ADVERTISEMENT

ಉರುಗ್ವೆ ಕ್ಲಬ್‌ಗೆ ಬಿಜಯ್ ಚೆಟ್ರಿ

ಪಿಟಿಐ
Published 27 ಮಾರ್ಚ್ 2024, 20:45 IST
Last Updated 27 ಮಾರ್ಚ್ 2024, 20:45 IST
ಬಿಜಯ್‌ ಚೆಟ್ರಿ
ಬಿಜಯ್‌ ಚೆಟ್ರಿ   

ಚೆನ್ನೈ: ಭಾರತದ ಉದಯೋನ್ಮುಖ ಫುಟ್‌ಬಾಲ್ ಆಟಗಾರ ಬಿಜಯ್ ಚೆಟ್ರಿ ಅವರು ಉರುಗ್ವೆಯ ಫುಟ್‌ಬಾಲ್ ಕ್ಲಬ್ ಕೊಲೊನ್ ಎಫ್‌ಸಿಗೆ ವರ್ಷಾಂತ್ಯದವರೆಗೆ ಸೇರಿಕೊಂಡಿದ್ದಾರೆ ಎಂದು ಇಂಡಿಯನ್ ಸೂಪರ್ ಲೀಗ್‌ನ ಕ್ಲಬ್ ಚೆನ್ನೈಯಿನ್ ಎಫ್‌ಸಿ ಬುಧವಾರ ತಿಳಿಸಿದೆ.

ಈ ಮೂಲಕ ಲ್ಯಾಟಿನ್ ಅಮೆರಿಕನ್ ಕ್ಲಬ್‌ಗೆ ಸಹಿ ಹಾಕಿದ ಮೊದಲ ಭಾರತದ ಫುಟ್‌ಬಾಲ್ ಆಟಗಾರ ಎಂಬ ಹಿರಿಮೆಗೆ ಬಿಜಯ್‌ ಪಾತ್ರವಾದರು.

ಮಾಂಟೆವಿಡಿಯೊ ಮೂಲದ ಕೊಲೊನ್‌ ಎಫ್‌ಸಿಯು ಸೆಗುಂಡಾ ಡಿವಿಷನ್ ಪ್ರೊಫೆಷನಲ್‌ನಲ್ಲಿ ಸ್ಪರ್ಧಿಸುತ್ತಿದೆ. ಅಲ್ಲಿ ಆ ತಂಡವು ಪ್ರಸ್ತುತ ‘ಬಿ’ ಗುಂಪಿನ ಪಾಯಿಂಟ್‌ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ADVERTISEMENT

‘ನನ್ನ ವೃತ್ತಿಜೀವನದ ಹೊಸ ಸವಾಲಿಗೆ ತೆರೆದುಕೊಳ್ಳಲು ತುಂಬಾ ಉತ್ಸುಕನಾಗಿದ್ದೇನೆ. ನನ್ನ ಮೇಲೆ ವಿಶ್ವಾಸವಿಟ್ಟ ತಂಡದ ನಂಬಿಕೆ ಉಳಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ನಾನು ಅಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಭವಿಷ್ಯದಲ್ಲಿ ಇನ್ನಷ್ಟು ಭಾರತೀಯರಿಗೆ ವಿದೇಶಿ ಮಾರುಕಟ್ಟೆಯಲ್ಲಿ ಅವಕಾಶದ ಬಾಗಿಲು ತೆರೆಯಲಿದೆ ಎಂಬುದರ ಅರಿವಿದೆ’ ಎಂದು ಬಿಜಯ್‌ ಪ್ರತಿಕ್ರಿಯಿಸಿದ್ದಾರೆ.

ಮಣಿಪುರದ 22 ವರ್ಷದ ಬಿಜಯ್ ಅವರು 2016ರಲ್ಲಿ ಶಿಲ್ಲಾಂಗ್ ಲಾಜಾಂಗ್‌ನೊಂದಿಗೆ ತಮ್ಮ ಫುಟ್‌ಬಾಲ್ ವೃತ್ತಿಜೀವನವನ್ನು ಆರಂಭಿಸಿದರು. 2018ರಲ್ಲಿ ಇಂಡಿಯನ್ ಆರೋಸ್‌ನೊಂದಿಗೆ ಕಾಣಿಸಿಕೊಂಡರು. ಅವರು 2023ರಲ್ಲಿ ಚೆನ್ನೈಯಿನ್ ಎಫ್‌ಸಿ ತಂಡಕ್ಕೆ ಸೇರುವ ಮೊದಲು ಚೆನ್ನೈ ಸಿಟಿ, ರಿಯಲ್ ಕಾಶ್ಮೀರ್ ಮತ್ತು ಶ್ರೀನಿಧಿ ಡೆಕ್ಕನ್‌ನಂತಹ ಕ್ಲಬ್‌ಗಳಿಗಾಗಿ ಆಡಿದ್ದಾರೆ.

‘ವಿಶ್ವದ ಫುಟ್‌ಬಾಲ್ ದಿಗ್ಗಜ ರಾಷ್ಟ್ರಗಳಲ್ಲಿ ಒಂದಾಗ ಉರುಗ್ವೆಯ ತಂಡಕ್ಕೆ ಬಿಜಯ್ ಅವರನ್ನು ಕಳುಹಿಸಲು ತುಂಬಾ ಹೆಮ್ಮೆಯಾಗುತ್ತಿದೆ’ ಎಂದು ಚೆನ್ನೈಯಿನ್ ಎಫ್‌ಸಿಯ ಸಹ ಮಾಲೀಕರಾದ ವೀಟಾ ಡ್ಯಾನಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.