರಾ

ಏಜೆನ್ಸೀಸ್
Published 29 ನವೆಂಬರ್ 2022, 3:24 IST
Last Updated 29 ನವೆಂಬರ್ 2022, 3:24 IST
ಕ್ಯಾಮರೂನ್ ತಂಡದ ವಿನ್ಸೆಂಟ್‌ ಅಬೂಬಕ್ಕರ್‌ (ಎಡ) ಸಹ ಆಟಗಾರರೊಂದಿಗೆ ಸಂಭ್ರಮಿಸಿದರು– ಎಎಫ್‌ಪಿ ಚಿತ್ರ
ಕ್ಯಾಮರೂನ್ ತಂಡದ ವಿನ್ಸೆಂಟ್‌ ಅಬೂಬಕ್ಕರ್‌ (ಎಡ) ಸಹ ಆಟಗಾರರೊಂದಿಗೆ ಸಂಭ್ರಮಿಸಿದರು– ಎಎಫ್‌ಪಿ ಚಿತ್ರ   

ದೋಹಾ: ಎರಡು ಗೋಲುಗಳ ಹಿನ್ನಡೆಯಿಂದ ಪುಟಿದೆದ್ದು ದಿಟ್ಟ ಆಡವಾಡಿದ ಕ್ಯಾಮರೂನ್ ತಂಡವು ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ಸರ್ಬಿಯಾ ತಂಡದೊಂದಿಗೆ ಡ್ರಾ ಸಾಧಿಸಿತು.

ಸೋಮವಾರ ಅಲ್‌ ಜನಾಬ್‌ ಕ್ರೀಡಾಂಗಣದಲ್ಲಿ ನಡೆದ ‘ಜಿ‘ ಗುಂಪಿನ ಹಣಾಹಣಿಯಲ್ಲಿ ಕ್ಯಾಮರೂನ್‌ 3–3ರಿಂದ ಸಮಬಲ ಸಾಧಿಸಿತು. ಇದರೊಂದಿಗೆ 16ರ ಘಟ್ಟ ತಲುಪುವ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.

ಜಿದ್ದಾಜಿದ್ದಿನ ಪಂದ್ಯದ ದ್ವಿತೀಯಾರ್ಧದಲ್ಲಿ ಸ್ಟ್ರಾಹಿಂಜಾ ಪಾವ್ಲೊವಿಚ್‌, ಸೆರ್ಗೆಜ್‌ ಮಿಲಿಂಕೊವಿಚ್‌–ಸ್ಯಾವಿಚ್‌ ಮತ್ತು ಅಲೆಕ್ಸಾಂಡರ್‌ ಮಿಟ್ರೊವಿಚ್‌ ಗಳಿಸಿದ ಗೋಲುಗಳ ಬಲದಿಂದ ಸರ್ಬಿಯಾ 3–1ರಿಂದ ಮುನ್ನಡೆ ಪಡೆದು ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ವಿನ್ಸೆಂಟ್‌ ಅಬೂಬಕರ್‌ ಮತ್ತು ಎರಿಕ್‌ ಮ್ಯಾಕ್ಸಿಮ್‌ ಚೊಪೊ ಮೊಟಿಂಗ್‌ ಬೆನ್ನುಬೆನ್ನಿಗೆ ತೋರಿದ ಕಾಲ್ಚಳಕದಿಂದಾಗಿ ಪಂದ್ಯದ ಚಿತ್ರಣ ಬದಲಾಯಿತು. ಹಣಾಹಣಿ ಡ್ರಾನತ್ತ ಹೊರಳಿತು.

ADVERTISEMENT

ಇದಕ್ಕೂ ಮೊದಲು ಪಂದ್ಯದ 29ನೇ ನಿಮಿಷದಲ್ಲೇ ಗೋಲು ಗಳಿಸಿದ್ದ ಜೀನ್ ಚಾರ್ಲ್ಸ್‌ ಕ್ಯಾಸ್ಟೆಲ್ಲೆಟೊ ಕ್ಯಾಮರೂನ್ ತಂಡಕ್ಕೆ ಮುನ್ನಡೆ ತಂದುಕೊಟ್ಟಿದ್ದರು. ಆದರೆ ಸರ್ಬಿಯಾ ತಿರುಗೇಟು ನೀಡಿತ್ತು.

ಈ ಫಲಿತಾಂಶದೊಂದಿಗೆ ಕ್ಯಾಮರೂನ್ ಮತ್ತು ಸರ್ಬಿಯಾ ತಲಾ ಒಂದು ಪಾಯಿಂಟ್‌ ಗಳಿಸಿದ್ದು ‘ಜಿ’ ಗುಂಪಿನಲ್ಲಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.

ಇಲ್ಲಿ ಕ್ಯಾಮರೂನ್ ಸೋತಿದ್ದರೆ, ಎರಡನೇ ಸ್ಥಾನದಲ್ಲಿರುವ ಸ್ವಿಟ್ಜರ್ಲೆಂಡ್ ತಂಡವು ಅಗ್ರಸ್ಥಾನದಲ್ಲಿರುವ ಬ್ರೆಜಿಲ್ ತಂಡವನ್ನು ಸೋಲಿಸುವುದನ್ನು ಎದುರುನೋಡಬೇಕಿತ್ತು. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಕ್ಯಾಮರೂನ್‌ಗೆ ಕಠಿಣ ಸವಾಲು ಎದುರಾಗಿದ್ದು, ಬ್ರೆಜಿಲ್ ವಿರುದ್ಧ ಆಡಬೇಕಿದೆ. 1990ರ ನಂತರ ಗುಂಪು ಹಂತ ದಾಟಿ ಮುನ್ನಡೆಯುವ ಅವಕಾಶ ಕ್ಯಾಮರೂನ್ ತಂಡಕ್ಕಿದೆ.

ಈ ಪಂದ್ಯದಲ್ಲಿ ಉಭಯ ತಂಡಗಳ ತಲಾ ಇಬ್ಬರು ಆಟಗಾರರು ಹಳದಿ ಕಾರ್ಡ್‌ ಪಡೆದರು.

ಕೋಚ್‌ ರಿಗೊಬರ್ಟ್‌ ಸಾಂಗ್ ಜೊತೆಗಿನ ಭಿನ್ನಾಭಿಪ್ರಾಯದ ಕಾರಣ ಕ್ಯಾಮರೂನ್ ತಂಡದ ಮೊದಲ ಆಯ್ಕೆಯ ಗೋಲ್‌ಕೀಪರ್ ಆ್ಯಂಡ್ರೆ ಒನಾನಾ ಈ ಪಂದ್ಯದಲ್ಲಿ ಆಡಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.ಗೋಲುಗಳ ವಿವರ

ಕ್ಯಾಮರಾನ್– 3

ಜೀನ್‌ ಚಾರ್ಲ್ಸ್‌ ಕ್ಯಾಸ್ಟೆಲ್ಲೆಟೊ (29ನೇ ನಿ.)

ವಿನ್ಸೆಂಟ್‌ ಅಬೂಬಕ್ಕರ್ (63ನೇ ನಿ.)

ಎರಿಕ್ ಮ್ಯಾಕ್ಸಿಮ್‌ ಚುಪೊ ಮೊಟಿಂಗ್‌ (66ನೇ ನಿ.)

ಸರ್ಬಿಯಾ–3

ಸ್ಟ್ರಾಹಿಂಜಾ ಪಾವ್ಲೊವಿಚ್‌ (45+1ನೇ ನಿ.)

ಸೆರ್ಗೆಜ್‌ ಮಿಲಿಂಕೊವಿಚ್‌ ಸ್ಯಾವಿಚ್‌ (45+3ನೇ ನಿ.)

ಅಲೆಕ್ಸಾಂಡರ್ ಮಿಟ್ರೊವಿಚ್‌ (53ನೇ ನಿ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.